ತುಮಕೂರು


ಬ್ರಹ್ಮಜ್ಞಾನ ಹೊಂದಿದ್ದ ಸವಿತಾ ಮಹರ್ಷಿಗಳು ಹಿಂದೂ ಧರ್ಮದ ಆಧಾರ ಸ್ತಂಭಗಳಂತಿರುವ ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವನ್ನು ರಚಿಸಿದ್ದಾರೆ. ಸಾಮ ಎಂದರೆ ಸಂಗೀತ ಹಾಗೂ ವೇದ ಎಂದರೆ ಜ್ಞಾನ ಎಂಬ ಅರ್ಥ ಇರುವುದರಿಂದ ಸಾಮ ವೇದವು ಸಂಗೀತ ಜ್ಞಾನದ ಭಂಡಾರವಾಗಿದೆ ಎಂದು ತಹಶೀಲ್ದಾರ್ ಸಿದ್ದೇಶ್ ತಿಳಿಸಿದರು.
ನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತುಮಕೂರು ಜಿಲ್ಲಾ ಸವಿತಾ ಸಮಾಜದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಸವಿತಾ ಮಹರ್ಷಿ ಅವರ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಭಾರತದ ಹಲವು ಭಾಗಗಳಲ್ಲಿ ಸವಿತಾ ಸಮಾಜ ಎಂಬ ಹೆಸರಿನಿಂದ ಕರೆಯುವ ಕ್ಷೌರಿಕ (ನಾಯಿಂದ) ಜನಾಂಗದ ಮೂಲಪುರುಷ ಸವಿತಾ ಮಹರ್ಷಿ. ಸವಿತಾ ಎಂಬ ಪದದ ಅರ್ಥ ವಿಷ್ಣು ಸಹಸ್ರನಾಮದ ಪ್ರಕಾರ ಸಕಲ ಜಗತ್ತನ್ನು ರಕ್ಷಿಸಿ ನಡೆಸುವನು ಎಂದರ್ಥ. ಪುರಾಣದ ಪ್ರಕಾರ ಒಮ್ಮೆ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು, ಶಿವ, ) ಜತೆಗೆ ಯಜ್ಞ ಮಾಡುವಾಗ ಶಿವನ ಅತಿಯಾಗಿ ಬೆಳೆದ ಕೂದಲುಗಳು ಅಗ್ನಿಗೆ ತಾಗಿ ಅಶುಚಿಗೊಳ್ಳುತ್ತವೆ. ಆಗ ಪಕ್ಕದಲ್ಲಿದ್ದ ಪಾರ್ವತಿ ದೇವಿಯ ಸಲಹೆಯಂತೆ ಶಿವನು ತನ್ನ ಬಲಗಣ್ಣಿನಿಂದ ಕ್ಷೌರಿಕರ ಮೂಲ ಪುರುಷರಾದ ಸವಿತಾ ಮಹರ್ಷಿಯನ್ನು ಪರಿಕರಗಳ ಪೆಟ್ಟಿಗೆ (ಹಡಪ) ಯೊಂದಿಗೆ ಸೃಷ್ಠಿ ಮಾಡುತ್ತಾನೆ. ಸವಿತಾ ಮಹರ್ಷಿಯು ಶಿವನ ಅಯಷ್ಕರ್ಮವನ್ನು ಪೂರೈಸಿ ಶಿವನನ್ನು ತೃಪ್ತಿ ಪಡಿಸುತ್ತಾರೆ ಎಂದರು.
ಮಹರ್ಷಿಯ ಸೇವೆಯನ್ನು ಪಡೆದು ಸಂತ್ರುಪ್ತನಾದ ಶಿವನು ಮಹರ್ಷಿಯನ್ನು ಅಶೀರ್ವದಿಸಿ ಸಂಗಿತ ಸಾದನಗಳನ್ನು ಬಹುಮಾನವಾಗಿ ನೀಡುತ್ತಾನೆ. ನಂತರ ಬ್ರಹ್ಮನು ರೋಗಗಳನ್ನು ನಿವಾರಿಸುವ ವರವನ್ನು ನೀಡುತ್ತಾನೆ. ನಂತರ ಇತರೆ ದೇವರಿಗೂ ಅಯಷ್ಕರ್ಮ ಪೂರೈಸಿದ ಸವಿತಾ ಮಹರ್ಷಿಯು ಲೋಕ ಕಲ್ಯಾಣಕ್ಕಾಗಿ ಈ ಕಾಯಕವನ್ನೇ ಮುಂದುವರಿಸಿಕೊಂಡು ಬರುತ್ತಾರೆ ಮತ್ತು ಸೂರ್ಯನಿಂದ ಸವಿತಾ ಮಹರ್ಷಿಗಳು ಉದಯಿಸಿದ್ದರಿಂದ ಸೂರ್ಯವಂಶ ಸಂಭೂತರೆಂದು ಸೂರ್ಯನ ಒಂದು ಹೆಸರಾದ ಸವಿತ್ರು ಎಂಬ ಪದದಿಂದ ಮಹರ್ಷಿಗಳನ್ನು ಸವಿತಾ ಮಹರ್ಷಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹೆಚ್. ಮಂಜೇಶ್ ಮಾತನಾಡಿ, ಸರ್ಕಾರವು ಪ್ರತಿ ವರ್ಷವು ರಥಸಪ್ತಮಿಯಂದು ಸವಿತಾ ಮಹರ್ಷಿಗಳ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮವನ್ನಾಗಿ ಆಚರಣೆ ಮಾಡುತ್ತಿರುವುದು ಅಭಿನಂದನೀಯ ಎಂದರು.
ಅತ್ಯಂತ ಹಿಂದುಳಿದ ನಮ್ಮ ಜನರನ್ನು ಹಾಗೂ ಜನಾಂಗವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಇಂತಹ ಆಚರಣೆಗಳು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕರಾದ ಡಿ.ವಿ. ಸುರೇಶ್‍ಕುಮಾರ್ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ, ಖಜಾಂಚಿ ಮೇಲಾಕ್ಷಪ್ಪ, ವಿಭಾಗೀಯ ಕಾರ್ಯದರ್ಶಿ ಎನ್ ಹರೀಶ್, ಎನ್ ನಾಗೇಂದ್ರಕುಮಾರ್, ಸುಬ್ರಮಣ್ಯ, ಟಿ.ಆರ್. ಬಸವರಾಜು, ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ.ಆರ್. ರಾಜೇಗೌಡ, ಎನ್. ರಮೇಶ್, ಎಸ್.ಎನ್. ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

(Visited 12 times, 1 visits today)