ತುಮಕೂರು:

      ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ನೇತೃತ್ವದ ದಾಸೋಹ ವ್ಯವಸ್ಥೆ ಇಂದಿಗೆ ಒಂದು ಲಕ್ಷ ಜನರನ್ನು ತಲುಪಿದ್ದು, ಯುವಕರ ಸೇವಾ ಮನೋಭಾವ ಇತರರಿಗೆ ಮಾದರಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

        ನಗರದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಯುವಕಾಂಗ್ರೆಸ್ ಹಾಗೂ ಆರ್.ಆರ್.ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿರುವ ದಾಸೋಹ ತಯಾರಿಕ ಸ್ಥಳಕ್ಕೆ,ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ಹೆಚ್.ಸಿ.ಬಾಲಕೃಷ್ಣ, ನರೇಂದ್ರಸ್ವಾಮಿ ಹಾಗೂ ಯುವ ಕಾಂಗ್ರೆಸ್ ರಘವೀರಗೌಡ ಅವರುಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು,ವಿದ್ಯಾವಂತ ಯುವಜನರು, ತಮ್ಮ ಬಿಡುವಿನ ವೇಳೆಯನ್ನು ಈ ರೀತಿ ಅಶಕ್ತರು, ಬಡವರು, ಕಷ್ಟದಲ್ಲಿ ಇರುವವರ ಸೇವೆಗೆ ಮೀಸಲಿಟ್ಟಿರುವುದು ನಿಜಕ್ಕೂ ಮೆಚ್ಚುವಂತದ್ದು ಎಂದರು.

      ಮಾರ್ಚ್ 22 ರಿಂದ ಇದುವರೆಗೂ ಮೂರು ಹಂತದಲ್ಲಿ ಲಾಕ್‍ಡೌನ್ ವಿಸ್ತರಣೆಯಾಗಿದೆ.ಮೇ.17 ರ ನಂತರ ಏನು ಎಂಬುದು ತಿಳಿದಿಲ್ಲ.ಆದರೆ ಇಡೀ ಲಾಕ್‍ಡೌನ್ ಅವಧಿಯಲ್ಲಿ ಹಸಿದವರಿಗೆ ರುಚಿ ಮತ್ತು ಶುಚಿಯಿಂದ ಕೂಡಿದ ಆಹಾರವನ್ನು ತಲುಪಿಸುವ ಕೆಲಸವನ್ನು ರಾಜೇಂದ್ರ ಮತ್ತು ಅವರ ಗೆಳೆಯರು ಮಾಡುತ್ತಿದ್ದಾರೆ. ಜಿಲ್ಲಾಡಳಿತ, ಮಠಾಧೀಶರು ಹಾಗೂ ಕೆ.ಪಿ.ಸಿ.ಸಿಯ ಗಣ್ಯರು ಭೇಟಿ ನೀಡಿ ಯುವಕರ ಕಾರ್ಯವನ್ನು ಪ್ರಶಂಸಿಸಿದ್ದಾರೆ.ಜನರ ಸಂಕಷ್ಟಗಳಿಗೆ ಸ್ಪಂದಿಸಿ ರುವುದು ನಿಜಕ್ಕೂ ಅಭಿನಂದಾರ್ಹ ಎಂದರು ಕೆ.ಎನ್.ರಾಜಣ್ಣ ನುಡಿದರು.

       ರಾಜ್ಯ ಸರಕಾರ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವವರಿಗೆ ಅರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ.ಆದರೆ ಕುಂಬಾರ, ದರ್ಜಿ ಹಾಗೂ ಅಂದಿನ ದುಡಿಮೆಯಿಂದಲೇ ಬದುಕುತಿದ್ದ ಎಲ್ಲಾ ಜನರಿಗೆ ಅರ್ಥಿಕ ನೆರವು ದೊರೆಯುವಂತೆ ಮಾಡ ಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಆಯೋಗದಲ್ಲಿ ನೊಂದಾಯಿಸಿರುವ ಎಲ್ಲರಿಗೂ ಸೌಕರ್ಯ ಸಿಗುವಂತಾಗಬೇಕು. ಟ್ಯಾಕ್ಸಿ ಓನರ್ ಕಂ ಡ್ರೈವರ್ ಮತ್ತು ಚಾಲಕರಿಗೂ ಸರಕಾರದ ಅರ್ಥಿಕ ನೆರವು ದೊರೆಯುವಂತಹ ಮಾನದಂಡ ಅನುಸರಿಸಬೇಕು ಎಂದು ಕೆ.ಎನ್.ಆರ್. ಸರಕಾರವನ್ನು ಒತ್ತಾಯಿಸಿದರು.

       ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮಂತ್ರಿ ಚಲುವರಾಯಸ್ವಾಮಿ ಮಾತನಾಡಿ, ಸರಕಾರದ ನೆರವಿಲ್ಲದ, ಗೆಳಯರು ಮತ್ತು ದಾನಿಗಳ ಸಹಕಾರದಿಂದ ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿರುವುದು ನಿಜಕ್ಕ ಮೆಚ್ಚುವಂತ ಹದ್ದು,ತುಮಕೂರು ಸೇರಿದಂತೆ ಇಡೀ ರಾಜ್ಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಇದೇ ರೀತಿಯ ಕಾರ್ಯದಲ್ಲಿ ತೊಡಗಿದ್ದಾರೆ.ಇವರೆಲ್ಲರೂ ಅಭಿನಂದಾರ್ಹರು ಎಂದರು.

      ಮಾಜಿ ಸಚಿವ ನರೇಂದ್ರಸ್ವಾಮಿ ಮಾತನಾಡಿ, ಇಲ್ಲಿ ಸಾಧನೆಯೇ ಮಾತನಾಡಿದೆ.ರುಚಿ, ಶುಚಿಯ ಜೊತೆಗೆ ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಆಹಾರ ತಲುಪುವಂತೆ ಮಾಡಿರುವುದು ಒಳ್ಳೆಯ ಕೆಲಸ.ಇದಕ್ಕಾಗಿ ಆರ್.ರಾಜೇಂದ್ರ ಸೇರಿದಂತೆ ಅವರೊಂದಿಗೆ ಕೈ ಜೋಡಿಸಿದ ಎಲ್ಲರಿಗೂ ಕೆ.ಪಿ.ಸಿ.ಸಿ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಈ ವೇಳೆ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ,ಯುವಕರಾದ ಆರ್.ರವೀಂದ್ರ,ಕೆ.ಎ.ದೇವರಾಜು, ಗಂಗಣ್ಣ,ವೆಂಕಟೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 265 times, 1 visits today)