ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ : ಚಿದಾನಂದ್ ಎಂ.ಗೌಡ

ತುಮಕೂರು : 

     ಚುನಾವಣಾ ಪೂರ್ವದಲ್ಲಿ ಪದವೀಧರರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ ಎಂದು ಆಗ್ನೇಯ ಪದವೀಧರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಇಂದಿಲ್ಲಿ ತಿಳಿಸಿದರು.

      ನಿರುದ್ಯೋಗಿ ಪದವೀಧರರು, ಶಿಕ್ಷಕರು ಸೇರಿದಂತೆ ಈ ಕ್ಷೇತ್ರದ ಪದವೀಧರ ಸರ್ಕಾರಿ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಸದಾ ಬದ್ಧನಾಗಿರುತ್ತೇನೆ. ಇಂದಿನಿಂದಲೇ ಪದವೀಧರರ ಸಮಸ್ಯೆಗಳ ನಿವಾರಣೆಗೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುವುದಾಗಿ ಅವರು ಹೇಳಿದರು.

     ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನೆ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ 7134 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ನನ್ನ ಈ ಗೆಲುವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳೇ ಪ್ರಮುಖ ಕಾರಣ ಎಂದರು.

      ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಕಾರಣಕರ್ತರಾದ 5 ಜಿಲ್ಲೆಗಳ ಪದವೀಧರ ಮತದಾರರು, ಶಿಕ್ಷಕರು, ಸರ್ಕಾರಿ ನೌಕರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

      ಮುಖ್ಯಮಂತ್ರಿ ಯಡಿಯೂರಪ್ಪನವರು, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಆಗ್ನೇಯ ಪದವೀಧರ ಕ್ಷೇತ್ರದ 5 ಜಿಲ್ಲೆಗಳ ಪಕ್ಷದ ಶಾಸಕರು, ಸಚಿವರು, ಸಂಸದರು, ಜಿಲ್ಲಾಧ್ಯಕ್ಷರುಗಳು, ಮಾಜಿ ಶಾಸಕರು ಸೇರಿದಂತೆ ವಿವಿಧ ಘಟಕಗಳ ಪ್ರಮುಖರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

      ವಿಧಾನ ಪರಿಷತ್‍ಗೆ ನೂತನವಾಗಿ ಆಯ್ಕೆಯಾಗಿರುವುದರಿಂದ ಶ್ರೀಗಳ ಆಶೀರ್ವಾದದೊಂದಿಗೆ ಮಾರ್ಗದರ್ಶನ ಪಡೆಯಲು ಶ್ರೀಮಠಕ್ಕೆ ಬಂದಿದ್ದೇನೆ. ಶ್ರೀಗಳು ಶಿಕ್ಷಣದ ಬೇರುಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಮಾರ್ಗ ದರ್ಶನ ಮಾಡಿದ್ದಾರೆ ಎಂದರು.

      ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರ ಯಾವಾಗಲೂ ಬಿಜೆಪಿ ಕ್ಷೇತ್ರ. 8 ಬಾರಿ ಬಿಜೆಪಿ, 2 ಬಾರಿ ಲಾಟರಿ ಹೊಡೆದ ರೀತಿ ಜೆಡಿಎಸ್ ಗೆದ್ದಿತ್ತು. ಈ ಬಾರಿ ಲಾಟರಿಯನ್ನು ಪಕ್ಕಕ್ಕೆ ಸರಿಸಿ ಬಿಜೆಪಿ ಮತ್ತೆ ಗೆಲುವು ಸಾಧಿಸಿದೆ ಎಂದರು.

      ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನಪರ ಕಾರ್ಯಕ್ರಮಗಳು ಚಿದಾನಂದ್ ಗೆಲುವಿಗೆ ಸಹಕಾರಿಯಾಗಿವೆ ಎಂದು ಅವರು ಹೇಳಿದರು.

     ಚಿದಾನಂದ್ ಅವರ ಈ ಗೆಲುವು ಪದವೀಧರರು, ಶಿಕ್ಷಕರು, ಸರ್ಕಾರಿ ನೌಕರರಿಗೆ ಅರ್ಪಿಸುತ್ತೇವೆ. ಪದವೀಧರರ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರದ ಎಂದಿಗೂ ಸ್ಪಂದಿಸಲಿದೆ ಎಂದರು.

      ಬಿಜೆಪಿ ಸರ್ಕಾರ ಇದ್ದಾಗಲೇ ಶಿಕ್ಷಕರ ಶಿಕ್ಷಣ, ವಿದ್ಯಾರ್ಥಿಗಳ ಶಿಕ್ಷಣ ಸಮಸ್ಯೆ ನಿವಾರಿಸಿ ನೌಕರರ ಏಳ್ಗೆಯನ್ನು ಮಾಡಿದೆ. ಕಾಂಗ್ರೆಸ್‍ನ ಸಿದ್ದರಾಮಯ್ಯ
ಮತ್ತು ಜೆಡಿಎಸ್‍ನವರಿಗೆ ಇದು ಸಂಬಂಧ ಇಲ್ಲ ಎಂದ ಅವರು, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರೂ ಮತದಾರರು ಬಿಜೆಪಿ ಕೈ ಬಲಪಡಿಸಿದ್ದಾರೆ. 1 ಲಕ್ಷ 10 ಸಾವಿರ ಮತದಾರರ ಪೈಕಿ 82 ಸಾವಿರ ಮತದಾರರು ಮೊದಲನೇ ಪ್ರಾಶಸ್ತ್ಯ ಮತ, 2ನೇ ಪ್ರಾಶಸ್ತ್ಯ ಮತದ ಮೂಲಕ ಚಿದಾನಂದ್ ಅವರನ್ನು ಗೆಲ್ಲಿಸಿದ್ದಾರೆ ಎಂದರು.

      ಶ್ರೀಮಠದ ದೊಡ್ಡ ಆಶೀರ್ವಾದ ನಮ್ಮ ತಲೆ ಮೇಲಿದೆ. ಶ್ರೀಮಠ ಯಾವಾಗಲೂ ಶಿಕ್ಷಣ ಪ್ರಸಾದ ಮಾಡುವ ಮುಖೇನ ಅನ್ನದಾಸೋಹ, ಶಿಕ್ಷಣ ದಾಸೋಹ, ಆರೋಗ್ಯ ದಾಸೋಹದ ಮೂಲಕ ಸಮಾಜ ಕಟ್ಟುವ ಕಾಯಕದಲ್ಲಿ ನಿರತವಾಗಿದೆ. ಇದೇ ಸಿದ್ದಾಂತವನ್ನು ನಮಗೂ ಮುಂದುವರೆಸಿಕೊಂಡು ಹೋಗುವಂತೆ ಶ್ರೀಗಳು ಆಶೀರ್ವದಿಸಿದ್ದಾರೆ ಎಂದರು.

      ಸಮಾಜ ಕಟ್ಟುವ ವ್ಯವಸ್ಥೆಯಲ್ಲಿ ಮುಂದುವರೆಯುವಂತೆ ಶ್ರೀಗಳು ಕಿವಿಮಾತು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾನು ಮತ್ತು ಚಿದಾನಂದ ಅವರು ಶಿಕ್ಷಣದ ಬೇರುಗಳನ್ನು ಗಟ್ಟಿಗೊಳಿಸುವ ಕಾಯಕದಲ್ಲಿ ತೊಡಗುತ್ತೇವೆ ಎಂದರು.

      ರಾಜ್ಯದಲ್ಲಿ ಶಾಲೆಗಳು, ಮಕ್ಕಳು, ಶಿಕ್ಷಕರು ಎಲ್ಲರೂ ನಮ್ಮವರೆ. ಶಿಕ್ಷಣ ಸಚಿವ ಸುರೇಶ್‍ಕುಮಾರ್ ಪ್ರಾಮಾಣಿಕರು, ಸಜ್ಜನರಿದ್ದಾರೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಪೆÇೀಷಕರು, ಶಿಕ್ಷಣ ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿಕ ಶಾಲೆಗಳನ್ನು ತೆರೆಯಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

      ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಲೆ ತೆರೆಯಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದವರು. ಶಿಕ್ಷಣ ತಜ್ಞರು, ಪೆÇೀಷಕರು ಸೇರಿದಂತೆ ಎಲ್ಲರ ಜತೆ ಸಮಾಲೋಚನೆ ನಡೆಸಿ, ಎಲ್ಲದರ ಬಗ್ಗೆ ಚಿಂತನೆ ನಡೆಸಿ ಹೇಳಿಕೆ ನೀಡಬೇಕು. ಈ ರೀತಿ ಮನಬಂದಂತೆ ಹೇಳಿ ಕೊಡಬಾರದು ಎಂದರು.

       ಮನಸೋ ಇಚ್ಛೆ ಹೇಳಿಕೆ ನೀಡಿದಿದ್ದರಿಂದ ಸಿದ್ದರಾಮಯ್ಯನವರು ಮೈಸೂರು ಬಿಟ್ಟು ಬಾದಾಮಿಗೆ ಹೋಗಬೇಕಾಯಿತು. ಇದು ಹೀಗೆ ಮುಂದುವರೆದರೆ ಬಾದಾಮಿಯಿಂದ ಮುಂದೆ ಎಲ್ಲಿಗೆ ಹೋಗಬೇಕಾಗುತ್ತದೋ ಎಂದು ಅವರು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮತ್ತಿತರರು ಇದ್ದರು.

(Visited 6 times, 1 visits today)

Related posts

Leave a Comment