ತುಮಕೂರು


ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಜ್ಯೋತಿಗಣೇಶ್ ಪರ ಮನೆ ಮನೆಗೆ ತೆರಳಿ ಮತಯಾಚಿಸಿದರು.
ನಗರದ ಸಪ್ತಗಿರಿ ಬಡಾವಣೆ ಹಾಗೂ ನಳಂದ ಸ್ಕೂಲ್ ರಸ್ತೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಕರಪತ್ರಗಳನ್ನು ಹಂಚಿ ಮತಯಾಚಿಸಿದ ನಂತರ ಮಾತನಾಡಿದ ಕಟೀಲ್ ಅವರು, ಇಡೀ ಜಗತ್ತೇ ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಿಯಾಂಕ ಖರ್ಗೆಯವರು ಕೂಡಲೇ ಪ್ರಧಾನಿಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು, ಈ ಬಾರಿ ಕಲ್ಬುರ್ಗಿ ಕ್ಷೇತ್ರದ ಜನ ಪ್ರಿಯಾಂಕ ಖರ್ಗೆಯವರನ್ನು ಅಲ್ಲಿಂದ ಓಡಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಈಗಾಗಲೇ ಪ್ರಿಯಾಂಕ ಖರ್ಗೆಯವರ ತಂದೆ ಮಲ್ಲಿಕಾರ್ಜುನ ಖರ್ಗೆಯವರನ್ನು ಅಲ್ಲಿನ ಜನ ಲಾಯಕ್ ಅಲ್ಲ ಎಂದು ಹೇಳಿ ಕಲ್ಬುರ್ಗಿಯಿಂದ ಹೊರಗಿಟ್ಟಿದ್ದಾರೆ. ಹಾಗೆಯೇ ಈ ಚುನಾವಣೆಯಲ್ಲಿ ಪ್ರಿಯಾಂಕ ಖರ್ಗೆಯವರನ್ನು ಸಹ ಅಲ್ಲಿಂದ ಓಡಿಸುತ್ತಾರೆ ಎಂದರು.
ನರೇಂದ್ರ ಮೋದಿಯವರಿಗೆ ದೇಶದ ಜನ ಎರಡೆರಡು ಬಾರಿ ಬಹುಮತ ನೀಡಿ ಪ್ರಧಾನಿ ಮಾಡಿದ್ದಾರೆ. ಜಗತ್ತೇ ಇವರ ಆಡಳಿತವನ್ನು ಕಂಡು ಕೊಂಡಾಡುತ್ತಿದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆಯವರನ್ನು ಅವರ ಮನೆಯಲ್ಲೂ ಸಹ ಕೊಂಡಾಡುವುದಿಲ್ಲ ಎಂದು ಟೀಕಿಸಿದರು.
ಇಂತಹವರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ ಎಂದು ಅವರು ಪ್ರಶ್ನಿಸಿದ ಅವರು, ಪ್ರಿಯಾಂಕ ಖರ್ಗೆಯವರಿಗೆ ಆ ಕ್ಷೇತ್ರದ ಜನ ಬಹಿಷ್ಕಾರ ಹಾಕುತ್ತಿದ್ದಾರೆ. 5 ವರ್ಷ ಶಾಸಕರಾಗಿ ಕ್ಷೇತ್ರಕ್ಕೆ ಅನುದಾನ ತಂದಿಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. 5 ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸತ್ತು ಕಲ್ಬುರ್ಗಿಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿದರು.
ಜಗತ್ತೇ ಮೆಚ್ಚುವಂತಹ ಪ್ರಧಾನಿ ಬಗ್ಗೆ ಕ್ಷೇತ್ರದ ಜನರಿಂದ ತಿರಸ್ಕಾರಕ್ಕೆ ಒಳಗಾದ ಒಬ್ಬ ವ್ಯಕ್ತಿ ಮಾತನಾಡಿರುವುದು ಖಂಡನೀಯ. ಕೂಡಲೇ ಅವರು ಮೋದಿಯವರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ರೋಡ್ ಶೋ ಮೂಲಕ ಮತಯಾಚನೆಯಲ್ಲಿ ತೊಡಗಿದ್ದಾರೆ. ಅದೇ ರೀತಿ ಕಾರ್ಯಕರ್ತರುಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬೇಕು ಮತದಾರ ಮನ ಓಲೈಸಬೇಕು ಎಂದರು.
ನಮ್ಮ ರಾಷ್ಟ್ರೀಯ ನಾಯಕರು ಪ್ರವಾಸ ಇರುವ ಕಡೆ ಬೆಳಿಗ್ಗೆ ವೇಳೆ ಮನೆ ಮನೆ ಪ್ರಚಾರ ಮಾಡುತ್ತಾರೆ. ನಾನು ಹಾಗೂ ನಮ್ಮ ಹಿರಿಯರು ಪ್ರವಾಸ ಹೋದ ಸ್ಥಳಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಅಭೂತಪೂರ್ವವಾದ ಜನರ ಸ್ಪಂದನೆ ಬಿಜೆಪಿಗೆ ಸಿಗುತ್ತಿದೆ ಎಂದರು.
ನಮ್ಮ ಸರ್ಕಾರದ ಸಾಧನೆಗಳನ್ನು ನಮಗಿಂತ ಮೊದಲೇ ಜನರೇ ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ ಎಂಬುದು ಗೋಚರಿಸುತ್ತಿದೆ ಎಂದರು.
ಬಹಳ ಕಡು ಬಡತನದಲ್ಲಿ ಇರುವ ಬಿಪಿಎಲ್ ಕಾರ್ಡುದಾರರಿಗೆ ಹಬ್ಬಗಳಲ್ಲಿ ಸಮಸ್ಯೆಯಾಗಬಾರದು ಎಂದು ಉಚಿತವಾಗಿ ಗ್ಯಾಸ್ ಘೋಷಣೆ ಮಾಡಿದ್ದೀವಿ. ಹಾಗೆಯೇ ಉಚಿತವಾಗಿ ಅರ್ಧ ಲೀಟರ್ ನಂದಿನಿ ಹಾಲು, 5 ಕೆ.ಜಿ. ಅಕ್ಕಿ, ಸಿರಿಧಾನ್ಯ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಈ ಎಲ್ಲ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಯೇ ತಲುಪುತ್ತವೆ ಎಂದರು.
ರಾಜ್ಯದಲ್ಲಿ ನಮಗೆ ಚುನಾವಣೆ ಗೆಲ್ಲುವುದಕ್ಕೆ ಕಾಂಗ್ರೆಸ್ ಪಕ್ಷದ ಭಯವಿಲ್ಲ. ಜನರ ಜತೆಗೆ ಇರಬೇಕು ಎಂಬ ಉದ್ದೇಶದಿಂದ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಉಚಿತ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ, ಪಾಲಿಕೆ ಸದಸ್ಯ ವಿಷ್ಣುವರ್ಧನ್, ಸ್ಫೂರ್ತಿ ಡೆವಲರ್ಸ್‍ನ ಚಿದಾನಂದ್ ಮತ್ತಿತರರು ಭಾಗವಹಿಸಿದ್ದರು.

(Visited 2 times, 1 visits today)