ತುಮಕೂರು


ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವಂತೆ ವೈದ್ಯರ ಮೇಲೆ ಒತ್ತಡ ತರುವುದು ಶಿಕ್ಷಾರ್ಹ ಅಪರಾಧವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ ತಿಳಿಸಿದರು.
ಇತ್ತೀಚೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗರ್ಭಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ವಯ ಗರ್ಭಪೂರ್ವ ಭ್ರೂಣಪತ್ತೆ ಮಾಡುವುದು ಕಂಡು ಬಂದಲ್ಲಿ ಅಂತಹ ಸ್ಕ್ಯಾನಿಂಗ್ ಸೆಂಟರ್‍ಗಳ ಪರವಾನಗಿ ರದ್ದುಪಡಿಸುವುದಲ್ಲದೆ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಭ್ರೂಣಪತ್ತೆ ಮಾಡಲು ವೈದ್ಯರ ಮೇಲೆ ಒತ್ತಡ ತರುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಸೂಕ್ತ ಕ್ರಮ ವಹಿಸಲಾಗುವುದೆಂದು ಸಭೆಗೆ ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ: ರೇಖಾ ಮಾತನಾಡಿ, ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯ ಹಾಗೂ ಚರ್ಚೆಗಳ ಬಗ್ಗೆ ಸಲಹಾ ಸಮಿತಿ ಸದಸ್ಯರ ಗಮನಕ್ಕೆ ತಂದರು.
ಸಭೆಯಲ್ಲಿ ಪಿಸಿ&ಪಿಎನ್‍ಡಿಟಿ ಕಾಯ್ದೆಯನ್ವಯ 3 ಹೊಸ ಸ್ಕ್ಯಾನಿಂಗ್ ಕೇಂದ್ರಗಳ ನೋಂದಣಿ, 1 ಸ್ಕ್ಯಾನಿಂಗ್ ಕೇಂದ್ರದ ಪರವಾನಗಿ ನವೀಕರಣ ಹಾಗೂ 4 ಸ್ಕ್ಯಾನಿಂಗ್ ವೈದ್ಯರನ್ನು ಎಂಪ್ಯಾನಲ್ ಮಾಡುವ ಸಂಬಂಧ ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಜಿಲ್ಲಾಸ್ಪತ್ರೆಯ ಸ್ತ್ರೀರೋಗತಜ್ಞ ಡಾ: ಲೋಕೇಶ್ ರೆಡ್ಡಿ ಮಾತನಾಡಿ, ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‍ಗೆ ವಿಧಿಸಲಾಗುವ ಶುಲ್ಕದ ದರದ ಪಟ್ಟಿಯನ್ನು ಫಲಕದಲ್ಲಿ ಪ್ರದರ್ಶಿಸುವ ಬಗ್ಗೆ ಎಲ್ಲಾ ಸ್ಕ್ಯಾನಿಂಗ್ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಸಮರ್ಥ ಫೌಂಡೇಶನ್ ಪ್ರತಿನಿಧಿ ರಾಣಿ ಚಂದ್ರಶೇಖರ್ ಮಾತನಾಡಿ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನ್ಯೂನ್ಯತೆಗಳನ್ನು ಪರಿಶೀಲಿಸಲು ಕ್ರಮವಹಿಸಬೇಕೆಂದು ಸಮಿತಿಗೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞೆ ಡಾ: ಮುಕ್ತಾಂಬ, ಆರೋಗ್ಯ ಇಲಾಖೆಯ ಅಧೀಕ್ಷಕ ರಂಗನಾಥ, ಮಮತ, ದೀಕ್ಷಾ, ಮತ್ತಿತರರಿದ್ದರು.

(Visited 3 times, 1 visits today)