ತುಮಕೂರು:

      ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮೇಶ್‍ಬಾಬು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಸಿದ್ದಲಿಂಗಸ್ವಾಮೀಜಿ ಅವರ ಆಶೀರ್ವಾದ ಪಡೆದರು.

      ಮೊದಲಿಗೆ ಹಿರಿಯ ಶ್ರೀಗಳಾದ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಗದ್ದುಗೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ನಂತರ, ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗಸ್ವಾಮೀಜಿ ಅವರ ಬಳಿ ತೆರಳಿ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ರಮೇಶ್‍ಬಾಬು, ಸಿದ್ದಗಂಗಾ ಮಠಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಅದರಲ್ಲಿಯೂ ಚಿಕ್ಕನಾಯಕನಹಳ್ಳಿ ತಾಲೂಕಿನವನಾದ ನನಗೆ ಸಿದ್ದಗಂಗಾ ಮಠದ ಅನುಗ್ರಹ ಸದಾ ಇರುತ್ತದೆ.ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಹಾಗೂ ಶ್ರೀಸಿದ್ದಲಿಂಗಸ್ವಾಮೀಜಿ ಇಬ್ಬರ ಅಶೀರ್ವಾದವೂ ನನ್ನ ಮೇಲಿದೆ.ನನ್ನ ರಾಜಕೀಯ ಜೀವನದ ಬೆಳವಣಿಗೆಗೆ ಇದು ಕಾರಣ ಎಂದರು.

      ಕಳೆದ ಸಾಲಿನಲ್ಲಿ ನನಗೆ ಸಿಕ್ಕ ಅಲ್ಪ ಅವಧಿಯಲ್ಲಿಯೇ ಶಿಕ್ಷಕರು ಮತ್ತು ಪದವಿಧರರ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಶ್ರಮಿಸಿದ್ದೇನೆ.ಅಲ್ಲದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದ 6ನೇ ವೇತನ ಆಯೋಗದ ಶಿಫಾರಸ್ಸುಗಳ ಸಂಪೂರ್ಣ ಜಾರಿ ಹಾಗೂ ಹಲವಾರು ಶಿಕ್ಷಕರ ಪರ ಕೆಲಸಗಳು ನನಗೆ ಶ್ರೀರಕ್ಷೆಯಾಗಿವೆ. ಮುಂದಿನ ದಿನಗಳಲ್ಲಿಯೂ ಶಿಕ್ಷಕರು ಮತ್ತು ಪದವಿಧರರ ಪರವಾಗಿ ಕೆಲಸ ಮಾಡಲಿದ್ದೇನೆ. ಇದರ ಜೊತೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್,ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್,ಸಹಕಾರಿ ಧುರೀಣರಾದ ಕೆ.ಎನ್.ರಾಜಣ್ಣ,ಟಿ.ಬಿ.ಜಯಚಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರುಗಳು ಸಹ ನನ್ನಗೆ ಬೆಂಬಲವಾಗಿ ನಿಂತಿದ್ದಾರೆ. ಆದ್ದರಿಂದ ಪದವಿಧರರು ನನಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡುವುದಾಗಿ ರಮೇಶ್‍ಬಾಬು ತಿಳಿಸಿದರು.
ಈ ವೇಳೆ ಮುಖಂಡರಾದ ಭೈರಹನುಮಯ್ಯ ಮತ್ತು ಅಶೋಕ್ ಜಿ.ಎಂ ಉಪಸ್ಥಿತರಿದ್ದರು.

(Visited 6 times, 1 visits today)