ತುಮಕೂರು:

      ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿರುವ ಶ್ರೀ ಹಂಚಾಟೆ ಸಂಜೀವ್ ಕುಮಾರ್ ಅವರು ತುಮಕೂರು ನಗರದ ಹೊರವಲಯದಲ್ಲಿ ವಾಸವಾಗಿರುವ 32 ನಿರಾಶ್ರಿತ ಹಕ್ಕಿ-ಪಿಕ್ಕಿ ಬಡ ಕುಟುಂಬಗಳಿಗೆ ಅಗತ್ಯ ಪಡಿತರಗಳನ್ನು ವಿತರಿಸಿದರು.

      ಅವರು ಇಂದು ಅರಕೆರೆ ಕೇಂದ್ರೀಯ ವಿದ್ಯಾಲಯದ ಬಳಿಯಿರುವ ಹಕ್ಕಿ-ಪಿಕ್ಕಿ ಜನಾಂಗ ವಾಸಿಸುತ್ತಿರುವ ಗುಡಿಸಲುಗಳಿಗೆ ಭೇಟಿ ನೀಡಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು.

      ಈ ಸಂದರ್ಭದಲ್ಲಿ ಜನಾಂಗದ ಮುಖಂಡರಾಗಿರುವ ರವಿಕುಮಾರ್ ತಮ್ಮ ಸಮಸ್ಯೆಗಳ ಕುರಿತು ನ್ಯಾಯಾಧೀಶರಲ್ಲಿ ನಿವೇದಿಸಿಕೊಂಡರು. ಕಳೆದ 5-6ವರ್ಷಗಳಿಂದ ಈ ಗುಡಿಸಲುಗಳಲ್ಲಿ 130 ಜನರು ವಾಸವಾಗಿದ್ದು, ಹಿಂದಿನ ಜಿಲ್ಲಾಧಿಕಾರಿಗಳಾದ ಮೋಹನ್‍ರಾಜ್ ಅವರು ನಮಗೆ ಈ ಜಾಗವನ್ನು ಮಂಜೂರು ಮಾಡಿದ್ದು, ಆದರೆ ಮನೆಗಳನ್ನು ಕಟ್ಟಿಸಿಕೊಡುವ ವ್ಯವಸ್ಥೆ ಆಗಿರುವುದಿಲ್ಲ. ವಿದ್ಯುತ್ ಸಂಪರ್ಕವಿಲ್ಲ ಹಾಗೂ ಯಾವುದೇ ಮೂಲಭೂತ ಸೌಕರ್ಯವಿರುವುದಿಲ್ಲ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ಸಂಚಾರ ಮಾಡುತ್ತಿದ್ದು, ಮಕ್ಕಳು ಮತ್ತು ಮಹಿಳೆಯರು ಪ್ರಾಣಿಗಳನ್ನು ನೋಡಿ ಭಯಭೀತರಾಗುತ್ತಾರೆಂದು ಅಳಲು ತೋಡಿಕೊಂಡರು.

      ನ್ಯಾಯಾಧೀಶರು ಸರ್ಕಾರದಿಂದ ನೀಡಿರುವ ಮೂಲಭೂತ ನಾಗರಿಕ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಪಡಿತರ ಚೀಟಿ ನೀಡುವುದಾಗಿ ಹೇಳಿದ್ದಾರೆ ಹೊರತು ಈವರೆವಿಗೂ ಪಡಿತರ ಚೀಟಿ ನೀಡಿರುವುದಿಲ್ಲ ಹಾಗೂ ಪಡಿತರವೂ ಸಹ ವಿತರಣೆಯಾಗುತ್ತಿಲ್ಲ. ಎಲ್ಲರಿಗೂ ಮತದಾರರ ಗುರುತಿನ ಚೀಟಿ, ನಿವೇಶನಗಳ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ರವಿಕುಮಾರ್ ನ್ಯಾಯಾಧೀಶರಿಗೆ ತಿಳಿಸಿದರು. 

      ಇಲ್ಲಿರುವ ಎಲ್ಲಾ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ ಮತ್ತು ದಿನನಿತ್ಯದ ಜೀವನಕ್ಕಾಗಿ ಏನು ಕಸುಬು ಮಾಡುತ್ತಿದ್ದೀರಿ ಎಂದು ಕೇಳಿದಾಗ, ಗ್ರಾಮಗಳಿಗೆ ಹೋಗಿ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುವುದು ಹಾಗೂ ಪ್ಲಾಸ್ಟಿಕ್ ಹೂವಿನ ಹಾರಗಳನ್ನು ತಯಾರು ಮಾಡಿ ಮಾರಾಟ ಮಾಡುವ ಕೆಲಸದಿಂದ ಜೀವನ ಸಾಗಿಸುತ್ತಿದ್ದೇವೆಂದು ಹಕ್ಕಿ-ಪಿಕ್ಕಿ ಜನಾಂಗದ ಮಹಿಳೆಯರು ತಿಳಿಸಿದರು. ಬಡವರಿಗೆ ಹಾಗೂ ನಿರ್ಗತಿಕರಿಗೆ ವಿತರಿಸಲಾಗುತ್ತಿರುವ ಹಾಲು ಈ ಭಾಗದ ನಮಗೆ ಪೂರೈಕೆಯಾಗುತ್ತಿಲ್ಲವೆಂದು ಅವರು ನ್ಯಾಯಾಧೀಶರ ಗಮನಕ್ಕೆ ತಂದರು.

      ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿರುವ ಶ್ರೀ ಹಂಚಾಟೆ ಸಂಜೀವ್ ಕುಮಾರ್ ಅವರ ನೇತೃತ್ವದಲ್ಲಿ ಎಲ್ಲಾ ನ್ಯಾಯಾಧೀಶರುಗಳು ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಕೈಜೋಡಿಸಿ ಈ ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದರು.

      ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿರುವ ನಾಗೇಶ್, ಹೆಚ್ಚುವರಿ ಪ್ರಿನ್ಸಿಪಲ್ ನ್ಯಾಯಾಧೀಶರಾಗಿರುವ ಪುಟ್ಟರಂಗಶೆಟ್ಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿರುವ ಶ್ರೀ ರಾಘವೇಂದ್ರ ಶೆಟ್ಟಿಗಾರ್, ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರಾದ ಸಿ.ಹೆಚ್. ರಾಮಕೃಷ್ಣಯ್ಯ, ಉಪ ನಿರೀಕ್ಷಕರಾದ ಎಂ.ಬಿ.ಲಕ್ಷ್ಮಯ್ಯ ಹಾಗೂ ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 15 times, 1 visits today)