ತುಮಕೂರು


ಪರಿಶಿಷ್ಟ ಜಾತಿಯ ಶೇ 99 ಜಾತಿಗಳಿಗೆ ಮರಣ ಶಾಸನವಾಗಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಯಥಾವತ್ತು ಜಾರಿಗೆ ವಿರೋಧಿಸಿ ಮಾಡು,ಇಲ್ಲವೆ ಮಡಿ ಹೋರಾಟವನ್ನು ಮೀಸಲಾತಿ ಸಂರಕ್ಷಣಾ ವೇದಿಕೆ ವತಿಯಿಂದ 2023 ರ ಜನವರಿ 10 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ಬು ಹಮ್ಮಿಕೊಂಡಿದ್ದು, ಮೀಸಲಾತಿ ಪಡೆಯುತ್ತಿರುವ ಎಲ್ಲಾ ಜಾತಿಗಳ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರಮಹಾಸ್ವಾಮೀಜಿ ಕರೆ ನೀಡಿದ್ದಾರೆ
ನಗರದ ಭೋವಿ ಹಾಸ್ಟಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,ಕೊರಮ, ಕೊರಚ, ಲಂಬಾಣಿ,ಬೋವಿ ಸಮುದಾಯಗಳಿಗೆ ಶಾಪಗ್ರಸ್ತವಾಗಿರುವ ಸಂವಿಧಾನ ಬಾಹಿರ ನ್ಯಾ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು,ಹಾಗೆಯೇ ವರದಿಯನ್ನು ಬಹಿರಂಗ ಚರ್ಚೆಗೆ ತಂದು ಅದರ ಸಾಧಕ, ಭಾದಕಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಸರಕಾರದ ಅಂಕಿ ಅಂಶಗಳೇ ನೀಡಿರುವಂತೆ ಕಳೆದ 73 ವರ್ಷಗಳ ಮೀಸಲಾತಿಯಿಂದ ಪರಿಶಿಷ್ಟ ಜಾತಿಗಳು ಶೇ11ರಷ್ಟು ಬೆಳವಣಿಗೆ ಹೊಂದಬೇಕಿತ್ತು.ಆದರೆ ಅಭಿವೃದ್ದಿಯಾಗಿರುವುದು ಕೇವಲ ಶೇ03ರಷ್ಟು ಮಾತ್ರ. ಪರಿಸ್ಥಿತಿ ಹೀಗಿರುವಾಗ ಇನ್ನೂ ಮೀಸಲಾತಿಯಿಂದಲೇ ಹೊರಗಿಟ್ಟರೆ ನಮ್ಮ ಪಾಡು ಏನಾಗಬಹುದು ಎಂಬುದನ್ನು ನಾವೆಲ್ಲರೂ ಅಲೋಚಿಸಬೇಕಿದೆ.ಸದರಿ ವರದಿಯ ಬಗ್ಗೆ ಪರ-ವಿರೋಧಗಳು ನಡೆಯುತ್ತಿರುವ ಸಂದರ್ಭದಲ್ಲಿಯೂ ತರಾತುರಿಯಲ್ಲಿ ಜಾರಿಗೊಳಿಸುವ ಹುನ್ನಾರ ನಡೆದಿದೆ.ಹಾಗಾಗಿ ಜನವರಿ 10 ರಂದು ನಡೆಯುವ ಸಮಾವೇಶದಲ್ಲಿ ನಾವೆಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಿ,ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕಿದೆ ಎಂದು ಶ್ರೀಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ತಿಳಿಸಿದರು.
ಮೀಸಲಾತಿ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಮಾಕಳಿ ರವಿ ಮಾತನಾಡಿ,ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿರುವ ಲೋಪದೋಷಗಳ ಕುರಿತಂತೆ ನಮ್ಮ ಸಮುದಾಯದ ಸ್ವಾಮಿಜೀಗಳು,ಹಲವಾರು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ,ಅದನ್ನು ಮೀರಿ ವರದಿಯನ್ನು ಜಾರಿಗೆ ಮುಂದಾಗಿರುವುದು ಖಂಡನೀಯ.ಇದನ್ನು ವಿರೋಧಿಸಿ ಜನವರಿ 10 ರಂದು ಬೆಂಗಳೂರಿ ನಲ್ಲಿ ಕೈಗೊಂಡಿರುವ ಸಮಾವೇಶದ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ,ಜನರಲ್ಲಿ ಜಾಗೃತಿ ಮೂಡಿಸಿ,ಹೆಚ್ಚಿನ ಸಂಖ್ಯೆಯನ್ನು ಸೇರಿಸಿ, ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಾಗುತ್ತಿದೆ. ತಾವೆಲ್ಲರೂ ಸ್ವಯಂ ಪ್ರೇರಿತರಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮೀಸಲಾತಿ ಸಂರಕ್ಷಣಾ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ನಾಯಕ್ ಮಾತನಾಡಿ,1921ರಲ್ಲಿ ನಡೆದ ಮಿಲ್ಲರ್ ಆಯೋಗದ ವರದಿಯ ಪ್ರಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಹೊಲೆಯ, ಮಾದಿಗ,ಕೊರಮ, ಕೊರಚ, ಲಂಬಾಣಿ, ಬೋವಿ ಜಾತಿಗಳು ದಮನಿತ ಜಾತಿಗಳಾಗಿವೆ.ಅಲ್ಲದೆ ಸಂವಿಧಾನದಲ್ಲಿ ಎಲ್ಲಿಯೂ ಒಳಮೀಸಲಾತಿಗೆ ಅವಕಾಶ ಇಲ್ಲ ಎಂಬುದನ್ನು ಕೋಟಿ ಚನ್ನಯ್ಯ ವಿರುದ್ದ ಆಂಧ್ರಪ್ರದೇಶ ಕೇಸ್‍ನಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವೇ ತಿಳಿಸಿದೆ. ಹಾಗಿದ್ದೂ ಕೇಂದ್ರದಲ್ಲಿ ಸಮಾಜಿಕ ನ್ಯಾಯ ಸಬಲೀಕರಣ ಮಂತ್ರಿಯಾಗಿರುವ ಎ.ನಾರಾಯಣಸ್ವಾಮಿ,ದೋಷಪೂರಿತ, ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗಿರುವ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲೇಬೇಕು ಎಂಬ ಹುನ್ನಾರ ನಡೆಸುತ್ತಿವೆ.ಅಲ್ಲದೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೊ,ಲಂ.ಬೋ ಜಾತಿಗಳನ್ನು ಹೊರಗಿಡುವ ಷಡ್ಯಂತ್ರವನ್ನು ರೂಪಿಸಿದ್ದು, ಇದರ ವಿರುದ್ದ ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡುವ ಮೂಲಕ ನಮಗೆ ದಕ್ಕಿರುವ ಸಂವಿಧಾನ ಬದ್ದ ಹಕ್ಕನ್ನು ರಕ್ಷಿಸಿಕೊಳ್ಳೋಣ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಮುಖಂಡರಾದ ಊರುಕೆರೆ ಉಮೇಶ್,ಬಿಜೆಪಿ ಮುಖಂಡ ಓಂಕಾರ್,ಜಿಲ್ಲಾ ಬಂಜಾರ ಸಂಘದ ಕಾರ್ಯಾಧ್ಯಕ್ಷ ಜಯರಾಮ್,ಮುಖಂಡ ತಿಪ್ಪೇಶ್ ಆರ್.ನಾಯಕ್,ಶ್ರೀಧರ್,ಶ್ರೀನಿವಾಸಮೂರ್ತಿ,ಕುಮಾರ ನಾಯ್ಕ್, ಪಾಲಿಕೆಯ ಕೌನ್ಸಿಲರ್ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)