ಚಿಕ್ಕನಾಯಕನಹಳ್ಳಿ:

       ಅಟಲ್‍ಭೂಜಲ್ , ಜಲಾಮೃತ ಹಾಗೂ ಜಲಜೀವನ್ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ರೈತಸ್ನೇಹಿ ಜಲಪೂರಣ, ಹಳ್ಳಿಗಳಲ್ಲಿ ಮನೆಮನೆಗೆ ಕೊಳಾಯಿ ನೀರು ಹಾಗೂ ಅಂತರ್ಜಲ ಅಭಿವೃದ್ಧಿಯಂತಹ ದೂರದೃಷ್ಠಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಬೇಕಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

      ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರಸರ್ಕಾರದ ವಿವಿಧ ಜಲಾಧಾರಿತ ಯೋಜನೆಗಳ ಅನುಷ್ಠಾನದ ಕುರಿತಾದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ ಕೇಂದ್ರ ಸರ್ಕಾರ ಅಟಲ್ ಭೂಜಲ್ ಯೋಜನೆ ಜಾರಿಗೆ ತಂದಿದ್ದು ಇಡೀ ದೇಶದಲ್ಲಿ ನಮ್ಮ ಜಿಲ್ಲೆಯನ್ನುÉ ಪ್ರಥಮವಾಗಿ ಆಯ್ಕೆ ಮಾಡಿಕೊಂಡಿದೆ. ನಾವು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಪ್ರತಿ ಹಂತದ ವರದಿಯನ್ನು ಕೇಂದ್ರಕ್ಕೆ ನೀಡಬೇಕಿದೆ, ಇದಕ್ಕಾಗಿ ಸಾವಿರಕೋಟಿ. ಅನುದಾನ ಇರಿಸಿದೆ.

      ಜಿಲೆಯಲ್ಲಿ ಅಂತರ್ಜಲ ಉಳಿಸಿ ಹಾಗೂ ಬೆಳೆಸುವ ನಿಟ್ಟಿನಲ್ಲಿ ಇಂದು ಸಾಂಪ್ರದಾಯಿಕ ಬೆಳೆಗಳನ್ನೆ ಅವಲಂಬಿಸಬೇಕೆ ಎಂಬ ಬಗ್ಗೆ ಆಲೋಚನೆ ಮಾಡಬೇಕಿದೆ, ಹೆಚ್ಚು ನೀರು ಬಯಸುವ ಬೆಳೆಯ ಬದಲಿಗೆ ಕಡಿಮೆ ನೀರಿನಲ್ಲಿ ಬೆಳೆಯುವ ಗೊಡಂಬಿ, ಖರ್ಜೂರ ದಂತಹ ಲಾಭತರುವ ಕೃಷಿಗೆ ಬದಲಾಯಿಸಿಕೊಳ್ಳುವ ನಿಟ್ಟನಲ್ಲಿ ಪ್ರಯೋಗಗಳನ್ನು ಮಾಡಬೇಕಿದೆ. ದುಬಾರಿಯಾಗದ ಕೃಷಿ ಬದುಕಿಗೆ ನಾಂದಿ ಹಾಡಬೇಕಿದೆ. ಇದರ ಜೊತೆಗೆ ಜಲಾಮೃತ, ಜಲಜೀವನ್ ಯೋಜನೆ ಮತ್ತು ಅಟಲ್‍ಭೂಜಲ್ ಯೋಜನೆಯ ಮೂಲ ಉದ್ದೇಶಗಳು ಸಮರ್ಥವಾಗಿ ಅನುಷ್ಠಾನವಾಗುವ ಹಂತದಲ್ಲಿ ನಾವು ವ್ಯವಸ್ಥಿತವಾಗಿ ಮುನ್ನಡೆಯಬೇಕಿದೆ. ಮೂರು ಸ್ಕೀಂಗಳ ಉದ್ದೇಶ ಇಡೇರುವಲ್ಲಿ ನಾವು ಹೆಚ್ಚು ಮುತುವರ್ಜಿ ವಹಿಸಬೇಕು ಹಾಗೂ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಆವಿಷ್ಕಾರಗಳಾಗಬೇಕಿದೆ. ಅಂತರ್ಜಲ ಅಭಿವೃದ್ದಿಯಲ್ಲಿ ಅನುಸರಿಸಬೇಕಾದ ವಿಧಾನ, ನೀರು ಬಳಕೆಯಲ್ಲಿನ ನಿಯಂತ್ರಣ, ಬಳಕೆಯಾಗುವ ಹಂತದಲ್ಲಿ ಪೋಲಾಗುವ ನೀರಿನ ಸಂರಕ್ಷಣೆ, ಕೃಷಿಯಲ್ಲಿ ನೀರಿನ ಬಳಕೆ ಹಾಗೂ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೆ ಕೊಳಾಯಿ ನೀರು ಹರಿಸುವ ಉದ್ದೇಶ ಈ ಯೋಜನೆಯಲ್ಲಿದ್ದು ಇದಕ್ಕಾಗಿ ನಾವು ಮಾಡಬೇಕಾದ ಪೂರ್ವಯೋಜಿತ ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡಲೇಬೇಕಿದೆ ಎಂದರು.

      ಸಣ್ಣ ನಿರಾವರಿ  ಇಲಾಖೆ ರಾಜ್ಯ  ಕಾರ್ಯದರ್ಶಿ ಮೃತ್ಯಂಜಯಸ್ವಾಮಿ ಮಾತನಾಡಿ ನಾವೀಗಾಗಲೇ ಅಟಲ್‍ಭೂಜಲ್ ಯೋಜನೆಯ ಕಾರ್ಯದಲ್ಲಿ ಮುನ್ನಡೆದಿದ್ದು ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಲಸಂರಕ್ಷಣೆಗಾಗಿ ಪ್ರತಿಪಂಚಾಯಿಯಲ್ಲಿ ಯೋಜನೆ ರೂಪಿಸಲಾಗಿದೆ. ಪ್ರತಿಗ್ರಾಮದ ಮನೆಯಲ್ಲಿ ಬಳಕೆಯಾಗುವ ನೀರು ಹಾಗೂ ರೈತರು ಬೆಳೆಯುವ ಬೆಳೆಗಳು ಅದಕ್ಕೆ ಆವರು ಯಾವ ಮೂಲದ ನೀರನ್ನು ಎಷ್ಟು ಬಳಸುತ್ತಿದ್ದಾರೆ, ಯಾವ ವಿಧಾನದಲ್ಲಿ ಬಳಕೆಯಾಗುತ್ತಿದೆ, ಅವರ ಕೃಷಿ ಉತ್ತೇಜನಕ್ಕೆ ಸಂಬಂಧಿಸಿದ ಇಲಾಖೆಯಿಂದ ಸಿಗುತ್ತಿರುವ ನೆರವು ಹಾಗೂ ಕೃಷಿ ಉತ್ತೇಜನಕ್ಕೆ ಇನ್ನೇನು ಬೇಕೆಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಸಚಿವರು ಹೇಳಿದಂತೆ ಕ್ಷೇತ್ರದ À 28 ಪಂಚಾಯಿತಿಗಳಲ್ಲಿ ವಿಫಲ ಭಾವಿಗಳ ವಿವರಗಳನ್ನು ಕಲೆಹಾಕಲಾಗಿದೆ. ಅಟಲ್ ಭೂಜಲ್ ಯೋಜನೆಯಡಿ ಕೃಷಿ, ತೊಟಗಾರಿಕೆ, ಅರಣ್ಯ, ಸಣ್ಣ ನೀರಾವರಿ ಇಲಾಖೆಯೂಸಹ ಒಳಗೊಂಡಿರುತ್ತದೆ ಎಂದರು.

      ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ಟಿ. ರಮೇಶ್ ಮಾತನಾಡಿ ಉದ್ಯೋಗಖಾತ್ರಿ ಯೋಜನೆಯಡಿ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ತಮ್ಮ ಜಮೀನಿನಲ್ಲಿ ಅಂತರ್ಜಲ ಪೂರಕ ಹುದಿಬದು ಕಾಮಗಾರಿ ನಿರ್ವಹಸಿದರೆ ಪ್ರತಿ ಎಕರೆಗೆ ಹತ್ತು ಸಾವಿರರೂ.ಗಳನ್ನು ಪಂಚಾಯಿತಿ ವತಿಯಿಂದ ನೀಡಲಾಗುವುದು, ಈ ಯೋಜನೆ ಒಂದು ತಿಂಗಳಲ್ಲಿ ಆಗಬೇಕಿದೆ. ಈ ಕಾಮಗಾರಿಗೆ ಜಾಬ್‍ಕಾರ್ಡ್‍ಗೆ ಅರ್ಜಿ ಸಲ್ಲಿಸಿದರೆ ಅರ್ಧಗಂಟೆಯಲ್ಲಿ ನೀಡಲಾಗುವುದೆಂದರು.

      ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾಧಿಕಾರಿ ಎಚ್.ಆರ್. ರಮೇಶ್, ವಿ ರವೀಂದ್ರ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಮುಂತಾದವರಿದ್ದರು.

(Visited 12 times, 1 visits today)