ತುಮಕೂರು : 

       ರಾಜ್ಯದಲ್ಲಿ ಕೋವಿಡ್-19 ಸಂಕಷ್ಟದಲ್ಲಿಯೂ ಕೂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಸುರೇಶ್‍ಕುಮಾರ್ ಅವರು ತಿಳಿಸಿದರು.

      ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿವಿಧ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯ 5ನೇ ದಿನವಾದ ಇಂದು ಕನ್ನಡ ಭಾಷಾ ವಿಷಯವಿದ್ದು, ರಾಜ್ಯದಲ್ಲಿ ಈವರೆಗೆ ಶೇ.98ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇದೆ. ಪರೀಕ್ಷೆ ಆರಂಭವಾದ ದಿನದಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದೇನೆ. ಇಂದು ತುಮಕೂರು ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ಅವರು ತಿಳಿಸಿದರು.

      ಶಿಕ್ಷಣ ಇಲಾಖೆಯು ಯಾವುದೇ ಪರೀಕ್ಷಾ ಕೇಂದ್ರ, ಕೇವಲ ಪರೀಕ್ಷಾ ಕೇಂದ್ರವಾಗಿರಬಾರದು ಅದು ಮಕ್ಕಳ ಸುರಕ್ಷತಾ ಕೇಂದ್ರವಾಗಿರಬೇಕು. ಮಕ್ಕಳಿಗೆ ಪರೀಕ್ಷಾ ಕೇಂದ್ರದಲ್ಲಿ ಸುರಕ್ಷತಾ ಮನೋಭಾವ ಬರಬೇಕು. ಮನೆಯಲ್ಲಿ ಸುರಕ್ಷಿತವಾಗಿರುವಂತೆ ಕೇಂದ್ರದಲ್ಲಿ ಸುರಕ್ಷತೆಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂಬ ಸಂಕಲ್ಪ ಮಾಡಿದ್ದೇವೆ. ಆದ್ದರಿಂದ ಸಿಬ್ಬಂದಿಗಳಿಗೆ ಈಗಾಗಲೇ ಮಾರ್ಗದರ್ಶನಗಳನ್ನು ನೀಡಲಾಗಿದೆ. ಮಕ್ಕಳಿಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಅಲ್ಲದೇ ಪರೀಕ್ಷಾ ಕೇಂದ್ರದ ಹೊರಗಡೆ ಒಳಗಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

     ಪವಿತ್ರ ಕ್ಷೇತ್ರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮಠಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ಮಕ್ಕಳಿಗೆ ಅವರ ಸ್ವಂತ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರೂ ಸಹ ಮಕ್ಕಳು ಮಠದ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತೇವೆ ಎಂದು ಬಂದಿದ್ದಾರೆ. ಮಕ್ಕಳ ಉತ್ಸಾಹ, ಆತ್ಮವಿಶ್ವಾಸ ಕಂಡು ಸಂತಸವಾಗಿದೆ ಎಂದರು.
ರಾಜ್ಯದಲ್ಲಿ ಈವರೆಗೆ 32 ವಿದ್ಯಾರ್ಥಿಗಳು ಕೋವಿಡ್-19 ಪ್ರಕರಣದಿಂದ ಪರೀಕ್ಷೆಗೆ ಹಾಜರಾಗದೇ ಇರುವವರು. ಇವರ ಬಗ್ಗೆನೂ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ.

      ಆಗಸ್ಟ್ ತಿಂಗಳಿನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಫ್ರೆಶರ್ಸ್‍ಗಳಾಗಿ ಗುರುತಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರಲ್ಲದೇ ಪರೀಕ್ಷಾ ಕೇಂದ್ರದಿಂದ ಯಾವ ವಿದ್ಯಾರ್ಥಿಯ ಆರೋಗ್ಯಕ್ಕೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ ಎಂದು ಅವರು ತಿಳಿಸಿದರು. ಯಾವುದೇ ತೊಂದರೆಯಾಗದಂತೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ ಶಾಂತಿಯುತವಾಗಿ ಪರೀಕ್ಷೆ ನಡೆಯುವಂತೆ ಪೊಲೀಸ್, ಕಂದಾಯ, ಆರೋಗ್ಯ, ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

      ಸಚಿವರು ತುಮಕೂರು ನಗರದ ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆ, ವಿದ್ಯಾ ಪ್ರೌಢಶಾಲೆ, ಬಸವೇಶ್ವರ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

       ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ವೈ.ಎ ನಾರಾಯಣಸ್ವಾಮಿ ಡಿಡಿಪಿಐ ಎಂ.ಆರ್ ಕಾಮಾಕ್ಷಮ್ಮ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.

(Visited 10 times, 1 visits today)