ತುಮಕೂರು : ಪಾಲಿಕೆ ಸಿಬ್ಬಂದಿಗೆ ಮಾಸ್ಕ್ ವಿತರಿಸಲು ಒತ್ತಾಯ!!!

ತುಮಕೂರು :

      ಮೂರನೇ ಹಂತದ ಕೋರೋನಾ ವೈರಸ್ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಸೋಮವಾರ ಕರೆದಿದ್ದ ತುಮಕೂರು ನಗರಪಾಲಿಕೆ ನಗರ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಸಭೆಯನ್ನು ಮುಂದೂಡಲಾಯಿತು.

      ನಗರ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಮಲ್ಲಿಕಾರ್ಜುನ್ಯ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಎಲ್ಲಡೆ ಕೋರೋನ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಪಾಲಿಕೆಯ ಸುಮಾರು 400 ಜನ ಸಿಬ್ಬಂದಿ ಹಾಗೂ 400 ಜನ ಪೌರಕಾರ್ಮಿಕರು ಸೇರಿದಂತೆ 800 ಜನರಿಗೆ ಪಾಲಿಕೆ ವತಿಯಿಂದ ಎನ್.91 ಮಾಸ್ಕ್ ಮತ್ತು ಅಗತ್ಯ ಮುಂಜಾಗ್ರತಾ ಸಲಕರಣೆಗಳನ್ನು ವಿತರಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿದರು.

      ಕೋರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಪಾಲಿಕೆ ಪಿ.ಕೆ.ಎಸ್.ಗಳು ಹಗಲಿರುಳೆನ್ನದೆ ಸ್ವಚ್ಚತೆಯಲ್ಲಿ ತೊಡಗಿದ್ದಾರೆ.ಅವರು ಮತ್ತಷ್ಟು ಹುರುಪಿನಿಂದ ಕೆಲಸ ಮಾಡುವಂತೆ ಮಾಡಬೇಕಾದರೆ ಅವರಿಗೆ ಮುಂಜಾಗ್ರತಾ ಸಲಕರಣೆಗಳನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಪಾಲಿಕೆ ಮೇಯರ್‍ರವರು ಹಾಗೂ ಅಧಿಕಾರಿಗಳು ತಕ್ಷಣವೇ ಮಾಸ್ಕ್ ಮತ್ತು ಇನ್ನಿತರೇ ಅಗತ್ಯ ಸಲಕರಣೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

      ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಫರೀಧಾ ಬೇಗಂ ಪಾಲಿಕೆಯ ಆರೋಗ್ಯಾಧಿಕಾರಿಗಳೊಂದಿಗೆ ಮಾತನಾಡಿ ಒಂದೆರಡು ದಿನದಲ್ಲಿ ಪಾಲಿಕೆಯ ಸಿಬ್ಬಂದಿಗೆ ಮಾಸ್ಕ್ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಲ್ಲದೆ,ಈ ಸಂಬಂಧ ಸಭೆಯಲ್ಲಿ ಹಾಜರಿದ್ದ ಆರೋಗ್ಯಾಧಿಕಾರಿ ಹಾಗೂ ಉಪ ಆಯುಕ್ತರಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.

      ಈ ವೇಳೆ ಪಾಲಿಕೆಯ ನಗರ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

(Visited 5 times, 1 visits today)

Related posts