ತುಮಕೂರು

ಮುಂಬರುವ ವಿಧಾನಸಭಾ ಚುನಾವಣೆ-2023ರ ಹಿನ್ನೆಲೆಯಲ್ಲಿ ಕರಪತ್ರ, ಪೋಸ್ಟರ್ ಇತ್ಯಾದಿಗಳನ್ನು ಮುದ್ರಿಸುವಾಗ ಕಡ್ಡಾಯವಾಗಿ ಪ್ರಕಾಶಕರ ಹೆಸರು, ವಿಳಾಸವನ್ನು ಮುದ್ರಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧವಾಗಿ ಇಂದು ನಡೆದ ಜಿಲ್ಲೆಯ ಪ್ರಿಂಟರ್ಸ್ ಮತ್ತು ಕೇಬಲ್ ಅಪರೇಟರ್ ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1951 ಸೆಕ್ಷನ್ 127ಎ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಚುನಾವಣಾ ನೀತಿ ಸಂಹಿತೆ ಜಾರಿಯಾದ ತಕ್ಷಣವೇ ಈ ಮೇಲಿನಂತೆ  ಕ್ರಮ ವಹಿಸತಕ್ಕದು ಎಂದು ತಿಳಿಸಿದರು.

ಅಲ್ಲದೆ, ಕರಪತ್ರ, ಪೋಸ್ಟರ್‍ಗಳ ಮೇಲೆ ಕಡ್ಡಾಯವಾಗಿ ಪ್ರತಿಗಳ ಸಂಖ್ಯೆ ಮುದ್ರಿಸ ತಕ್ಕದ್ದು. ಒಮ್ಮೆ ಮುದ್ರಿಸಿದ ಪ್ರತಿಗಳನ್ನು ಜೆರಾಕ್ಸ್ ಮಾಡಲು ಅನುಮತಿ ಇರುವುದಿಲ್ಲ. ಈ ರೀತಿ ಪ್ರಕರಣಗಳು ಕಂಡುಬಂದಲ್ಲಿ ಚುನಾವನಾಧಿಕಾರಿಗಳಿಗೆ  ದೂರು ಸಲ್ಲಿಸತಕ್ಕದ್ದು ಎಂದು ಸೂಚಿಸಿದರು.

 ಅಂತೆಯೇ ಜಿಲ್ಲೆಯಲ್ಲಿರುವ ಕೇಬಲ್ ಅಪರೇಟರ್‍ಗಳು ಕಡ್ಡಾಯವಾಗಿ ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಎಂ.ಸಿ.ಎಂ.ಸಿ ಸಮಿತಿಗೆ ತಮ್ಮ ಕೇಬಲ್ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕು, ತಮ್ಮ ಕೇಬಲ್‍ಗಳ ಮೂಲಕ ಯಾವುದೇ ಅಭ್ಯರ್ಥಿಯ ಚುನಾವಣಾ ಸಂಬಂಧಿತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ  ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವ ಅನುಮತಿ ಪಡೆಯ ತಕ್ಕದ್ದು ಎಂದು ಸೂಚಿಸಿದರು.

ಚುನಾವಣೆಗೆ 48 ಗಂಟೆಗಳ ಮುಂಚೆ ಸುದ್ದಿ ಮಾಧ್ಯಮಗಳಲ್ಲಿ ಅಥವಾ ಕೇಬಲ್ ವಾಹಿನಿಗಳಲ್ಲಿ ಯಾವುದೇ ಅಭ್ಯರ್ಥಿಗೆ ಸಂಬಂಧಿಸಿದಂತೆ ಪ್ರಚಾರ ಮಾಡಬಾರದು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಉಪಸ್ಥಿತರಿದ್ದರು.

(Visited 1 times, 1 visits today)