ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಐಎಸ್ ಪೋರ್ಟಲ್‍ಗೆ ಅಪ್‍ಲೋಡ್ ಕಡ್ಡಾಯ

ತುಮಕೂರು:

      ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳು ತಾವು ಅನುಷ್ಠಾನ ಮಾಡುವ ಯೋಜನೆಗಳ ಮಾಹಿತಿಯನ್ನು ಕಡ್ಡಾಯವಾಗಿ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕೆಂದು ಸಂಸದ ಜಿ.ಎಸ್. ಬಸವರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲಾ ಪಂಚಾಯತಿಯಲ್ಲಿ ಜರುಗಿದ ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ ಪ್ರಗತಿ (ದಿಶಾ) ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೈಗೊಂಡಿರುವ ಯೋಜನೆಗಳು, ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಸಂಪೂರ್ಣ ಅಂಕಿ-ಅಂಶಗಳನ್ನು ತುಮಕೂರು ಜಿಐಎಸ್ ಪೋರ್ಟಲ್‍ನಲ್ಲಿ 1 ತಿಂಗಳೊಳಗಾಗಿ ಅಪ್‍ಲೋಡ್ ಮಾಡಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ಅನುವಾಗುತ್ತದೆ. ಇದಕ್ಕಾಗಿ ಪ್ರತಿ ಇಲಾಖೆಯೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಇನ್ನೆರಡು ದಿನಗಳೊಳಗಾಗಿ ಅಧಿಕಾರಿಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು. 

      ಜಿಐಎಸ್ ಪ್ರಕ್ರಿಯೆ ನಿರಂತರವಾದ ಪ್ರಕ್ರಿಯೆಯಾಗಿದ್ದು, ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳ ಯೋಜನೆಗಳ ಮಾಹಿತಿಯನ್ನು ಅಪ್‍ಲೋಡ್ ಮಾಡಬೇಕು. ಜಿಐಎಸ್ ಅಪ್‍ಲೋಡ್ ಪ್ರಕ್ರಿಯೆಯಲ್ಲಿ ಜಿಲ್ಲೆಗೆ ಕೇಂದ್ರದಿಂದ ಪ್ರಶಂಸೆ ಸಿಕ್ಕಿದೆ. ಇನ್ನಷ್ಟು ಅನುಸರಣೆ ಮಾಡಿದಲ್ಲಿ ಉತ್ತಮ ಪ್ರಗತಿ ಸಾಧಿಸಬಹುದೆಂದರು.

      ಜಿಲ್ಲೆಯಲ್ಲಿರುವ ಸ್ತ್ರೀಶಕ್ತಿ ಸಂಘ ಹಾಗೂ ಸ್ವಶಕ್ತಿ ಸಂಘಗಳ ಒಕ್ಕೂಟಗಳು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಫಾರ್ವರ್ಡ್ ಮತ್ತು ಬ್ಯಾಕ್ವರ್ಡ್ ಲಿಂಕೇಜ್‍ನಡಿ ಸಂಘವಾರು ಉತ್ಪನ್ನಗಳ ಮಾಹಿತಿಯನ್ನು ತುಮಕೂರು ಜಿಐಎಸ್‍ನಲ್ಲಿ ಅಪ್‍ಲೋಡ್ ಮಾಡಬೇಕೆಂದು ಸೂಚನೆ ನೀಡಿದರು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿದಂತಾಗುತ್ತದೆ ಎಂದರಲ್ಲದೆ ನಿರುದ್ಯೋಗಿಗಳಿಗಾಗಿ ಉದ್ಯೋಗ ಸೃಷ್ಟಿಸುವ ಸಲುವಾಗಿ “ಇನ್‍ವೆಸ್ಟ್ ತುಮಕೂರು” ಕಾರ್ಯಕ್ರಮ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

      ಜಿಲ್ಲೆಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಹಾಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಿಗೆ ಸ್ವಂತ ನಿವೇಶನ ಗುರುತಿಸಲು ಗ್ರಾಮಪಂಚಾಯತಿಗಳಿಗೆ ಸೂಚನೆ ನೀಡಬೇಕೆಂದರು. ಅಂಗನವಾಡಿ ಕಟ್ಟಡಗಳಲ್ಲಿ ಕಡ್ಡಾಯವಾಗಿ ನೀರು, ವಿದ್ಯುತ್ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

      ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ, ತುಮಕೂರು-ಅರಸೀಕೆರೆ ದ್ವಿಪಥ ರೈಲ್ವೆ ಯೋಜನೆ, ಸಿದ್ಧಗಂಗಾ ಮಠದ ಬಳಿ ರೈಲ್ವೆ ಮೇಲ್ಸೇತುವೆ, ಮತ್ತಿತರ ರೈಲ್ವೆ ಇಲಾಖೆ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದರು.

      ಕೇಂದ್ರದ ಅಟಲ್ ಭೂಜಲ್ ಯೋಜನೆಗೆ ಜಿಲ್ಲೆಯ 6 ತಾಲ್ಲೂಕುಗಳು ಆಯ್ಕೆಯಾಗಿದ್ದು, ಉಳಿದ 4 ತಾಲ್ಲೂಕುಗಳಲ್ಲಿ ಜಲಾಮೃತ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಈ ಯೋಜನೆಗಳ ಅನುಷ್ಠಾನಕ್ಕಾಗಿ ನೋಡಲ್ ಏಜೆನ್ಸಿಯಾಗಿ ಸಣ್ಣ ನೀರಾವರಿ ಇಲಾಖೆಯನ್ನು ನೇಮಕ ಮಾಡಲಾಗಿದೆ ಎಂದರು.

      ಜಿಲ್ಲೆಯ ಗ್ರಾಮೀಣ ರಸ್ತೆ ಸೇರಿದಂತೆ ಮೇಲ್ದರ್ಜೆಗೇರಿಸಬೇಕಾದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ವಿಸ್ತøತ ವರದಿ ನೀಡಲು ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ವಿಭಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನಾ ಇಲಾಖೆಗಳಿಗೆ ಸೂಚನೆ ನೀಡಿದರು.

       ಜಿಲ್ಲಾ ಪಂಚಾಯತಿಯಿಂದ ನರೇಗಾ ಯೋಜನೆಯಡಿ ಪ್ರಸ್ತುತ ಉದಿಬದು, ಗಿಡ ನೆಡುವ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ 44ಸಾವಿರ ಕಾಮಗಾರಿಗಳು ನಡೆಯುತ್ತಿದ್ದು, ಈವರೆಗೂ 1504016 ಮಾನವ ದಿನಗಳನ್ನು ಸೃಜಿಸಿ ಕಾರ್ಮಿಕರಿಗೆ 83ಲಕ್ಷ ರೂ.ಗಳ ಕೂಲಿ ಹಣವನ್ನು ಪಾವತಿ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ.ಕೆ. ರಮೇಶ್ ಸಭೆಗೆ ಮಾಹಿತಿ ನೀಡಿದರು.

      ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್ ಕುಮಾರ್ ಮಾತನಾಡಿ, ಮೊಬೈಲ್ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಒದಗಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸಲಹೆ ನೀಡಿದರಲ್ಲದೆ ಮೊಬೈಲ್ ಮಣ್ಣು ಪರೀಕ್ಷಾ ಪ್ರಯೋಗಾಲಯದಿಂದ ರೈತರ ಜಮೀನಿಗೆ ಭೇಟಿ ನೀಡಿ ಸ್ಥಳದಲ್ಲಿಯೇ ಮಣ್ಣು ಪರೀಕ್ಷೆ ಮಾಡಬಹುದಾಗಿದೆ ಎಂದು ತಿಳಿಸಿದರು.

      ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಈವರೆಗೆ 10514 ವೈಯಕ್ತಿಕ ಗೃಹ ಶೌಚಾಲಯಗಳ ನಿರ್ಮಿಸುವ ಮೂಲಕ ಶೇ.82ರಷ್ಟು ಸಂಚಿತ ಪ್ರಗತಿಯನ್ನು ಸಾಧಿಸಲಾಗಿದೆ. ಉಳಿದಂತೆ ಸಮುದಾಯ ಶೌಚಾಲಯ ನಿರ್ಮಾಣದಡಿ 25 ಶೌಚಾಲಯಗಳು ಪೂರ್ಣಗೊಂಡಿದ್ದು, 47 ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿರುವ 330 ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ 37 ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿದ್ದು, ಎಲ್ಲ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಸನಗೌಡ ಮಾಹಿತಿ ನೀಡಿದರು.

      ಸಿದ್ದಿವಿನಾಯಕ ಮಾರುಕಟ್ಟೆ ಪ್ರದೇಶದ ವಿವಾದವನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಬೇಕೆಂದು ಸಂಸದರು ಸೂಚನೆ ನೀಡಿದಾಗ ಜಿಲ್ಲಾಧಿಕಾರಿ ಮಾತನಾಡಿ, ಸ್ಮಾರ್ಟ್ ಸಿಟಿ ಅಥವಾ ಪಾಲಿಕೆಗೆ ಈ ನಿವೇಶನವನ್ನು ಹಸ್ತಾಂತರ ಮಾಡಲು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದ್ದರೂ ಕ್ರಮಕೈಗೊಂಡಿರುವುದಿಲ್ಲ. ಕೂಡಲೇ ಹಸ್ತಾಂತರಕ್ಕೆ ಮುಂದಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.

      ನಂತರ ಮಾತನಾಡಿದ ಸಂಸದರು ಮಲ್ಲಾಘಟ್ಟ, ಕುಣಿಗಲ್ ಕೆರೆ ಸೇರಿದಂತೆ ಜಿಲ್ಲೆಯ ಕೆರೆಗಳಲ್ಲಿ ಮೀನು ಕೃಷಿಯನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರಲ್ಲದೆ ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶೇ. 96ರಷ್ಟು ಮಾತ್ರ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡಲಾಗಿದ್ದು, ಉಳಿದ ಶೇ.4ರಷ್ಟು ಪಡಿತರವನ್ನು ಆದಷ್ಟು ಬೇಗ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿದರು.

      ಸಭೆಯಲ್ಲಿ ರೇಷ್ಮೆ, ಬೆಸ್ಕಾಂ, ತೋಟಗಾರಿಕೆ, ಅಕ್ಷರ ದಾಸೋಹ, ಸ್ಮಾರ್ಟ್ ಸಿಟಿ, ಹೇಮಾವತಿ ನಾಲೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಎತ್ತಿನಹೊಳೆ ಯೋಜನೆ, ಲೋಕೋಪಯೋಗಿ ಇಲಾಖೆ, ಅರಣ್ಯ, ಪಂಚಾಯತ್ ರಾಜ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಮತ್ತಿರ ಇಲಾಖೆಗಳ ಮೂಲಕ ಕೈಗೊಳ್ಳಲಾದ ಕೇಂದ್ರದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. 

(Visited 14 times, 1 visits today)

Related posts