ತುಮಕೂರು


ಡಿಜಿಟಲ್ ಸಾಕ್ಷರತೆಯ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ ಭಾರತದ ಭವಿಷ್ಯ ರೂಪಿಸುವುದೇ ನಮ್ಮ ಗುರಿ ಎಂದು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ತರಬೇತುದಾರೆ ಸಹನಾ ಕುಮಾರಸ್ವಾಮಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಮಂಗಳವಾರ ಆಯೋಜಿಸಿದ್ದ ‘ಇನ್ಫೋಸಿಸ್ ಸ್ಪ್ರಿಂಗ್‍ಬೋರ್ಡ್’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯನ್ನು ಉತ್ಪಾದಕ ಮತ್ತು ಸ್ವಾವಲಂಬಿ ನಾಗರಿಕರನ್ನಾಗಿ ಮಾಡಿ, ಡಿಜಿಟಲ್ ಸಾಕ್ಷರತೆ ಮೂಲಕ ಡಿಜಿಟಲ್ ಸಾಮಥ್ರ್ಯವನ್ನು ಸಾಧಿಸಲು ಅಗತ್ಯವಿರುವ ಕಲಿಕೆ, ಕೌಶಲ್ಯ, ಸಂವಹನಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯ ರೂಪಗಳ ಅಡಿಪಾಯವನ್ನು ರೂಪಿಸುವ ಕೌಶಲ್ಯಗಳನ್ನು ವರ್ಧಿಸಲು ಇನ್ಫೋಸಿಸ್ ಸ್ಪ್ರಿಂಗ್‍ಬೋರ್ಡ್ ಸಹಕಾರಿಯಾಗುತ್ತದೆ ಎಂದರು.
ತುಮಕೂರು ವಿವಿ ಪಿಎಂಇಬಿ ನಿರ್ದೇಶಕ ಪ್ರೊ. ಸಂಪತ್ ಕುಮಾರ್ ಬಿ. ಟಿ. ಮಾತನಾಡಿ, ಶೈಕ್ಷಣಿಕ ಮಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ವೃದ್ಧಿಸಲು ತುಮಕೂರು ವಿಶ್ವವಿದ್ಯಾನಿಲಯ ಶ್ರಮಿಸುತ್ತಿದೆ. ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲೂ ಇನ್ಫೋಸಿಸ್ ಸಂಸ್ಥೆಯ ಸಹಯೋಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿವಿ ಶೈಕ್ಷಣಿಕ ವಿಭಾಗದ ಉಪಕುಲಸಚಿವೆ ಡಾ. ಮಂಗಳಗೌರಿ ಎಂ., ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ನಮ್ಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕಿದೆ. ಕೇವಲ ಪಠ್ಯಕ್ರಮ ಆಧಾರಿತ ಕಲಿಕೆ ಅವರಿಗೆ ಸಾಕಾಗುವುದಿಲ್ಲ. ಅವರ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಅಗತ್ಯವಿರುವ ಆನ್ಲೈನ್ ಕೋರ್ಸುಗಳನ್ನು ಒದಗಿಸುವಲ್ಲಿ, ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಬದ್ಧವಾಗಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯ ಮಂಗಳವಾರ ಆಯೋಜಿಸಿದ್ದ ‘ಇನ್ಫೋಸಿಸ್ ಸ್ಪ್ರಿಂಗ್‍ಬೋರ್ಡ್’ ಕುರಿತ ಕಾರ್ಯಾಗಾರವನ್ನು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ತರಬೇತುದಾರೆ ಸಹನಾ ಕುಮಾರಸ್ವಾಮಿ ಉದ್ಘಾಟಿಸಿದರು. ಡಾ. ಮಂಗಳಗೌರಿ ಎಂ., ಪ್ರೊ. ಸಂಪತ್ ಕುಮಾರ್ ಬಿ. ಟಿ. ಇದ್ದಾರೆ.

(Visited 5 times, 1 visits today)