ತುಮಕೂರು:

      ಹೊರದೇಶಗಳಿಂದ ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ತರಿಸಿಕೊಳ್ಳುವುದರಿಂದ ದೇಶೀಯ ಹಾಲು ಉತ್ಪಾದಕರಿಗೆ ತೊಂದರೆಯಾಗಲಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

      ತುಮಕೂರು ಹಾಲು ಒಕ್ಕೂಟಕ್ಕೆ ಭೇಟಿ ನೀಡಿದ ಸಚಿವರು, ಹಾಲು ಸಂಸ್ಕರಣಾ ಘಟಕದ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

      ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನಂದಿನಿ ಹಾಲಿನ ಮಾರಾಟ ಗಣನೀಯವಾಗಿ ಕಡಿಮೆಯಾಗಿ ನಷ್ಟ ಉಂಟಾಗಿದೆ. ಮೈಸೂರು ಹಾಗೂ ತುಮಕೂರು ಹಾಲಿನ ಡೈರಿಗಳಿಗೆ ಭೇಟಿ ನೀಡಿದಾಗ ಇದೇ ಸಮಸ್ಯೆ ತಲೆದೋರಿದೆ. ಡೈರಿಯಲ್ಲಿ ತುಪ್ಪ ಹಾಗೂ ಹಾಲಿನ ಪುಡಿಯು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಿದ್ದು, ಹಾಗೆ ಉಳಿದಿದ್ದು ಮಾರಾಟವಾಗುತ್ತಿಲ್ಲ. ಈ ಕುರಿತು ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದರು.

      ತುಮಕೂರು ಹಾಲು ಒಕ್ಕೂಟದಲ್ಲಿ 154 ಕೋಟಿ ರೂ.ಗಳ ಮೆಗಾ ಡೈರಿ ನಿರ್ಮಾಣಕ್ಕೆ ಮನವಿ ಮಾಡಿದ್ದು, ಕೋವಿಡ್-19 ನಿಯಂತ್ರಣಕ್ಕೆ ಬಂದ ನಂತರ ಅನುದಾನ ಮಂಜೂರು ಮಾಡಲು ಹಾಗೂ ಮೆಗಾ ಡೈರಿ ನಿರ್ಮಾಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆ ಶಾಸಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಹಾಲು ಉತ್ಪಾದನಾ ಒಕ್ಕೂಟಗಳು ಈಗಾಗಲೇ ಕೋವಿಡ್-19 ನಿಂದ ಸಂಕಷ್ಟ ಅನುಭವಿಸುತ್ತಿವೆ. ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಚಿಂತಿಸಿರುವುದು ಮತ್ತಷ್ಟು ಕಷ್ಟದ ಪರಿಸ್ಥಿತಿಗೆ ಒಕ್ಕೂಟಗಳನ್ನು ದೂಡಿದಂತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

      ಈಗಾಗಲೇ ಕೋವಿಡ್-19 ಸಂದರ್ಭದಲ್ಲಿ ಯುವಕರು ನಗರ ತೊರೆದು ಹಳ್ಳಿಗಳನ್ನು ಸೇರಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಅವರು ಉತ್ಪಾದಿಸುವ ಹಾಲನ್ನು ಹಾಲು ಉತ್ಪಾದಕ ಸಹಕಾರ ಸಂಘಗಳು ನಿರಾಕರಿಸುವಂತಿಲ್ಲ. ಒಂದು ವೇಳೆ ನಿರಾಕರಿಸಿದ ಪ್ರಸಂಗಗಳು ಇದ್ದರೆ ಪರಿಶೀಲಿಸಲಾಗುವುದು. ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೇಲೆ ಯಾವುದೇ ಬಿಗಿ ನಿಯಂತ್ರಣವನ್ನು ಹೇರಿಲ್ಲ. ಆದರೆ ಕೆಲವೊಂದು ಸಹಕಾರಿ ಬ್ಯಾಂಕುಗಳಲ್ಲಿ ಹಣ ದುರುಪಯೋಗ ಪ್ರಕರಣಗಳು ಕಂಡು ಬಂದಿವೆ. ಹಿಂದಿನಿಂದಲೂ ಸಹಕಾರ ಬ್ಯಾಂಕುಗಳ ಮೇಲೆ ಆರ್‍ಬಿಐ ನಿಯಂತ್ರಣವಿದೆ. ಈಗಲೂ ಅದೇ ನಿಯಂತ್ರಣ ಮುಂದುವರೆದಿದೆ ಎಂದರು.

      ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಲಾಭದಾಯಕದಲ್ಲಿಯೇ ನಡೆಯುತ್ತಿವೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನಾಲ್ಕು ತಿಂಗಳಿಂದ ಈಚೆಗೆ ನಿರೀಕ್ಷಿತ ಮಟ್ಟದಲ್ಲಿ ಹಾಲಿ ಮಾರಾಟವಾಗದೆ ಇರುವುದು ಸಮಸ್ಯೆಯಾಗಿದೆ. ಮುಂಬೈ ಮತ್ತಿತರ ನಗರಗಳಿಗೆ ಸರಬರಾಜಾಗುತ್ತಿದ್ದ ತುಮಕೂರು ಹಾಲು ಒಕ್ಕೂಟದ ಹಾಲು ಶೇ. 75ರಷ್ಟು ಕಡಿಮೆಯಾಗಿದೆ. ಕೋವಿಡ್-19 ನಿಯಂತ್ರಣಕ್ಕೆ ಬಂದು ಬೇರೆ ರಾಜ್ಯಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ರಫ್ತಾದರೆ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಸಂಸದರಾದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಮಹಲಿಂಗಯ್ಯ, ಸಹಕಾರ ಸಂಘಗಳ ಉಪನಿಬಂಧಕ ಕಾಂತರಾಜು, ತುಮಕೂರು ಎಪಿಎಂಸಿ ಕಾರ್ಯದರ್ಶಿ ಪುಷ್ಪ, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ್ ಭಟ್ ಇದ್ದರು.

(Visited 19 times, 1 visits today)