ತುಮಕೂರು :

      ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ಶಿರಾ ತಾಲ್ಲೂಕಿಗೆ ಭೇಟಿ ನೀಡಿ ತಾಲ್ಲೂಕಿನಾದ್ಯಂತ ಕೋವಿಡ್-19 ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

       ಉತ್ತರ ಕರ್ನಾಟಕದಿಂದ ವಲಸೆ ಬಂದಿರುವ ಕಾರ್ಮಿಕರಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಸುಮಾರು 100 ಜನಕ್ಕೆ ಆಶ್ರಯ ಕಲ್ಪಿಸಲಾಗಿದ್ದು, ಅವರಿಗೆ ಕೊರೋನಾ ವೈರಸ್ ಹರಡುವ ಬಗ್ಗೆ ಅರಿವು ಮೂಡಿಸಿ ಮನೋಸ್ಥೈರ್ಯ ತುಂಬಿದರು ಹಾಗೂ ಅವರಿಗೆ ಒದಗಿಸಲಾಗಿರುವ ಮೂಲಭೂತ ಸೌಲಭ್ಯಗಳ ಬಗ್ಗೆಯೂ ಪರಿಶೀಲನೆ ನಡೆಸಿ ದಿನನಿತ್ಯ ಬೇಕಾಗುವ ಅಗತ್ಯ ಸಾಮಗ್ರಿಗಳಾದ ಪೇಸ್ಟ್, ಸೋಪು, ಸ್ಯಾನಿಟರಿ ಪ್ಯಾಡ್ಸ್ ಹಾಗೂ ಬ್ರಷ್‍ಗಳನ್ನು ಸ್ಥಳದಲ್ಲಿಯೇ ವಿತರಿಸಿದರು. ಅವರಿಗೆ ಕುಡಿಯುವ ನೀರಿನ ಪೂರೈಕೆಗೆ ಮತ್ತು ಅವರು ತಂಗಿರುವ ಕೊಠಡಿ ಮತ್ತು ಶೌಚಾಲಯಗಳ ಸ್ವಚ್ಛತೆ ಕಾಪಾಡುವ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿರಾ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಅವರು ಹೊರರೋಗಿಗಳ ಚಿಕಿತ್ಸೆ ಕುರಿತು ಆಸ್ಪತ್ರೆ ವೈದ್ಯರೊಂದಿಗೆ ಚರ್ಚಿಸಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಸ್ವರಕ್ಷಣೆ ಬಗ್ಗೆಯೂ ಸಹ ಗಮನಹರಿಸಿ ರಕ್ಷಣಾ ಪರಿಕರಗಳೊಂದಿಗೆ ಚಿಕಿತ್ಸೆ ನೀಡುವಂತೆ ಸಲಹೆ ಮಾಡಿದರು.

      ನಿರಾಶ್ರಿತರಿಗೆ ಊಟ ತಯಾರಿಸುತ್ತಿರುವ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ನ್ಯಾಯಬೆಲೆ ಅಂಗಡಿಯಲ್ಲಿ ಗುಂಪುಗುಂಪಾಗಿ ಸಾಮಾಜಿಕ ಅಂತರ ಕಾಪಾಡದೆ ಪಡಿತರ ಪಡೆದುಕೊಳ್ಳುತ್ತಿರುವ ಜನರನ್ನು ಕುರಿತು ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ಭವಾನಿ ನಗರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವ ಕಂಟೈನ್ಮೆಂಟ್ ಸ್ಥಳಗಳಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸಲು ತೊಂದರೆಯಾಗುತ್ತಿರುವುದರಿಂದ ಪ್ರತ್ಯೇಕ ಸಿಬ್ಬಂದಿ ಬಳಸಿ ಆಹಾರ ವಿತರಿಸುವ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.

      ಬಂದಕುಂಟೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕೊರೋನಾ ವೈರಸ್ ಹರಡದಂತೆ ಗ್ರಾಮಪಂಚಾಯತಿ ಮತ್ತು ಗ್ರಾಮ ಮಟ್ಟದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಬಗ್ಗೆ ರಚಿಸಲಾಗಿರುವ ಕಾರ್ಯಪಡೆಯ ಸಭೆಯಲ್ಲಿ ಭಾಗವಹಿಸಿ ಕೋವಿಡ್-19 ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದರು.

     ಶಿರಾ ತಾಲ್ಲೂಕು ಪಂಚಾಯತಿಗೆ ಭೇಟಿ ನೀಡಿ, ಸ್ವಸಹಾಯ ಸಂಘಗಳಿಂದ ತಯಾರಿಸುತ್ತಿರುವ ಮುಖಗವುಸು(ಮಾಸ್ಕ್)ಗಳನ್ನು ಪರಿಶೀಲಿಸಿ ತಾ.ಪಂ. ಸಿಬ್ಬಂದಿಗಳಿಗೆ ವಿತರಿಸಿದರು ಹಾಗೂ ಹೆಚ್ಚಿನ ಮಾಸ್ಕ್ ತಯಾರಿಸಲು ಸೂಚಿಸಿದರು.

      ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ(ಅಭಿವೃದ್ಧಿ) ರಮೇಶ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್, ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 26 times, 1 visits today)