ತುಮಕೂರು:

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ನಗರದ ಎಸ್.ಪಿ ಕಛೇರಿ ಆವರಣದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗುತ್ತಿರುವ “ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‍ಮೆಂಟ್ ಕಮಾಂಡ್ ಅಂಡ್ ಕಂಟ್ರೋಲ್ (Iಅಒಅಅ)ಸೆಂಟರ್”ನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

      ನಂತರ ಜಿಲ್ಲಾ ಎಸ್‍ಪಿ ಕಛೇರಿ ಸಭಾಂಗಣದಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕಲ್ಪಿಸುವ “ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್” ತಂತ್ರಾಂಶಕ್ಕೆ ಚಾಲನೆ ನೀಡಿದರು.

      ಐಸಿಎಂಸಿಸಿ ಸೆಂಟರ್ ಕಾರ್ಯಾಚರಣೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಈಗಾಗಲೇ 39.97 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಂಟ್ರೋಲ್ ಸೆಂಟರ್ ಕಾರ್ಯಾರಂಭ ಮಾಡಲಾಗಿದ್ದು, ನಗರದ ವಿವಿಧ ಕಡೆ 80 ಸಿಸಿ ಟಿವಿ ಅಳವಡಿಕೆ ಮತ್ತು ಸರ್ವೆಲೆನ್ಸ್, ವೇರಿಯಬಲ್ ಮೆಸೇಜಿಂಗ್ ಸಿಸ್ಟಂ, ಎನ್‍ವಿರಾನ್‍ಮೆಂಟ್ ಮಾನಿಟರಿಂಗ್, ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಂ ಮತ್ತು ತುಮಕೂರು ಒನ್ ಅಪ್ಲಿಕೇಷನ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

      ಕಮ್ಯಾಂಡ್ & ಕಂಟ್ರೋಲ್ ಸೆಂಟರ್‍ನ 2ನೇ ಹಂತದ ಯೋಜನೆಯಡಿ 16.14 ಕೋಟಿ ರೂ. ವೆಚ್ಚದಲ್ಲಿ ನಗರದಾದ್ಯಂತ ಒಟ್ಟು 216 ಸಿಸಿ ಟಿವಿ ಅಳವಡಿಕೆ, ಸರ್ವೆಲೆನ್ಸ್ ಮತ್ತು 10 ಇಂಟೆಲಿಜೆನ್ಸ್ ಸಿಗ್ನಲಿಂಗ್ ಜಂಕ್ಷನ್‍ಗಳೊಂದಿಗೆ ಫೇಷಿಯಲ್ ರೆಕಗ್ನಿಷನ್(Facial recognition) ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

      ಪ್ರಸ್ತುತ ತಾತ್ಕಾಲಿಕವಾಗಿ ನಗರದ ಟೌನ್‍ಹಾಲ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಮ್ಯಾಂಡ್ & ಕಂಟ್ರೋಲ್ ಸೆಂಟರ್ ಅನ್ನು ಎಸ್‍ಪಿ ಕಛೇರಿಯಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಕ್ಕೆ ಕಾಮಗಾರಿ ಪೂರ್ಣಗೊಂಡ ನಂತರ ಸ್ಥಳಾಂತರಿಸಲಾಗುವುದು. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತಿತರ ಇಲಾಖೆಗಳು ಈ ಕೇಂದ್ರದಲ್ಲಿ ಸಂಪರ್ಕ ಹೊಂದಿ ಉತ್ತಮ ನಗರ ನಿರ್ವಹಣೆ ಮಾಡಬಹುದಾಗಿದೆ. ಸುಮಾರು 1918 ಚದರ ಮೀಟರ್ ಅಳತೆಯಲ್ಲಿ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್‍ನ ನೂತನ ಕಟ್ಟಡವನ್ನು ಅಂದಾಜು 10.15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಸೆಂಟರ್‍ನ ಕಟ್ಟಡದಲ್ಲಿ 2 ಅಂತಸ್ತುಗಳಿದ್ದು, 12 ತಿಂಗಳ ಅವಧಿಯಲ್ಲಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು.

      ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿಕೃಷ್ಣ ಅವರು “ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್” ತಂತ್ರಾಂಶದ ಬಗ್ಗೆ ಸಚಿವರಿಗೆ ಮಾಹಿತಿ ನೀಡುತ್ತಾ, ನಗರ ವ್ಯಾಪ್ತಿಯಲ್ಲಿ ಸಂಭವನೀಯ ಕಳ್ಳತನ ಮತ್ತು ಕಳ್ಳತನಗಳನ್ನು ತಡೆಗಟ್ಟಲು ಬೀಗ ಹಾಕಿದ ಮನೆಗಳ ಮೇಲೆ ನಿಗಾ ಇಡುವ ಸಲುವಾಗಿ ಸ್ಮಾರ್ಟ್ ಸಿಟಿ ಮತ್ತು ತುಮಕೂರು ಪೊಲೀಸ್ ಇಲಾಖೆಯಿಂದ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

       ಕಮ್ಯಾಂಡ್ ಅಂಡ್ ಕಂಟ್ರೋಲ್ ಕೇಂದ್ರ ಯೋಜನೆಯ ಭಾಗವಾಗಿ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ನಗರ ವ್ಯಾಪ್ತಿಯಲ್ಲಿ ನಾಗರಿಕರು ರಜೆ ಮೇಲೆ ಅಥವಾ ಮತ್ತಿತರ ಸಂದರ್ಭಗಳಲ್ಲಿ ಪ್ರವಾಸ ಕೈಗೊಂಡು ಮನೆಗೆ ಬೀಗ ಹಾಕಿದಾಗ ಮನೆ ಮಾಲೀಕರ ಮನವಿ ಮೇರೆಗೆ “ಲಾಕ್ಡ್‍ಡೌನ್ ಹೌಸ್ ಮಾನಿಟರಿಂಗ್ ಸಿಸ್ಟಮ್”ನಡಿ ಇಲಾಖೆಯಿಂದ ಮನೆಯ ಮೇಲೆ ನಿಗಾ ಇಡಲಾಗುವುದು.

      ಇದಕ್ಕಾಗಿ ನಾಗರಿಕರು “ಸ್ಮಾರ್ಟ್ ಸಿಟಿ ತುಮಕೂರು” ಎಂಬ ಮೊಬೈಲ್ ಆ್ಯಪ್‍ನಲ್ಲಿ ಅಗತ್ಯವಾಗಿ ಮನೆ ನಂಬರ್ ಹಾಗೂ ಮೊಬೈಲ್ ನಂಬರ್ ಒದಗಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ನೋಂದಣಿ ನಂತರ ಮನೆಯಿಂದ ಪ್ರವಾಸ ಕೈಗೊಳ್ಳುವ ಒಂದು ದಿನ ಮುನ್ನ ಮೊಬೈಲ್ ಆ್ಯಪ್ ಮೂಲಕ “request police watch” ಅನ್ನು ಆಯ್ಕೆ ಮಾಡಿಕೊಂಡು ನಿಗಾವಹಿಸಲು ಮನವಿ ಮಾಡಿಕೊಂಡಲ್ಲಿ ಪೊಲೀಸ್ ಇಲಾಖೆಯಿಂದ ಸಂಬಂಧಿಸಿದವರ ಮನೆಗೆ ಸಿಸಿಟಿವಿಗಳನ್ನು ಅಳವಡಿಸಲಾಗುವುದು. ಮನೆ ಮಾಲೀಕರಿಲ್ಲದ ಸಮಯದಲ್ಲಿ ಯಾರಾದರೂ ಅಕ್ರಮವಾಗಿ ಮನೆಗೆ ಪ್ರವೇಶ ಮಾಡಿದರೆ ಕಮ್ಯಾಂಡಿಂಗ್ ಸೆಂಟರ್‍ನಲ್ಲಿ ಸೈರನ್ ಶಬ್ಧ ಕೇಳಿ ಬರುತ್ತದೆ. ಸೈರನ್ ಕೇಳಿದ ಕೂಡಲೇ ಸಂಭವಿಸಬಹುದಾದ ಕಳ್ಳತನವನ್ನು ಇಲಾಖೆಯಿಂದ ತಪ್ಪಿಸಿ ಕಳ್ಳರನ್ನು ಮಟ್ಟಹಾಕುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.

      ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಸಚಿವ ಮಾಧುಸ್ವಾಮಿ ಸಣ್ಣ-ಪುಟ್ಟ/ಕಾರು ಕಳ್ಳರು ಈಗ ಕಡಿಮೆಯಾಗಿದ್ದಾರೆ. ಕಾರಿನಲ್ಲೇ ಬಂದು ಮನೆಯನ್ನು ಲೂಟಿ ಹೊಡೆಯುವ ಹೈ-ಫೈ ಕಳ್ಳರಿದ್ದಾರೆ. ಪೊಲೀಸರು, ನಾಗರಿಕರು ಇಂಥವರ ಬಗ್ಗೆ ನಿಗಾವಹಿಸಬೇಕೆಂದು ತಿಳಿಸಿದರು. ಇಂತಹ ಕಳ್ಳಕಾಕರು/ದರೋಡೆಕೋರರಿಂದ ಪೊಲೀಸ್ ಇಲಾಖೆ ಹಾಗೂ ನಾಗರಿಕರು ಜಾಗರೂಕರಾಗಿರಬೇಕು. ಮನೆಯಿಂದ ದೀರ್ಘಕಾಲ ಪ್ರವಾಸ ಹೋಗುವವರು ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್‍ನ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

      ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಕೇಂದ್ರ ವಲಯ ಐಜಿಪಿ ಶರತ್‍ಚಂದ್ರ, ಮೇಯರ್ ಫರೀದಾ ಬೇಗಂ, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಮತ್ತಿತರರು ಹಾಜರಿದ್ದರು.

(Visited 13 times, 1 visits today)