ತುಮಕೂರು


ಕುಮಾರವ್ಯಾಸನ ಕಾವ್ಯದಲ್ಲಿ ವೈಭವ, ಸೌಂದರ್ಯ, ಸ್ಫೂರ್ತಿ, ಭಾಷೆ, ಅಲಂಕಾರದ ಶೈಲಿ ಅದ್ಭುತ. ವ್ಯಾಕರಣವನ್ನು ಮೀರಿ ಭಾಷೆ ಕಟ್ಟಿ, ಕಾವ್ಯ ಹೊರಹೊಮ್ಮಿಸಿದವ ಕುಮಾರವ್ಯಾಸ ಎಂದು ಹಿರಿಯ ವಿದ್ವಾಂಸ ಡಾ. ಎ. ವಿ. ಪ್ರಸನ್ನ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಕುಮಾರವ್ಯಾಸ ಅಧ್ಯಯನ ಪೀಠ, ಕರ್ನಾಟಕ ಗಮಕಕಲಾ ಪರಿಷತ್ತು, ತುಮಕೂರು ಜಿಲ್ಲಾ ಸಮಿತಿ, ಗಮಕ ಭಾರತೀ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ‘ಕುಮಾರವ್ಯಾಸ ಭಾರತ: ಸಾಂಸ್ಕøತಿಕ ಅನುಸಂಧಾನ’ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕುಮಾರವ್ಯಾಸನ ಕಾವ್ಯದಲ್ಲಿ ಪಾತ್ರ ಸೃಷ್ಟಿ, ಪಾತ್ರಗಳ ಸಂಚಾರ, ಪಾತ್ರಗಳ ಚಿತ್ರಣ, ಗತಿ, ಲಯ, ಹೋಲಿಕೆ ಎಲ್ಲವೂ ಗತವೈಭವದ ಸೊಗಸನ್ನು ವರ್ಣಿಸುತ್ತದೆ. ಎಲ್ಲಕ್ಕೂ ಮೀರಿ ಗ್ರಾಮೀಣ ಉಪಮೇಯಗಳಲ್ಲಿ ಕಾವ್ಯದ ಸೊಬಗನ್ನು ಸೊಗಸಾಗಿ ವರ್ಣಿಸಿದವ ಕುಮಾರವ್ಯಾಸ ಎಂದರು.
ತುಮಕೂರು ವಿವಿ ಸಿಂಡಿಕೇಟ್ ಹಾಗೂ ಕುಮಾರವ್ಯಾಸ ಅಧ್ಯಯನ ಪೀಠದ ಸದಸ್ಯ ಡಾ. ಕೆ. ರಾಜೀವಲೋಚನ ಮಾತನಾಡಿ, ಕುಮಾರವ್ಯಾಸ ಜನರ ಮಧ್ಯೆ ಇರುವ ಜನಪ್ರಿಯ ಕವಿ. ಅವನ ಕಾವ್ಯ ಶಕ್ತಿ ಅಂತಹುದು. ಅವನ ಕಾವ್ಯಗಳು ನಾಡಿನ ಎಲ್ಲೆಡೆಯು ಪ್ರತಿಧ್ವನಿತವಾಗಿದೆ ಎಂದರು.
ಆಶಯನುಡಿಗಳನ್ನಾಡಿದ ತುಮಕೂರು ವಿವಿ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ. ಎಂ. ಗಂಗಾಧರಯ್ಯ, ಅಧ್ಯಯನ ಕೇಂದ್ರಗಳ ಆಶಯ ಸದಾ ಜ್ಞಾನ ವಿಸ್ತಾರವಾಗಿರಬೇಕು. ಸಂಸ್ಕøತಿ, ಪುರಾಣ, ಇತಿಹಾಸ ಪುಟಗಳನ್ನು ತಿರುವಿ, ಕಲಿಕೆಗೆ ಅಳವಡಿಸಿಕೊಳ್ಳುವಂತಿರಬೇಕು. ನಮ್ಮ ಅಧ್ಯಯನ ಪೀಠ ಬೇರೊಂದು ಕಾರ್ಯಕ್ರಮಕ್ಕೆ ಮುನ್ನುಡಿಯಾಗಬೇಕು ಎಂದು ಹೇಳಿದರು.
ಡಾ. ಜ್ಯೋತಿ ಶಂಕರ್ ‘ಕುಮಾರವ್ಯಾಸ ಭಾರತದಲ್ಲಿ ಕ್ಷಾತ್ರ ದ್ರೌಪದಿ’, ಜಯಪ್ರಾಣೇಶ್ ‘ಕುಮಾರವ್ಯಾಸ ಭಾರತದಲ್ಲಿ ನೈತಿಕ ಮೌಲ್ಯಗಳು’, ಶಾಂತಾಗೋಪಾಲ್ ‘ಕುಮಾರವ್ಯಾಸನ ಸಂಗ್ರಹ-ವಿಸ್ತಾರ ಕೌಶಲ’ ವಿಚಾರಗಳ ಕುರಿತು ಮಾತನಾಡಿದರು.
‘ಕುಮಾರವ್ಯಾಸ ಭಾರತದಲ್ಲಿ ಶ್ರೀಕೃಷ್ಣ ರಾಯಭಾರ’ ಕುರಿತು ಗಂಗಮ್ಮ ಕೇಶವಮೂರ್ತಿ ಗಮಕ ವಾಚಿಸಿದರು. ವಿದ್ಯಾರ್ಥಿ ಮತ್ತು ಸಂಶೋಧನಾರ್ಥಿಗಳು ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಅಣ್ಣಮ್ಮ, ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗಭೂಷಣ್ ಭಾಗವಹಿಸಿದ್ದರು. ತುಮಕೂರು ವಿವಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಗೀತಾ ವಸಂತ ನಿರೂಪಿಸಿದರು.

(Visited 5 times, 1 visits today)