ತುಮಕೂರು


ಕರ್ನಾಟಕದ ಜನತೆ ಬದಲಾವಣೆ ಬಯಸುತಿದ್ದು, ಇದನ್ನು ಸಕಾರಗೊಳ್ಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಬ್ಲಾಕ್ ಮತ್ತು ಬೂತ್ ಹಂತದಲ್ಲಿ ಮನೆ ಮನೆಗೆ ತೆರಳಿ ಜನರ ಮನವೊಲಿಸುವ ಕೆಲಸ ಮಾಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಉಸ್ತುವಾರಿ ಮಯೂರ ಜಯಕುಮಾರ್ ತಿಳಿಸಿದ್ದಾರೆ.
ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಹೆಚ್.ಎಂ.ಎಸ್.ಕಾಲೇಜು ಆವರಣದಲ್ಲಿ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡುತಿದ್ದ ಅವರು,ರಾಜ್ಯದಲ್ಲಿರುವ ಜನವಿರೋಧಿ, ಶೇ40ರ ಕಮಿಷನ್ ಆಧಾರಿತ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಜನತೆ ಬಯಸಿದ್ದು,ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಸಜ್ಜಾಗಬೇಕೆಂದರು.
ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ,ಇಂದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಕಾಲವಿರಬಹುದು. ಆದರೆ ಎಂದಿಗೂ ಕಾರ್ಯಕರ್ತರು ಎದೆಗುಂದಬಾರದು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಂತೆ ಮಾಡಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಪಕ್ಷದ ಹೈಕಮಾಂಡ್ ಸೂಚನೆಯಂತೆ ಎಲ್ಲಾ ಬ್ಲಾಕ್‍ಗಳಲ್ಲಿಯೂ ಪಕ್ಷದ ಕಚೇರಿ ತೆರೆಯಲಾಗುತ್ತಿದೆ.ಅದರ ಭಾಗವಾಗಿ ಇಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಚೇರಿ ಆರಂಭಗೊಂಡಿದೆ.ಪ್ರತಿಯೊಬ್ಬ ಬೂತ ಮಟ್ಟದ ಸಹಾಯಕನು ತಮ್ಮ ಬೂತ್‍ನಲ್ಲಿ ಡಿಲೀಟ್ ಆಗಿರುವ ಮತದಾರರನ್ನು ಪತ್ತೆ ಹೆಚ್ಚಿ, ಡಿಸೆಂಬರ್ 08ರೊಳಗೆ ಸೂಕ್ತ ದಾಖಲೆಗಳೊಂದಿಗೆ ಅಕ್ಷೇಪಣೆ ಸಲ್ಲಿಸುವ ಮೂಲಕ ಮತದಾರರ ಹಕ್ಕು ದೊರೆಯುವಂತೆ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ತುಮಕೂರು ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸುವ ಮೂಲಕ ಹೊಸ ಶಕ್ತಿ ತುಂಬಿದೆ.ವಾಮ ಮಾರ್ಗದ ಮೂಲಕ ಗೆಲುವ ಕನಸು ಕಾಣುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕೆಂದರು.
ತುಮಕೂರು ನಗರ ಕ್ಷೇತ್ರದ ಉಸ್ತುವಾರಿ ಕೇಶವಮೂರ್ತಿ, ಮಾಜಿ ಅಧ್ಯಕ್ಷರಾದ ಕೆಂಚಮಾರಯ್ಯ,ಮೇಯರ್ ಪ್ರಭಾವತಿ ಸುಧೀಶ್ವರ್, ಹೊನ್ನಗಿರಿಗೌಡ, ಗೀತಾರುದ್ರೇಶ್, ನಯಾಜ್ ಅಹಮದ್,ಗೀತಾರುದ್ರೇಶ್,ಫರ್ಜಾನಾ ಖಾನಂ, ರೆಡ್ಡಿ ಚಿನ್ನಯಲ್ಲಪ್ಪ, ಬಾಲಕೃಷ್ಣ, ವಾಲೆಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಸರ್ವಧರ್ಮ ಪ್ರಾರ್ಥನೆ ನಡೆಯಿತು.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಪ್ರಸ್ತುತ ಬಿಜೆಪಿ ಸರಕಾರದಿಂದ ಜನರಿಗೆ ಯಾವುದೇ ರೀತಿಯ ಅನುಕೂಲವಿಲ್ಲ. ಜಿ.ಎಸ್.ಟಿ, ಇನ್ನಿತರ ತೆರಿಗೆಗಳ ಮೂಲಕ ಸಾಕಷ್ಟು ಹಣ ವ್ಯಯಿಸುತಿದ್ದಾರೆ.ಆದರೆ ಅದರ ಬಹುಪಾಲು ರಾಜ್ಯದ ಅಭಿವೃದ್ದಿಗೆ ಬಳಕೆಯಾಗುತ್ತಿಲ್ಲ. ಬದಲಾಗಿ ಬಿಜೆಪಿ ಶಾಸಕರು, ಅವರ ಹಿಂಬಾಲಕರ ಜೇಬು ಸೇರುತ್ತಿದೆ. ಕಾಂಗ್ರೆಸ್ ಸರಕಾರವಿದ್ದಾಗ ಜಾರಿಗೆ ತಂದ ಅನೇಕ ಜನಪರ,ಬಡವರ ಪರ ಕಾರ್ಯಕ್ರಮಗಳು ರದ್ದಾಗಿವೆ.ಇಂದಿರಾ ಕ್ಯಾಂಟೀನ್‍ನಂತಹ ಯೋಜನೆ ರದ್ದಾಗಿರುವುದು ನಿಜಕ್ಕೂ ಈ ಸರಕಾರ ಯಾರ ಪರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಕೇವಲ ಕಚೇರಿ ಉದ್ಘಾಟಿಸಿದರೆ ಸಾಲದು, ಪ್ರತಿ ದಿನ ಬ್ಲಾಕ್ ಮತ್ತು ಬೂತ್ ಲೇವಲ್ ಕಾರ್ಯಕರ್ತರು ಕೂತು ಚರ್ಚೆ ನಡೆಸಿ,ಜನರ ಸಮಸ್ಯೆಗಳನಿಟ್ಟು ಚರ್ಚೆ ನಡೆಸಿ, ಜನರ ಮುಂದಿಡುವ ಕೆಲಸ ಮಾಡಬೇಕೆಂದು ಮಯೂರ ಜಯಕುಮಾರ್ ಸೂಚಿಸಿದರು.

(Visited 3 times, 1 visits today)