ತುಮಕೂರು


ಶಿಸ್ತು, ಸಂಯಮ, ತಾಳ್ಮೆ, ಹೋರಾಟ, ತ್ಯಾಗ, ಬಲಿದಾನದ ಮೇಲೆ ಭವ್ಯ ಭಾರತ ನಿಂತಿರುವುದು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೀವ ಕೊಟ್ಟ ವೀರರಿಂದ ಇಂದು ನಮ್ಮೆಲ್ಲರ ಜೀವನ ನೆಮ್ಮದಿಯಿಂದ ಸಾಗಿದೆ. ಪರಿಸರ ಸ್ನೇಹಿ ಹಾಗೂ ಆರೋಗ್ಯ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವರಾಜು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಶನಿವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಮೂರನೇ ವಿಶೇಷ ಉಪನ್ಯಾಸ ಮಾಲೆ ‘ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಣ್ಣ ಸಣ್ಣ ವಿಚಾರಗಳಿಂದಲೇ ದೇಶ ಕಟ್ಟಲು ಸಾಧ್ಯ. ಯುವಕನ ಮನೋಭಾವ, ಆಲೋಚನೆ ಇರುವ ಪ್ರತಿಯೊಬ್ಬನೂ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಬೇಕು. ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ಅಭಿವೃದ್ಧಿ ಭಾರತದ ಕನಸನ್ನು ನನಸಾಗಿಸಲು ನಿಯಮಗಳನ್ನು ಪಾಲಿಸಬೇಕು. ಆಗಷ್ಟೇ ದೇಶದ ಬೆಳವಣಿಗೆ ಸಾಧ್ಯ ಎಂದರು.
ಭಾರತ ತನ್ನ ಪ್ರಜೆಗಳಿಗೆ ಕೊಟ್ಟಿರುವ ಬಹುದೊಡ್ಡ ಉಡುಗೊರೆ ಸಂವಿಧಾನ. ಮಿಕ್ಕ ಎಲ್ಲಾ ಕೊಡುಗೆಗಳು ನಮ್ಮಿಂದಾಗಬೇಕು. ದಯೆ, ಉದಾರತೆಯ ಗುಣಗಳಿದ್ದರೆ ದೇಶ ಸುಭಿಕ್ಷ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಹಾಗೆಯೇ, ಯುವಕರಲ್ಲಿ ಪ್ರತಿಭಟಿಸುವ ಗುಣವಿರಬೇಕು. ತೀವ್ರತೆಗೆ ರಾಜಿಯಾಗದೆ ಭಾರತದ ಶಕ್ತಿಯನ್ನು ಅರಿತು ಮುನ್ನಡೆಯಬೇಕು ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ. ಪರಶುರಾಮ್ ಕೆ. ಜಿ. ಮಾತನಾಡಿ, ದೇಶವನ್ನು ಗೌರವಿಸುವ, ಆರಾಧಿಸುವ ಯುವ ಸಮೂಹದ ಅಗತ್ಯವಿದೆ. ಪ್ರತಿದಿನದ ಬೆಳವಣಿಗೆ ವಿವೇಕಾನಂದರ ಕನಸನ್ನು ನನಸು ಮಾಡುವಲ್ಲಿ ಭಾರತೀಯರಾದ ನಾವೆಲ್ಲರೂ ಇಡುವ ದಾಪುಗಾಲು ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಆಂತರಿಕ ಗುಣಮಟ್ಟ ಭರವಸಾ ಕೇಂದ್ರದ ನಿರ್ದೇಶಕ ಪ್ರೊ. ರಮೇಶ್ ಬಿ. ಮಾತನಾಡಿ, ಮೌಲ್ಯಗಳನ್ನು ತತ್ತ್ವಾದರ್ಶಗಳ ನೆಲೆಗಟ್ಟಿನಲ್ಲಿ ಪಾಲಿಸಬೇಕು. ಕರ್ತವ್ಯಹೀನರಾಗದೆ, ಕರ್ತವ್ಯಪೂರ್ಣರಾಗಬೇಕು. ಪ್ರಾಮಾಣಿಕತೆ ಬದುಕಿನಲ್ಲಿ ದೊಡ್ಡ ಆದರ್ಶವಾದಲ್ಲಿ ಉತ್ತಮ ಚಾರಿತ್ರ್ಯ ನಿರ್ಮಾಣ ಖಂಡಿತ ಎಂದರು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ. ಚೇತನ್ ಪ್ರತಾಪ್ ಕೆ. ಎನ್., ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಭೂಷಣ್ ಕುಮಾರ್ ಸಿ. ಎ. ಭಾಗವಹಿಸಿದ್ದರು.

(Visited 2 times, 1 visits today)