ತುಮಕೂರು:

      ವಿಶ್ವದಾದ್ಯಂತ ಹರಡುತ್ತಿರುವ ಕೊರೋನಾ ವೈರಾಣುವನ್ನು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ಸೈನಿಕರನ್ನು ಗೌರವಿಸಿ ಎಂದು ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

      ತಾಲ್ಲೂಕಿನ ಹೆಗ್ಗೆರೆ ಗ್ರಾಮಪಂಚಾಯತಿಯಲ್ಲಿ ಏರ್ಪಡಿಸಿದ್ದ ಅಗತ್ಯ ವಸ್ತುಗಳ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊರೋನಾ ಸೈನಿಕರಾದ ಆಶಾ/ ಅಂಗನವಾಡಿ ಕಾರ್ಯಕರ್ತೆಯರು, ಆರಕ್ಷಕರು, ಪೌರಕಾರ್ಮಿಕರು, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪತ್ರಕರ್ತರು ತಮ್ಮ ಪ್ರಾಣದ ಹಂಗನ್ನು ತೊರೆದು ವೈಯಕ್ತಿಕ ಜೀವನವನ್ನು ಬದಿಗಿಟ್ಟು ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಆಶಾ ಕಾರ್ಯಕರ್ತೆಯರು ಸಮೀಕ್ಷೆಗಾಗಿ ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಿರುಕುಳ, ಅವಮಾನಗಳನ್ನು ಸಹಿಸಿಕೊಂಡು ತಮ್ಮ ಸೇವೆಯನ್ನು ಎದೆಗುಂದದೆ ಮಾಡುತ್ತಿದ್ದಾರೆ. ಇಂತಹ ಕೊರೋನಾ ಸೈನಿಕರನ್ನು ನಾವೆಲ್ಲರೂ ಪೂಜಿಸಬೇಕೆಂದು ತಿಳಿಸಿದರು.

      ಕೊರೋನಾ ವೈರಸ್ ರಾಜ್ಯಕ್ಕೆ ಮಾತ್ರವಲ್ಲ ಪ್ರಪಂಚದ ಸುಮಾರು 200ಕ್ಕೂ ಹೆಚ್ಚು ದೇಶಗಳಿಗೆ ಹರಡಿ ಬಾಧಿಸುತ್ತಿದ್ದು, ಜನರ ಪ್ರಾಣವನ್ನು ತೆಗೆದು ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಅಪಾರ ಸಾವು-ನೋವುಗಳು ಸಂಭವಿಸುತ್ತಿದೆ. ಈ ರೋಗ ನಿಯಂತ್ರಣಕ್ಕಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿಯೂ ಕಟ್ಟುನಿಟ್ಟಾಗಿ ಲಾಕ್‍ಡೌನ್ ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರಿಂದ ವೈರಾಣು ಹೆಚ್ಚು ಹರಡದಿರಲು ಕಾರಣವಾಯಿತು. ಮಹಾಮಾರಿ ಕೊರೋನ್ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅವಿರತ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕೊರೋನಾ ಸೈನಿಕರು ಪೂಜೆಗೆ ಅರ್ಹರು. ಕೇವಲ ಇಂತಹ ಕಾರ್ಯಕ್ರಮಗಳಲ್ಲಿ ಮಾತ್ರ ಕೊರೋನಾ ಸೈನಿಕರನ್ನು ಗೌರವಿಸದೆ ದೇಶದ 130 ಕೋಟಿ ಜನರೂ ಸಹ ಗೌರವಿಸಬೇಕೆಂದು ತಿಳಿಸಿದರು.

      ಸಮೀಕ್ಷೆಗಾಗಿ ಮನೆ-ಮನೆಗೆ ಭೇಟಿ ನೀಡುವ ಕೊರೋನಾ ಸೈನಿಕರಿಗೆ ಸಾರ್ವಜನಿಕರು ತಮ್ಮ ಆರೋಗ್ಯ ವಿಷಯವನ್ನು ಗೌಪ್ಯವಾಗಿಡದೆ ಕೆಮ್ಮು, ಜ್ವರ, ನೆಗಡಿಯಂತಹ ಯಾವುದೇ ಸಮಸ್ಯೆಯಿದ್ದರೂ ಮಾಹಿತಿ ನೀಡಬೇಕು ಎಂದು ತಿಳಿಸಿದರು.

      ಬಸವಣ್ಣನವರ ನುಡಿಯಂತೆ ನಾವು ಗಳಿಸಿರುವುದರಲ್ಲಿ ಸ್ವಲ್ಪ ಭಾಗವಾದರೂ ಸಮಾಜಕ್ಕೆ ನೀಡಿದಾಗ ಮಾತ್ರ ಭಗವಂತ ಮೆಚ್ಚುತ್ತಾನೆ. ಬಡವರು, ಶ್ರಮಿಕ ವರ್ಗದವರಿಗೆ ಅಗತ್ಯ ವಸ್ತುಗಳ ಕಿಟ್‍ಗಳನ್ನು ನೀಡುತ್ತಿರುವ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರು ಭಗವಂತ ಮೆಚ್ಚುವ ಕೆಲಸ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಪ್ರಧಾನ ಮಂತ್ರಿ ಮೋದಿಯವರು ಬಡ ಹೆಣ್ಣು ಮಕ್ಕಳ ಬವಣೆ ಅರಿತು ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸೌಲಭ್ಯ, 2 ತಿಂಗಳಿಗಾಗುವಷ್ಟು ಉಚಿತ ಪಡಿತರ, ಜನಧನ್ ಯೋಜನೆಯಡಿ ಬಡ ಹೆಣ್ಣು ಮಕ್ಕಳ ಖಾತೆಗೆ 500 ರೂ., ಕಿಸಾನ್ ಸಮ್ಮಾನ್ ಯೋಜನೆಯಡಿ ಸಂಕಷ್ಟದಲ್ಲಿರುವ ರೈತರ ಖಾತೆಗೆ 2000 ರೂ.ಗಳ ಸಹಾಯಧನವನ್ನು ಒದಗಿಸಿದ್ದಾರೆ. ಪ್ರಧಾನಿ ಮೋದಿಯವರು ಈ ತಿಂಗಳಲ್ಲಿ 1011ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಿದ್ದು, ಇಂತಹ ಹಲವಾರು ಅಭಿವೃದ್ಧಿ ಪರ ಯೋಜನೆಗಳನ್ನು ಕೇಂದ್ರಸರ್ಕಾರ ಅನುಷ್ಟಾನಕ್ಕೆ ತಂದಿದೆ ಎಂದರು.

      ಇದರೊಂದಿಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2 ತಿಂಗಳ ಪಡಿತರವನ್ನು ಒಟ್ಟಿಗೆ ನೀಡುವ ಮೂಲಕ ಬಡವರ ಸಂಕಷ್ಟಕ್ಕೆ ನೆರವಾಗಿದ್ದಾರೆ.

      ಅಲ್ಲದೆ ಅನಿಲ ಭಾಗ್ಯ ಯೋಜನೆಯಡಿ 3 ಸಿಲಿಂಡರ್‍ಗಳನ್ನು ಉಚಿತವಾಗಿ ಒದಗಿಸುವ ವ್ಯವಸ್ಥೆ ಮಾಡಿದ್ದಾರೆ. ಹೂ-ಹಣ್ಣು-ತರಕಾರಿ ಬೆಳೆದ ರೈತರು, 650 ಕೋಟಿ ರೂ.ಗಳ ಸಹಾಯಧನ ಪ್ಯಾಕೇಜ್ ಘೋಷಿಸಿರುವುದಲ್ಲದೆ ಕ್ಷೌರಿಕರು-ಅಗಸ ಸಮುದಾಯದವರು, ಆಟೋ-ಟ್ಯಾಕ್ಸಿ ಚಾಲಕರು ಸೇರಿದಂತೆ ನೇಕಾರರಿಗೆ ತಲಾ 5 ಸಾವಿರ ರೂ.ಗಳ ಸಹಾಯಧನ ನೀಡುವ ಕೆಲಸವಾಗಿದೆ. ಬಡವರ ಕಷ್ಟ-ಕಾರ್ಪಣ್ಯಗಳಿಗೆ ನಮ್ಮ ಸರ್ಕಾರ ಸದಾ ಸ್ಪಂಧಿಸುವ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರಲ್ಲದೆ ಕೋವಿಡ್-19 ರೋಗವನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರೆಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವುದರೊಂದಿಗೆ ಕೊರೋನಾ ಸೈನಿಕರಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. 

      ತುಮಕೂರು ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್‍ಗೌಡ ಮಾತನಾಡಿ, ಹೆಗ್ಗೆರೆ ಗ್ರಾಮದ ಸಂಕಷ್ಟದಲ್ಲಿರುವವರಿಗೆ ಮಾಸ್ಕ್, ಅಗತ್ಯ ವಸ್ತುಗಳ ಕಿಟ್‍ಗಳನ್ನು ವಿತರಿಸುತ್ತಿರುವುದು ಪುಣ್ಯದ ಕೆಲಸ ಎಂದು ನನ್ನ ಭಾವನೆ. ಕೊರೋನಾ ನಿಯಂತ್ರಣಕ್ಕಾಗಿ ದೇಶದ ಟಾಟಾ, ಬಿರ್ಲಾ, ಅಜೀಮ್ ಪ್ರೇಮ್‍ಜಿ, ಇನ್ಫೋಸಿಸ್ ಕಂಪನಿಗಳು ಸಾವಿರಾರು ಕೋಟಿ ರೂ.ಗಳ ಆರ್ಥಿಕ ನೆರವನ್ನು ನೀಡುವ ಮೂಲಕ ನಮಗೆ ಮಾದರಿಯಾಗಿವೆ. ಇದೇ ರೀತಿ ಉಳ್ಳವರೆಲ್ಲರೂ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿದರು. ನಾನು ಕರೋನಾ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು ಮತ್ತು ಅಸಹಾಯಕರ ನೆರವಿಗೆ ನಿಂತಿರುವುದು ಯಾವುದೇ ರೀತಿಯ ಫಲಾಪೇಕ್ಷೆಯಿಂದಲ್ಲ. ಈ ಸಂದರ್ಭದಲ್ಲಿ ಯಾವುದೇ ರೀತಿಯ ರಾಜಕಾರಣವನ್ನು ಮಾಡದೆ. ಅವರ ನೆರವಿಗೆ ನಿಲ್ಲಬೇಕಾದದ್ದು ನಮ್ಮಗಳ ಕರ್ತವ್ಯವಾಗಿದೆ. ಹಾಗಾಗಿ ನಾವು ನಮ್ಮ ಎಲ್ಲಾ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ನಿರ್ದೇಶಿಸಿದ್ದೇನೆ. ಈ ಸಂದರ್ಭದಲ್ಲಿ ಎಲ್ಲಾ ರಾಜಕಾರಣವನ್ನು ಬದಿಗಿಟ್ಟು ಎಲ್ಲಾ ಬಡವರು ಮತ್ತು ನಿರ್ಗತಿಕರು ಹಾಗೂ ಕೂಲಿ ಕಾರ್ಮಿಕರ ಬೆಂಬಲವಾಗಿ ನಿಂತು ಅವರಿಗೆ ಸಹಕರಿಸಬೇಕಾದದ್ದು ನಮ್ಮಗಳ ಕರ್ತವ್ಯ ಎಂದರು.

      ಕೊರೋನಾ ವಾರಿಯರ್ಸ್‍ಗೆ ಹೂವಿನ ಮಳೆ:

      ಆರಂಭದಲ್ಲಿಯೇ ಕೊರೋನಾ ವಾರಿಯರ್ಸ್‍ಗಳಾಗಿ ಹಗಲಿರುಳೆನ್ನದೆ ಶ್ರಮಿಸಿದಂತಹ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಮತ್ತು ನೌಕರರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಆರಕ್ಷಕರಿಗೆ ಹೂವಿನ ಮಳೆ ಸುರಿಸುವ ಮೂಲಕ ಗೌರವ ಸಲ್ಲಿಸಲಾಯಿತು.

    ಅಗತ್ಯ ವಸ್ತುಗಳ ಕಿಟ್ ವಿತರಣೆ :

      ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಾಗಿ ಕುಳಿತಿದ್ದ ಬಡವರಿಗೆ ಇದ್ದಲ್ಲಿಗೇ ಹೋಗಿ ಅಕ್ಕಿ, ಬೇಳೆ, ರವೆ, ಸಕ್ಕರೆ, ಎಣ್ಣೆ, ಉಪ್ಪು, ಮತ್ತಿತರ ಅಗತ್ಯ ವಸ್ತುಗಳ ಕಿಟ್ ಅನ್ನು ವಿತರಿಸಲಾಯಿತು.

      ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ಜಿಲ್ಲಾ ಪಂಚಾಯತಿ ಸದಸ್ಯರಾದ ಕುಮಾರ್, ರಾಜೇಗೌಡ, ಸಿದ್ದೇಗೌಡ, ನರಸಿಂಹಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜು, ರಘುನಾಥಪ್ಪ ಮತ್ತಿತರರು ಉಪಸ್ಥಿತರಿದ್ದರು.

(Visited 77 times, 1 visits today)