ತುಮಕೂರು:

      ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಧ್ಯೇಯ, ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

       ನ್ಯಾಯ, ನೀತಿ, ನಿಯತ್ತು, ತ್ಯಾಗ-ಬಲಿದಾನಗಳಿಗೆ ಇನ್ನೊಂದು ಹೆಸರೇ ಕೆಂಪೇಗೌಡರು. ನಾಡಿನ ಕಲ್ಯಾಣಕ್ಕಾಗಿ ಶ್ರಮಿಸಿದ ಇಂಥ ಮಹಾನುಭಾವರ ಆದರ್ಶ ಅನುಕರಣೀಯ ಎಂದರು.

      ನಗರದ ಬಿಜಿಎಸ್ ವೃತ್ತದಲ್ಲಿ ನಡೆದ 510ನೇ ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

      ಕೆಂಪೇಗೌಡರಂತ ಮಹಾನುಭಾವರ ಧ್ಯೇಯ, ಆದರ್ಶವನ್ನು ನಮ್ಮ ತನು, ಮನ, ಮತಿಗಳಲ್ಲಿ ತುಂಬಿಕೊಂಡಾಗ ಮಾತ್ರ ಅವರ ಜಯಂತಿ, ಜನ್ಮದಿನಾಚರಣೆಗೆ ಅರ್ಥ ಬರುತ್ತದೆ ಎಂದರು.

      ಪ್ರತಿಯೊಂದು ಕೆಂಪೇಗೌಡರ ಜಯಂತಿ, ಜನ್ಮದಿನಕ್ಕೆ ಹತ್ತು ಹೊಸ ಕೆಂಪೇಗೌಡರು ಹುಟ್ಟಿಕೊಳ್ಳಬೇಕು. ಆಗ ಮಾತ್ರ ಕೆಂಪೇಗೌಡರಿಗೆ ಸಂತೋಷವಾಗುತ್ತದೆ.

      ಕೆಂಪೇಗೌಡರ ಜಯಂತಿಯನ್ನಾಗಲಿ ಅಥವಾ ಇನ್ಯಾವ ಮಹಾತ್ಮ, ಮಹಾನುಭಾವರ ಜಯಂತಿಯನ್ನಾಗಲಿ ಅವರಿಗೊಂದು “ಥ್ಯಾಂಕ್ಸ್’’ ಹೇಳುವುದಕ್ಕೆ ಮಾತ್ರ ಸೀಮಿತವಾಗಿಸಬಾರದು. ಜತೆಗೆ ಅದೊಂದು “ಥ್ಯಾಂಕ್ಸ್ ಗಿವಿಂಗ್ ಸೆರೆಮನಿ”’ ಆಗಬಾರದು ಎಂದರು.

      ಬೆಂಗಳೂರಿನಲ್ಲಿ ಹುಟ್ಟಿರುವ ಮತ್ತು ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿರುವ ಪ್ರತಿಯೊಬ್ಬರ ಮೇಲೆ ಕೆಂಪೇಗೌಡರ ಋಣವಿದೆ. ಬೆಂಗಳೂರು ನಗರ ಕೆಂಪೇಗೌಡರ ಕನಸು. ಬೆಂಗಳೂರು ನಗರ ಕೆಂಪೇಗೌಡರ ಮಹಾಸಂಕಲ್ಪದ ಕೂಸು ಎಂದು ಅವರು ಹೇಳಿದರು.

      ಕೆಂಪೇಗೌಡರು ಬರೀ ಪ್ರಭು, ರಾಜ, ರಾಯರಾಗಿಯಷ್ಟೇ ಅಲ್ಲ, ಅವರೊಬ್ಬ ಅದ್ಭುತ ಕನಸುಗಾರರಾಗಿದ್ದರು. ನಗರದ ಅಗತ್ಯ, ಅವಶ್ಯಕತೆ ಏನು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು ಎಂದರು.

      ನಾಡಪ್ರಭು ಕೆಂಪೇಗೌಡರ ಕನಸಾಗಿರುವ ಬೆಂಗಳೂರನ್ನು ಗಾರ್ಡನ್ ಸಿಟಿಯಾಗಿ ಉಳಿಸಿಕೊಂಡರೆ ಮಾತ್ರ ಕೆಂಪೇಗೌಡರಿಗೆ ಖುಷಿಯಾಗುತ್ತದೆ. ಒಂದು ವೇಳೆ ಗಾರ್ಬೇಜ್ ಸಿಟಿಯಾಗಿ ಮಾಡಿದರೆ ಕೆಂಪೇಗೌಡರು ಮತ್ತು ಕೆಂಪೇಗೌಡರ ಆತ್ಮ ನಮ್ಮ, ನಿಮ್ಮಗಳನ್ನು ಕ್ಷಮಿಸುವುದಿಲ್ಲ ಎಂದರು.

      ಕೆಂಪೇಗೌಡರು ಖುಷಿ, ಸಂತೋಷಗಳಿಂದ ಜನತೆಯನ್ನು ಹರಸಬೇಕು ಎಂದರೆ ನಾವೆಲ್ಲರೂ ಶುಚಿ, ಶೌಚ, ಸ್ವಚ್ಛತೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

      ಈ ಸಂದರ್ಭದಲ್ಲಿ ಸಮುದಾಯದ ನರಸೇಗೌಡ, ಲಕ್ಕೇಗೌಡ, ಬೋರೇಗೌಡ, ಬೆಳ್ಳಿ ಲೋಕೇಶ್, ಟಿ.ಆರ್. ನಾಗರಾಜು, ಧರಣೇಂದ್ರಕುಮಾರ್, ಕುಮಾರ್, ಮನೋಹರಗೌಡ, ಹರೀಶ್, ಮಂಜುನಾಥಗೌಡ, ಪ್ರೆಸ್ ರಾಜಣ್ಣ, ದರ್ಶನ್‍ಗೌಡ, ಕೆಂಪರಾಜು, ಉಪ್ಪಾರಹಳ್ಳಿ ಕುಮಾರ, ಉದಯ ಇದ್ದರು.

(Visited 30 times, 1 visits today)