ತುಮಕೂರು:

      ಕೋವಿಡ್-19ನಿಂದ ಲಾಕ್‍ಡೌನ್ ಆಗಿರುವ ಈ ಸಂದರ್ಭದಲ್ಲಿ ನಗರದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ಧೇಶದಿಂದ ಆರ್.ಆರ್. ಅಭಿಮಾನಿ ಬಳಗವು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿನಿತ್ಯ ದಾಸೋಹ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

       ನಗರದ ಮರಳೂರು ಎಸ್‍ಎಸ್‍ಐಟಿ ಕಾಲೇಜಿನ ಮುಂಭಾಗದಲ್ಲಿರುವ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ದಾಸೋಹ ಕಾರ್ಯವನ್ನು ಶುಕ್ರವಾರ ವೀಕ್ಷಿಸಿದ ನಂತರ ಮಾತನಾಡಿದ ಅವರು, “ಉಳ್ಳವರು ಇಲ್ಲದವರೊಂದಿಗೆ ಹಂಚಿಕೊಂಡು ಬದುಕುವಂಥ ಆದರ್ಶದ ಮಾರ್ಗ ಹಾಕಿಕೊಟ್ಟವರು ಬಸವಣ್ಣ. ಕೊರೊನಾ ಸಂಕಷ್ಟದಲ್ಲಿ ಆರ್.ರಾಜೇಂದ್ರ ನೇತೃತ್ವದ ಬಳಗವು ಬಸವಣ್ಣನ ಮಾತಿನಂತೆ ದಾಸೋಹ ಕಾರ್ಯ ನಡೆಸುತ್ತಿದ್ದಾರೆ. ಬಸವೇಶ್ವರರು ಸಾರಿದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಇತತರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

       ಕಾಯಕವೇ ಕೈಲಾಸ ಎಂಬ ತತ್ತ್ವವನ್ನು ಅಳವಡಿಸಿಕೊಂಡಾಗ ಎಲ್ಲರಿಗೂ ಸಲ್ಲುವಂಥ `ಹಸಿವು ಮುಕ್ತ’ `ಜಾತ್ಯತೀತ ಸಮಾಜ’ ಕಟ್ಟಬಹುದು ಎಂದ ಅವರು, ನಗರದಲ್ಲಿ ಸುಮಾರು 3000ಕ್ಕೂ ಹೆಚ್ಚು ಜನರಿಗೆ ಬೆಳ್ಳಿಗ್ಗೆ ತಿಂಡಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುತ್ತಿರುವ ಆರ್.ರಾಜೇಂದ್ರ ಬಳಗದ ಕಾರ್ಯವನ್ನು ಶ್ಲಾಘಿಸಿದರು.

      ಲಾಕ್‍ಡೌನ್ ಆರಂಭವಾದಾಗಿನಿಂದ ದಾಸೋಹ ಕಾರ್ಯವನ್ನು ಆರಂಭಿಸಿರುವ ಆರ್.ಆರ್. ಅಭಿಮಾನಿ ಬಳಗ ನಿರಂತರವಾಗಿ ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಹೋಂಗಾಡ್ರ್ಸ್, ಬೆಸ್ಕಾಂ ಸಿಬ್ಬಂದಿ, ಕೂಲಿಕಾರ್ಮಿಕರು, ಬಡವರು ಮತ್ತಿತರರಿಗೆ ಸ್ವಚ್ಚತೆಯಿಂದ ಕೂಡಿದ ಉತ್ತಮ ಗುಣಮಟ್ಟದ ಆಹಾರವನ್ನು ವಿತರಿಸುತ್ತಿದ್ದಾರೆ ಎಂದು ಹೇಳಿದರು.

      ಇಲ್ಲಿ ಸ್ವಯಂ ಪ್ರೇರಿತವಾಗಿ ಯುವಕರು ಬಂದು ಕೆಲಸ ನಿರ್ವಹಿಸುತ್ತಿರುವುದು ಸಂತಸ ತಂದಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಸಿದ್ಧಪಡಿಸಿ ಅವರು ಇರುವ ಸ್ಥಳಕ್ಕೆ ಹೋಗಿ ಆಹಾರ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

      ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಆರ್.ರವೀಂದ್ರ, ಯಶಸ್, ಹೋಂಗಾಡ್ರ್ಸ್ ಕಮಾಂಡೆಂಟ್ ಆರ್.ಪಾತಣ್ಣ, ರಾಜೇಶ್ ದೊಡ್ಮನೆ, ಓಬಳಿ ಶ್ರೀನಿವಾಸ್, ಲೋಕೇಶ್, ಶರಣ್, ರಘು, ದರ್ಶನ್, ರಾಘವೇಂದ್ರಸ್ವಾಮಿ, ಸುಶೀಲ್, ಪರಶುರಾಮ್, ರಾಕೇಶ್ ಸೇರಿದಂತೆ ಆರ್.ಆರ್.ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದರು.

(Visited 19 times, 1 visits today)