ತುಮಕೂರು:

      ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಂತೆ ಪಾಲಿಕೆ ಸದಸ್ಯ ಎಸ್.ಮಂಜುನಾಥ್ ಪೋಷಕರಿಗೆ ಕರೆ ನೀಡಿದರು.

     ನಗರದ 2ನೇ ವಾರ್ಡ್ ವ್ಯಾಪ್ತಿಯ ಸಿರಾಗೇಟ್‍ನ ಉತ್ತರ ಬಡಾವಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಪ್ರಸ್ತುತ ದಿನಗಳಲ್ಲಿ ಪೋಷಕರು ಖಾಸಗಿ ಶಾಲೆಯ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ ಎಂದರು.

     ಸರ್ಕಾರಿ ಶಾಲೆಯಲ್ಲಿಯೇ ಓದಿ ಇಂದು ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇಶ, ರಾಜ್ಯವನ್ನಾಳುತ್ತಿದ್ದಾರೆ. ಆದರೂ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿರುವುದು ವಿಪರ್ಯಾಸಕರ ಎಂದರು.

      ನಾನು ಉತ್ತರ ಬಡಾವಣೆಯ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಈ ಶಾಲೆಯಲ್ಲಿ ಹಿಂದೆಯೂ ಮತ್ತು ಈಗಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಹೀಗಾಗಿಯೇ ಈ ಶಾಲೆಯಲ್ಲಿ ಓದಿದವರೆಲ್ಲ ಸಮಾಜದಲ್ಲಿ ಉತ್ತಮ ನಾಗರಿಕರಾಗಿದ್ದಾರೆ ಎಂದರು.

       ನಮ್ಮ ಶಾಲೆಯ ಪರಿಸರ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲ. ಈ ಶಾಲೆಯಲ್ಲಿ ಸಿಗುವ ಪಾಠ, ಆಟ ಬೇರೆ ಯಾವ ಖಾಸಗಿ ಶಾಲೆಯಲ್ಲೂ ಸಿಗುವುದಿಲ್ಲ ಎಂದ ಅವರು, ಪ್ರಸ್ತುತ ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಬದಲಾಗಿ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟದ ಜತೆಗೆ ಗುಣಮಟ್ಟದ ಶಿಕ್ಷಣ ಸಹ ದೊರೆಯುತ್ತಿದೆ. ಇದನ್ನು ಪೋಷಕರು ಅರ್ಥ ಮಾಡಿಕೊಂಡು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

     ಈ ಶಾಲೆಯ ಶಿಕ್ಷಕರಾದ ಡಿ.ಎಸ್. ಶಿವಸ್ವಾಮಿ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆಯೇ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಕರಿದ್ದಾರೆ. ಇಂತಹ ಉತ್ತಮ ಶಿಕ್ಷಕರುಗಳು ಖಾಸಗಿ ಶಾಲೆಯಲ್ಲಿ ಸಿಗುತ್ತಾರೆಯೇ ಎಂದು ಪ್ರಶ್ನಿಸಿದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮುಖ್ಯ ಶಿಕ್ಷಕ ಡಿ.ಎಸ್. ಶಿವಸ್ವಾಮಿ ಮಾತನಾಡಿ, ನಮ್ಮ ಶಾಲೆಗೆ ಅತ್ಯುತ್ತ ಪ್ರಶಸ್ತಿ ಸಂದಿರುವ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಂಜುನಾಥ್ ಸೇರಿದಂತೆ ಹಳೇ ವಿದ್ಯಾರ್ಥಿಗಳೆಲ್ಲರೂ ಅಭಿನಂದಿಸಿರುವುದು ತುಂಬಾ ಸಂತೋಷ ತಂದಿದೆ. ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ದಾನಿಗಳ ನೆರವು ಪಡೆಯಲು ಸಹ ಮುಂದೆ ಬಂದಿದ್ದಾರೆ. ಇವರಿಗೆಲ್ಲ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

       ಈ ಶಾಲೆಗೆ ನಾನು 2018 ಆಗಸ್ಟ್‍ನಲ್ಲಿ ಮುಖ್ಯ ಶಿಕ್ಷಕನಾಗಿ ಬಂದಿದ್ದು, ಅಂದಿನಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಕ್ರೀಡಾ ಮೈದಾನ, ಕಾಂಪೌಡ್ ದುರಸ್ಥಿ, ಶಾಲಾ ಕೊಠಡಿಗಳ ನವೀಕರಣ, ಪ್ರಯೋಗಾಲಯಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ದಾನಿಗಳ ನೆರವಿನಿಂದ ಮಾಡಲಾಗಿದೆ ಎಂದರು. ಮಕ್ಕಳಿಗೆ ಅಗತ್ಯವಾಗಿರುವ ಕ್ರೀಡಾ ಕೊಠಡಿ, ಕ್ರೀಡಾ ಉಪಕರಣ, ಅಂಕಣಗಳನ್ನು ಸಹ ನಿರ್ಮಿಸಲಾಗಿದ್ದು, ಶಾಸಕರು ಇದನ್ನು ಉದ್ಧಾಟಿಸುವ ಮೂಲಕ ಮಕ್ಕಳ ಕಲಿಕೆಗೆ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು. ಈ ಶಾಲೆ ಇತರೆವರಿಗೆ ಮಾದರಿಯಾಗಿರಬೇಕೆಂಬ ಧ್ಯೇಯ ನಮ್ಮೆಲ್ಲದರಾಗಿದ್ದು, ದಾನಿಗಳ ನೆರವಿನಿಂದ ಶಾಲಾ ಕೊಠಡಿಗಳ ಸುಣ್ಣ ಬಣ್ಣ ಮಾಡಲಾಗಿದೆ. ಶಾಲಾ ಆವರಣದಲ್ಲಿ ಉತ್ತಮ ಪರಿಸರ ಕಾಪಾಡಿಕೊಳ್ಳುವ ಉದ್ದೇಶದಿಂದ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ತಿಳಿಸಿದರು.

      ಶಾಸಕ ಜ್ಯೋತಿಗಣೇಶ್ ಅವರ ಸಹಕಾರದಿಂದ ಸ್ಮಾರ್ಟ್‍ಸಿಟಿ ಯೋಜನೆ ವತಿಯಿಂದ 8 ಲಕ್ಷ ರೂ. ವೆಚ್ಚದಲ್ಲಿ 4 ಸ್ಮಾರ್ಟ್‍ಕ್ಲಾಸ್‍ಗಳನ್ನು ನಿರ್ಮಿಸಿಕೊಡಲಾಗಿದೆ. ಹಾಗೆಯೇ ಹೈಡ್ರಿಕ್ ಕಂಪೆನಿ ವತಿಯಿಂದ ಮಕ್ಕಳಿಗೆ 20 ಟ್ಯಾಬ್‍ಗಳನ್ನು ಒದಗಿಸಿಕೊಟ್ಟಿದ್ದಾರೆ. ಈ ಮೂಲಕ ಮಕ್ಕಳಿಗೆ ಆಧುನಿಕ ಶಿಕ್ಷಣ ದೊರೆಯುವಂತೆ ಸಹ ಮಾಡಲಾಗಿದೆ ಎಂದರು.

      ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾಗಮ ಶಿಕ್ಷಣ ಸಹ ಚಾಲ್ತಿಯಲ್ಲಿದ್ದು, ಶಾಲೆಯ ಶಿಕ್ಷಕರುಗಳು ಮಕ್ಕಳು ಇರುವಲ್ಲಿಗೇ ಹೋಗಿ ಪಾಠ ಹೇಳಿಕೊಡಲಾಗುತ್ತಿದೆ. ಹೀಗಾಗಿ ಕೆಲವು ಖಾಸಗಿ ಶಾಲೆಯ ಮಕ್ಕಳು ಸಹ ನಮ್ಮ ಶಾಲೆಯತ್ತ ಮುಖ ಮಾಡುತ್ತಿದ್ದಾರೆ ಎಂದರು.

      ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ.ಎಸ್. ಶಿವಸ್ವಾಮಿ ಅವರನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದರು.

     ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರುಗಳಾದ ಕೇಶವಮೂರ್ತಿ, ಕೋಮಲ, ಲೀಲಾವತಿ, ಹಳೇ ವಿದ್ಯಾರ್ಥಿಗಳಾದ ಜಗದೀಶ್, ರೇವಣ್ಣ, ಶಿವು ಇದ್ದರು.

(Visited 18 times, 1 visits today)