ತುಮಕೂರು : ಹೊರ ರಾಜ್ಯಗಳಿಂದ ಮೇ.1ರಿಂದ 289 ಮಂದಿ ಆಗಮನ

ತುಮಕೂರು :

      ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ತುಮಕೂರು ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದ್ದು, ಇಲ್ಲಿಯವರೆಗೂ ಹೊರ ಜಿಲ್ಲೆಯಿಂದ 2711 ಮಂದಿ ಹಾಗೂ ಮೇ 1 ರಿಂದ ಹೊರ ರಾಜ್ಯಗಳಿಂದ 289 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

      ಈಗಾಗಲೇ ಇವರನ್ನು ಪ್ರತ್ಯೇಕವಾಗಿ ವಸತಿ ಶಾಲೆ, ಶಾಲೆಗಳಲ್ಲಿ ಹಾಗೂ ಹೋಟೆಲ್‍ಗಳಲ್ಲಿ ಕ್ವಾರಂಟೈನ್ ಮಾಡಿ ಪರಿಶೀಲಿಸಲಾಗುತ್ತಿದೆ. ಹೊರ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬರುವವರಿಗೆ ಪಾವಗಡದಲ್ಲಿ ತಪಾಸಣಾ ಕೇಂದ್ರ ಮಾಡಿದ್ದು, ಮಧುಗಿರಿಯಲ್ಲಿ ಸ್ವೀಕರಣಾ ಕೇಂದ್ರವನ್ನು ತೆರೆಯಲಾಗಿದೆ. ಅದೇರೀತಿ ಉತ್ತರ ಕರ್ನಾಟಕದಿಂದ ಬರುವವರಿಗೆ ಶಿರಾದಲ್ಲಿ ಹಾಗೂ ಹೊರ ರಾಜ್ಯಗಳಿಂದ ಬೆಂಗಳೂರು ಕಡೆಯಿಂದ ಬರುವವರಿಗೆ ತುಮಕೂರು ನಗರದ ಕೆಎಸ್‍ಆರ್‍ಟಿಸಿ ತಾತ್ಕಾಲಿಕ ಬಸ್ಸು ನಿಲ್ದಾಣದಲ್ಲಿ ಸ್ವೀಕರಣಾ ಕೇಂದ್ರವನ್ನು ತೆರೆಯಲಾಗಿದೆ ಎಂದರು.

      ತುಮಕೂರು ನಗರಕ್ಕೆ 2 ಕಡೆ ಪ್ರವೇಶ ದ್ವಾರಗಳನ್ನು ಕಲ್ಪಿಸಿದ್ದು, ಇಲ್ಲಿ ಆರೋಗ್ಯ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸದರಿ ಸಿಬ್ಬಂದಿಗಳು ವಾಹನ/ವ್ಯಕ್ತಿಗಳ ತಪಾಸಣೆ ನಡೆಸಿ ತುಮಕೂರು ನಗರಕ್ಕೆ ಪ್ರವೇಶ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.

      ತುಮಕೂರು ಜಿಲ್ಲೆಗೆ ಹೊರರಾಜ್ಯಗಳಿಂದ ಕೆಲವರು ಅನುಮತಿ ಪಡೆದು ಬರುತ್ತಿದ್ದರೆ, ಕೆಲವರು ಅನುಮತಿಯಿಲ್ಲದೆ ಬರುತ್ತಿದ್ದಾರೆ. ಆದುದರಿಂದ ಯಾರೇ ಬಂದರೂ ಅಂತಹವರ ಮಾಹಿತಿಯನ್ನು ತುರ್ತಾಗಿ ಜಿಲ್ಲಾಡಳಿತಕ್ಕೆ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

(Visited 6 times, 1 visits today)

Related posts

Leave a Comment