ತುಮಕೂರು:

      ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ತಡೆಯಲು ಜಿಲ್ಲಾ ಪೊಲೀಸರಿಂದ ಎಲ್‍ಹೆಚ್‍ಎಂಎಸ್ ತುಮಕೂರು ಪೊಲೀಸ್ ಆ್ಯಪ್ ವಿನೂತನ ಪ್ರಯೋಗವನ್ನು ಇಡಿ ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.

      ನಗರದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ, ಜಿಲ್ಲೆಯಲ್ಲಿ ಇದು ಯಶಸ್ವಿಯಾದರೆ ಇಡಿ ರಾಜ್ಯಕ್ಕೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದ ಅವರು, ರಾಜ್ಯಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಐ.ಜಿ. ಅವರು ಇದಕ್ಕೆ ಅನುಮೋದನೆ ನೀಡಿದ್ದಾರೆ ಎಂದರು.

      ಮನೆಗಳಿಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಮಾಲೀಕರು ಮೊಬೈಲ್ ಆ್ಯಪ್ ಮೂಲಕ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ನೊಂದಾಯಿಸಿಕೊಂಡರೆ ಪೊಲೀಸ್ ಇಲಾಖೆಯಿಂದ ಅಂತಹ ಮನೆಗಳಿಗೆ ಸಿ.ಸಿ. ಕ್ಯಾಮರಾ ಟೆಕ್ನಾಲಜಿ ಮೂಲಕ ಮನೆಗಳ ಮೇಲೆ ನಿಗಾವಹಿಸಲಾಗುತ್ತದೆ ಎಂದರು.

      ಎಲ್‍ಹೆಚ್‍ಎಂಎಸ್ ತುಮಕೂರು ಪೊಲೀಸ್ ಆ್ಯಪ್‍ನಲ್ಲಿ ಹೆಸರು, ಮನೆ ನಂ.ಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು. ಮನೆಗೆ ಬೀಗ ಹಾಕಿ ಊರಿಗೆ ಹೋಗುವ ಸಂದರ್ಭದಲ್ಲಿ ಆ್ಯಪ್‍ನಲ್ಲಿ ರಿಕ್ವೆಸ್ಟ್ ವಾಚ್ ಆಪ್ಸನ್‍ನಲ್ಲಿ ಯಾವಾಗಿನಿಂದ ಯಾವತಿನ್ನವರೆಗೆ, ಎಷ್ಟು ದಿನ ಬೀಗ ಹಾಕಿ ಹೋಗುವುದರ ಬಗ್ಗೆ ಮಾಹಿತಿ ನೀಡಬೇಕು ಎಂದರು.

      ಈ ಬಗ್ಗೆ ಮುಂಚೆಯೇ ಸ್ಥಳೀಯ ಪೊಲೀಸರಿಗೆ ವಿಚಾರ ತಿಳಿಸಿದಾಗ ಅಂತಹ ಮನೆಗೆ ಬಂದು ನಿಗಾವಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು, ಆ ಸಮಯದಿಂದ ಸದರಿ ಮನೆ ನಿಗಾವಣೆಯಲ್ಲಿರುತ್ತದೆ. ಈ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ರವಾನೆ ಮಾಡಲಾಗುತ್ತದೆ. ಮನೆ ಬಳಿ ಓಡಾಡುವ ಯಾವುದೆ ವ್ಯಕ್ತಿಗಳ ಮೇಲೆ ಅನುಮಾನ ಬಂದಲ್ಲಿ ಕಂಟ್ರೋಲ್ ರೂಂಗೆ ತಕ್ಷಣ ಮಾಹಿತಿ ನೀಡುವುದು ಎಂದರು.

      ಸಾರ್ವಜನಿಕರು ಜಿಲ್ಲಾ ಪೊಲೀಸ್ ಇಲಾಖೆಯ ಈ ಉಚಿತ ಸೇವೆಯನ್ನು ಉಪಯೋಗಿಸಿಕೊಂಡು ಪೊಲೀಸರೊಂದಿಗೆ ಸಹಕರಿಸಿ, ತಮ್ಮ ಆಸ್ತಿಪಾಸ್ತಿಗಳ ರಕ್ಷಣೆಗೆ ಸಹಕಾರ ನೀಡುವಂತೆ ಕೋರಿದರು.

      ತುಮಕೂರು ಸ್ಮಾರ್ಟ್‍ಸಿಟಿ ಸಹಕಾರದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಗರಿಷ್ಠ 15 ದಿನಗಳವರೆಗೆ ಈ ಸೇವೆಯನ್ನು ನೀಡಲಾಗುವುದು ಎಂದ ಅವರು, ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು ಸ್ವಂತಕ್ಕಾಗಿ ಈ ಯೋಜನೆಯ ಸಿ.ಸಿ. ಕ್ಯಾಮರಾಗಳನ್ನು ಖರೀದಿಸಿ, ಅಳವಡಿಸಿಕೊಳ್ಳಬಹುದು ಎಂದರು. 

      ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಿರುಚಿತ್ರವೊಂದನ್ನು ತಯಾರಿಸಿ, ಸಾರ್ವಜನಿಕವಾಗಿ ಜಾಗೃತಿ ಮೂಡಿಸುತ್ತಿದ್ದು, ಜಿಲ್ಲಾದ್ಯಂತ 3 ಲಕ್ಷ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 300 ಜನ ಈಗಾಗಲೆ ನೋಂದಣಿ ಮಾಡಿಕೊಂಡಿದ್ದಾರೆ. ಒಂದು ಸಾವಿರ ಮಂದಿ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

      ತುಮಕೂರು ನಗರದ ಆಯ ಕಟ್ಟಿನ ಸ್ಥಳಗಳು ಸೇರಿದಂತೆ ಅಂಗಡಿ, ಮುಂಗಟ್ಟು, ಸಾರ್ವಜನಿಕ ಸ್ಥಳ, ಪ್ರಮುಖ ವೃತ್ತಗಳಲ್ಲಿ ಸುಮಾರು 5 ಸಾವಿರ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿದ್ದು, ತುಂಬಾ ಅಗತ್ಯವಿರುವ ಇನ್ನೂ 300 ಕಡೆ ಕ್ಯಾಮರಾಗಳನ್ನು ಅಳವಡಿಸಲು ಚಿಂತನೆ ನಡೆದಿದೆ ಎಂದರು.

      ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ತಲಾ ಒಬ್ಬರಂತೆ ಸುಮಾರು 50 ಜನರಿಗೆ ಈ ಬಗ್ಗೆ ತರಬೇತಿ ನೀಡಿದ್ದು, ಭವಿಷ್ಯದಲ್ಲಿ ಇದು ಉತ್ತಮ ಯೋಜನೆಯಾಗಿ ರೂಪುಗೊಳ್ಳಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

      ಕುಣಿಗಲ್ ತಾಲೂಕಿನಲ್ಲಿ ಈಗಾಗಲೆ ಈ ಪ್ರಯೋಗಕ್ಕೆ ಮುಂದಾಗಿದ್ದು, ಉಳಿದ ತಾಲೂಕು ಕೇಂದ್ರಗಳಲ್ಲೂ ಕ್ಯಾಮರಾ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

      ಜಿಲ್ಲಾ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಟಿ.ಜಿ. ಉದೇಶ್, ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ, ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜೇಗೌಡ ಇವರು ಸುದ್ದಿಗೋಷ್ಠಿಯಲ್ಲಿದ್ದರು.

(Visited 13 times, 1 visits today)