ಅನಾಥ ಮಗುವನ್ನು ಸಾಕುವವರಿಗೆ ಕಾನೂನಿನ ಮಾರ್ಗದರ್ಶನ ನೀಡಲು ಡೀಸಿ ಸೂಚನೆ

 ತುಮಕೂರು : 

      ಸಾರ್ವಜನಿಕವಾಗಿ ಕಂಡುಬರುವ ಅನಾಥ ಮಗುವನ್ನು ಕದ್ದು ಮುಚ್ಚಿ ಸಾಕುವವರಿಗೆ ಕಾನೂನಿನ ಮಾರ್ಗದರ್ಶನ ನೀಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ತಮ್ಮ ಕಚೇರಿಯಲ್ಲಿಂದು ಜರುಗಿದ ಮಕ್ಕಳ ಸಹಾಯವಾಣಿಯ(CAB-child Advisory Board) ಹಾಗೂ ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಾ, ಸಾರ್ವಜನಿಕವಾಗಿ ಕಂಡುಬರುವ ಅನಾಥ ಮಕ್ಕಳನ್ನು ಕೆಲವು ಪೋಷಕರು ಕಾನೂನಿನ ಕಣ್ತಪ್ಪಿಸಿ ಪೋಷಿಸುತ್ತಿದ್ದಾರೆ. ಇಂಥವರಿಗೆ ಸಲಹೆ ನೀಡಿ ಕಾನೂನಾತ್ಮಕವಾಗಿ ಸಾಕಲು ಮಾರ್ಗದರ್ಶನ ನೀಡಬೇಕೆಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಜಿಲ್ಲೆಯಲ್ಲಿ ತಡೆಹಿಡಿಯಲಾದ ಬಾಲ್ಯವಿವಾಹ ಪ್ರಕರಣದಲ್ಲಿ ಮಕ್ಕಳು ಹಾಗೂ ಪೋಷಕರು ಮನೆ ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಪ್ರಕರಣದ ಪರಿಶೀಲನೆಗಾಗಿ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯನ್ನು ಬಿಟ್ಟು ಹೋಗಿದ್ದರೆ ಎಲ್ಲಿಗೆ ಹೋಗಿದ್ದಾರೋ ಆ ಗ್ರಾಮಕ್ಕೆ ಸಂಬಂಧಿಸಿದ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಮಾಹಿತಿ ಪಡೆದು ಪೋಷಕರು ಮತ್ತೆ ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡದಂತೆ ನಿಗಾ ವಹಿಸಬೇಕೆಂದು ಸೂಚನೆ ನೀಡಿದರು.

      ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಪೊಲೀಸ್ ಇಲಾಖೆ ಸೂಕ್ತ ಸಾಕ್ಷ್ಯಧಾರಗಳನ್ನು ಒದಗಿಸಬೇಕು ಹಾಗೂ ಸರ್ಕಾರಿ ಅಭಿಯೋಜಕರು ವಾದ ಮಂಡಿಸಬೇಕೆಂದು ತಿಳಿಸಿದರಲ್ಲದೆ ಕಳೆದ ಜುಲೈ ಮಾಹೆಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

      ವಿವಿಧ ಇಲಾಖೆಗಳ ಸೌಲಭ್ಯ ಕೋರಿ ಮಕ್ಕಳ ಸಹಾಯವಾಣಿ 1098ಕ್ಕೆ ಬರುವ ಕರೆಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಗಳಿಗೆ ಮಾಹಿತಿ ನೀಡಬೇಕು. ಇಲಾಖೆಗಳು ಕ್ರಮ ಕೈಗೊಂಡಿರುವ ಬಗ್ಗೆ ಅನುಸರಣಾ ವರದಿಯನ್ನು ಪ್ರತಿ ಮಾಹೆ ತಮಗೆ ಸಲ್ಲಿಸಬೇಕು ಎಂದು ತಿಳಿಸಿದರು.

      ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ, ದತ್ತು ಕೇಂದ್ರದಲ್ಲಿ ಒಟ್ಟು 25 ಮಕ್ಕಳಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಪ್ರಸಕ್ತ ಸಾಲಿನ ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ದತ್ತು ಪ್ರಕ್ರಿಯೆ ನಡೆದಿಲ್ಲ. ಜೂನ್ ಮಾಹೆಯಿಂದ ದತ್ತು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಈವರೆಗೆ 9 ಮಕ್ಕಳನ್ನು ದತ್ತು ನೀಡಲಾಗಿದೆ. ಅಲ್ಲದೆ ಸರ್ಕಾರಿ ಬಾಲಕರ ಬಾಲ ಮಂದಿರದಿಂದ 10 ವರ್ಷದ ಬಾಲಕನನ್ನು ದತ್ತು ನೀಡಲಾಗಿದೆ ಹಾಗೂ ಬಾಲಕಿಯರ ಬಾಲಮಂದಿರದ 11 ವರ್ಷದ ಬಾಲಕಿಯೊಬ್ಬಳನ್ನು ದತ್ತು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ದತ್ತು ಪಡೆಯಲು ವಿದೇಶಿಯರು ಮುಂದೆ ಬಂದಿದ್ದು, ಮಕ್ಕಳ ವೀಸಾ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

      ಪೋಕ್ಸೋ ಕಾಯ್ದೆಯಡಿ ಪ್ರಸಕ್ತ ಸಾಲಿನ ಕಳೆದ ತ್ರೈಮಾಸಿಕದಲ್ಲಿ ಬಾಕಿ ಇದ್ದ 90 ಪ್ರಕರಣ ಹಾಗೂ ಹೊಸದಾಗಿ ಬಂದ 20 ಪ್ರಕರಣ ಸೇರಿ ಒಟ್ಟು 110 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇತ್ಯರ್ಥಗೊಂಡ 14 ಪ್ರಕರಣಗಳಲ್ಲಿ 8 ಪ್ರಕರಣ ಖುಲಾಸೆಯಾಗಿದ್ದು, ಉಳಿದ 6 ಪ್ರಕರಣಗಳ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಕಳ್ಳತನ, ಪೊಕ್ಸೋ, ಕೊಲೆ, ದರೋಡೆ/ಡಕಾಯಿತಿ, ಗಲಾಟೆ, ಅಪಘಾತಕ್ಕೆ ಸಂಬಂಧಿಸಿದಂತೆ ಬಾಲ ನ್ಯಾಯಮಂಡಳಿ ಮುಂದೆ ಬಂದ 62 ಪ್ರಕರಣಗಳಲ್ಲಿ 17 ಪ್ರಕರಣ ಇತ್ಯರ್ಥಗೊಂಡಿದ್ದು, 46 ಪ್ರಕರಣಗಳು ಬಾಕಿ ಇವೆ ಎಂದರು.

      ಮಕ್ಕಳ ಸಹಾಯವಾಣಿ(1098)ಯ ಸಂಯೋಜಕಿ ರಾಧ ಮಾತನಾಡಿ, ಕಳೆದ ಏಪ್ರಿಲ್ ಮಾಹೆಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಸಹಾಯವಾಣಿ ಮೂಲಕ ಸ್ವೀಕರಿಸಿದ 358 ಕರೆಗಳ ಪೈಕಿ 119 ಕರೆಗಳು ತಪ್ಪು ಮಾಹಿತಿಯಿಂದ ಕೂಡಿವೆ. ಉಳಿದ 239 ಕರೆಗಳಲ್ಲಿ ವೈದ್ಯಕೀಯ ನೆರವು ಕೋರಿ 26, ಅಂಗನವಾಡಿ ಸಮಸ್ಯೆ-8, ವಿದ್ಯಾಭ್ಯಾಸಕ್ಕೆ ನೆರವು-16, ಶಿಕ್ಷಣ-4, ಬಾಲಕಾರ್ಮಿಕ-1, ಮಾನಸಿಕ ಕಿರುಕುಳ-4, ದೈಹಿಕ ದೌರ್ಜನ್ಯ-4, ಆಶ್ರಯ ಕೋರಿ-4, ಕಾಣೆಪ್ರಕರಣ-5, ಮಗು ಸಿಕ್ಕಿರುವ ಪ್ರಕರಣ-3, ಸರ್ಕಾರಿ ಸೌಲಭ್ಯ-4, ಶಾಲೆ ಬಿಟ್ಟ ಮಕ್ಕಳು-2, ಸಮಾಲೋಚನೆಗಾಗಿ-2, ಲೈಂಗಿಕ ದೌರ್ಜನ್ಯ-1, ಅಪಹರಣ-1, ಕೋವಿಡ್ ಆಹಾರ ಸಮಸ್ಯೆ-30, ಅನಧಿಕೃತ ಮಗು-1 ಹಾಗೂ 2 ಇತರೆ ಪ್ರಕರಣಗಳು ಸೇರಿವೆ. ಕರೆ ಮೂಲಕ ಸ್ವೀಕರಿಸಲಾದ ಅಹವಾಲುಗಳಿಗೆ ಪರಿಹಾರ ಒದಗಿಸಲು ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿ ನೆರವು ಒದಗಿಸುವಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ನಂತರ ನವೆಂಬರ್ ಮಾಹೆಯಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ದತ್ತು ಸಂಕಲ್ಪ ಸಂದೇಶದ ಪ್ರತಿಜ್ಞಾ ವಿಧಿಯನ್ನು ಜಿಲ್ಲಾಧಿಕಾರಿಗಳು ಬೋಧಿಸಿದರು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಮಕ್ಕಳ ದೌರ್ಜನ್ಯ ನಡೆದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಕಾರಿ ವಾಸಂತಿ ಉಪ್ಪಾರ್ ಬರೆದಿರುವ ಪ್ರೇರಣೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

      ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಆರೋಗ್ಯ ಇಲಾಖೆಯ ಡಾ: ಕೇಶವಮೂರ್ತಿ, ಬಾಲನ್ಯಾಯಮಂಡಳಿ ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ವಿವಿಧ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತಿತರರು ಹಾಜರಿದ್ದರು.

(Visited 6 times, 1 visits today)

Related posts

Leave a Comment