ತುಮಕೂರು


ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರದ 2023ನೇ ಸಾಲಿನ ಜಾತ್ರಾ ಕಾರ್ಯಕ್ರಮ ಮಾರ್ಚ್ 21, 2023ರಿಂದ ಪ್ರಾರಂಭಗೊಂಡು ಏಪ್ರಿಲ್ 6ರವರೆಗೆ ಜರುಗಲಿದ್ದು, ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಇಲಾಖಾ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಾತ್ರಾ ಕಾರ್ಯಕ್ರಮದ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಮುಖವಾಗಿ ಜಾತ್ರೆಗೆ ಬರುವ ಜಾನುವಾರುಗಳಿಗೆ ಸೋಂಕು ರೋಗ ಬಾರದಂತೆ ಪಶುಪಾಲನಾ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾತ್ರೆಗೆ ಆಗಮಿಸುವ ರಾಸುಗಳಿಗೆ ಜಾತ್ರೆಗೆ ಮುನ್ನ 15 ದಿನಗಳ ಹಿಂದೆ ಲಸಿಕೆ ಹಾಕಿರುವ ಪ್ರಮಾಣ ಪತ್ರ ಪಡೆಯಬೇಕು ಮತ್ತು ಉತ್ತಮ ರಾಸುಗಳಿಗೆ ಬಹುಮಾನ ನೀಡುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯನ್ನು ರಚಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಜಾತ್ರಾ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಶಿಸ್ತು ಪರಿಪಾಲನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಮತ್ತು ಸೂಕ್ತ ಸಂಚಾರ ವ್ಯವಸ್ಥೆ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಮಾರ್ಚ್ 28, 2023ರಂದು ಬ್ರಹ್ಮ ರಥೋತ್ಸವ ನಡೆಯಲಿದ್ದು, ರಥದ ದೃಢತೆ ಬಗ್ಗೆ ಲೋಕೋಪಯೋಗಿ ಇಲಾಖೆಯವರು ದೃಢೀಕರಣ ಪತ್ರ ಸಲ್ಲಿಸುವಂತೆ ಸೂಚಿಸಿದರು.
ಬೆಸ್ಕಾಂ ಇಲಾಖೆ ವತಿಯಿಂದ ಜಾತ್ರೆಯ ಸಮಯದಲ್ಲಿ ನಿರಂತರ 3 ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರಮುಖವಾಗಿ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆಸ್ಪತ್ರೆ ಪ್ರಾರಂಭಿಸುವಂತೆ ಮತ್ತು ತುರ್ತು ಚಿಕಿತ್ಸಾ ವಾಹನದೊಂದಿಗೆ ಅಗತ್ಯ ಔಷಧಿಗಳೊಂದಿಗೆ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಿದರು.
ಅಗ್ನಿಶಾಮಕ ಇಲಾಖೆಯವರು ಜಾತ್ರಾ ವೇಳೆಯಲ್ಲಿ ನುರಿತ ಸಿಬ್ಬಂದಿಗಳೊಂದಿಗೆ ಅಗ್ನಿಶಾಮಕ ವಾಹನ ನಿಯೋಜಿಸುವಂತೆ, ಜಿಲ್ಲಾ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ, ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಜಾತ್ರಾ ಸ್ಥಳದ ಸುತ್ತಮುತ್ತ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.
ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೆಎಸ್‍ಆರ್‍ಟಿಸಿ ಡಿಪೋಗಳಿಂದ ಯಡಿಯೂರು ಜಾತ್ರೆಗೆ ವಿಶೇಷ ಬಸ್‍ಗಳನ್ನು ಬಿಡುವಂತೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಾರ್ಚ್ 28, 2023ರ ಮಹಾರಥೋತ್ಸವದ ದಿವಸ ಹಾಗೂ 30-3-2023ರ ಬೆಳ್ಳಿ ಪಲ್ಲಕ್ಕಿ ದಿವಸ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸುವಂತೆ ಸೂಚಿಸಿದರು.
ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ತಾತ್ಕಾಲಿಕ ವಾಹನ ನಿಲ್ದಾಣ, ಶಾಮಿಯಾನ, ಬ್ಯಾರಿಕೇಡ್, ವಿದ್ಯುತ್ ದೀಪಾಲಂಕಾರ, ಪ್ರಸಾದದ ವ್ಯವಸ್ಥೆ, ಹಂಗಾಮಿ ಶೌಚಾಲಯದ ವ್ಯವಸ್ಥೆ, ಭಕ್ತಾಧಿಗಳಿಗೆ ವಿಶೇಷ ದರ್ಶನ,
ಕುಡಿಯುವ ನೀರಿನ ವ್ಯವಸ್ಥೆ, ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ಎಲ್‍ಇಡಿ ಲೈಟಿಂಗ್ ವ್ಯವಸ್ಥೆ, ಸ್ವಾಗತ ಬೋರ್ಡ್‍ಗಳು, ವಿಶೇಷ ವಾದ್ಯ, ಮುಂತಾದ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)