ತುಮಕೂರು


ಅನವಶ್ಯಕ ಭಾವನೆಗಳನ್ನು ನಿಗ್ರಹಿಸಿ, ಚಂಚಲತೆಯನ್ನು ಹೋಗಲಾಡಿಸಿಕೊಂಡು, ಮಾನಸಿಕ ಆರೋಗ್ಯ, ನಿರ್ಮಲ ಮನಸ್ಥಿತಿ ಮತ್ತು ಏಕಾಗ್ರತೆ ಕಾಪಾಡಿಕೊಂಡವರು ಸಾಧಕರಾಗುತ್ತಾರೆ. ಮನಸಿನ ಚಿಂತನೆಗಳು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ನಮ್ಮ ಆಲೋಚನೆಗಳ ಮೇಲೆ ನಿಗಾವಹಿಸಬೇಕು ಎಂದು ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ. ಲೋಕೇಶ್ ಬಾಬು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಲೈಂಗಿಕ ದೌರ್ಜನ್ಯ ತಡೆ ಘಟಕ, ಆಪ್ತ ಸಮಾಲೋಚನ ಘಟಕ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ ಹಾಗೂ ಮಹಿಳಾ ಸಬಲೀಕರಣ ಘಟಕ ಬುಧವಾರ ಆಯೋಜಿಸಿದ್ದ ‘ಮಾನಸಿಕ ಆರೋಗ್ಯ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಮಾನಸಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂಥ ಸಂಶೋಧನಾ ಕ್ಷಮತೆಯನ್ನು ರೂಢಿಸಿಕೊಳ್ಳಬೇಕು. ವೈಜ್ಞಾನಿಕ ಅರಿವು ಮತ್ತು ಚಿಂತನೆಯ ಮೂಲಕ ಅನಾಹುತಗಳನ್ನು ತಡೆಯಬಹುದು ಎಂದು ತಿಳಿಸಿದರು.
ನಮ್ಮ ದೇಹದ ಎಲ್ಲಾ ಅಂಗಗಳು ನಮ್ಮ ಆರೋಗ್ಯ ಮತ್ತು ಪ್ರಾಣರಕ್ಷಣೆ ಮಾಡಲು ಪ್ರತಿಕ್ಷಣವೂ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತವೆ. ನಾವು ಭಾವನೆಗಳನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ, ಅವನ್ನು ಗಮನಿಸಿ, ಸಕಾರಾತ್ಮಕ ಚಿಂತನೆಗಳ ಮೂಲಕ ನಿಗ್ರಹಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಬಿ. ಕರಿಯಣ್ಣ, ಮಾನಸಿಕ ರೋಗಕ್ಕೆ ವೈದ್ಯರ ಅವಶ್ಯಕತೆ ಇರುವುದಿಲ್ಲ. ನಮ್ಮ ಮಾನಸಿಕ ರೋಗಗಳಿಗೆ ನಾವೇ ವೈದ್ಯರಾಗಬೇಕು. ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ
ಮುಖ್ಯ. ಹಾಗಾಗಿ, ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಮನಸುಗಳನ್ನು ಕಟ್ಟೋಣ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವನಜಾಕ್ಷಿ ಈ., ಯಾವುದೇ ಮಾನಸಿಕ ರೋಗ ನಮ್ಮನ್ನು ಆಕ್ರಮಿಸದಂತೆ ಸದೃಢ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ರಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಗಿರಿಜಾ ಎಸ್., ಡಾ. ರೇಣುಕಾ ಹೆಚ್. ಆರ್., ಡಾ. ಶೋಭಾ ಸಿ., ಡಾ. ಸುಮಾದೇವಿ ಎಸ್. ಭಾಗವಹಿಸಿದ್ದರು.

(Visited 2 times, 1 visits today)