ತುಮಕೂರು :

      ಜನಪರ ಕಾರ್ಯಗಳಲ್ಲಿ ತೊಡಗಿರುವ ಸರಕಾರೇತರ ಸಂಸ್ಥೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾದರಿಯಾಗಿದೆ ಎಂದು ತುಮಕೂರು ನಗರ ಕ್ಷೇತ್ರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

      ತುಮಕೂರು ನಗರದ 26ನೇ ವಾರ್ಡಿನ ದೋಬಿಘಾಟ್ ರಸ್ತೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ನಗರಪಾಲಿಕೆ ಸಹಕಾರದಲ್ಲಿ ನಿರ್ಮಿಸಿರುವ ಶುದ್ದಗಂಗಾ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಸರಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಮೂಲಕ ಸಾಕಷ್ಟು ಜನರಿಗೆ ಉಪಯುಕ್ತವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀವಿರೇಂದ್ರ ಹೆಗಡೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

      ತುಮಕೂರು ನಗರಕ್ಕೆ ಸಾಕಷ್ಟು ಶುದ್ದ ಕುಡಿಯುವ ನೀರಿನ ಘಟಕಗಳ ಅಗತ್ಯವಿದೆ. ಆದ್ದರಿಂದ ನಾವುಗಳೆಲ್ಲರೂ ಒಗ್ಗೂಡಿ ಮತ್ತೊಮ್ಮೆ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ, ಹೆಚ್ಚಿನ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲು ಮನವಿ ಸಲ್ಲಿಸಲಾಗುವುದು ಎಂದು ಶಾಸಕರು,ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಸಾಮಥ್ರ್ಯದ ಘಟಕಗಳನ್ನು ಸ್ಥಾಪಿಸಲಾಗಿದೆ. ಗುಣಮಟ್ಟವೂ ಚನ್ನಾಗಿದೆ.ಅಲ್ಲದೆ ಶೀಘ್ರವಾಗಿಯೂ ಕೆಲಸ ಪೂರ್ಣಗೊಂಡಿರುವುದು ಸಂತೋಷದ ವಿಚಾರವಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.

      ಪಾಲಿಕೆ ಮೇಯರ್ ಶ್ರೀಮತಿ ಫರೀಧಾ ಬೇಗಂ ಮಾತನಾಡಿ,ಕೇವಲ 45 ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಒಳ್ಳೆಯ ಕೆಲಸ ಮಾಡಿದೆ.ಇನ್ನೂ ಹೆಚ್ಚಿನ ಘಟಕಗಳನ್ನು ಶ್ರೀಗಳಿಂದ ನಿರೀಕ್ಷಿಸುತ್ತೇವೆ.ಘಟಕ ನಿರ್ಮಾಣಕ್ಕಿಂತ ಅದರ ನಿರ್ವಹಣೆ ಮುಖ್ಯ. ಈ ನಿಟ್ಟಿನಲ್ಲಿ ನಾಗರಿಕರು ಘಟಕದ ನಿರ್ವಾಹಣರೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

      26ನೇ ವಾರ್ಡಿನ ಸದಸ್ಯ ಹೆಚ್. ಮಲ್ಲಿಕಾರ್ಜುನಯ್ಯ ಮಾತನಾಡಿ,ವಾರ್ಡಿನ ಜನರ ಸಹಕಾರ, ಶ್ರೀಕ್ಷೇತ್ರ ಧರ್ಮಸ್ಥಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಪ್ರೋತ್ಸಾಹದ ಫಲವಾಗಿ ಅತ್ಯುತ್ತಮ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ವಾಗಿದೆ.ಈ ಭಾಗದ ಬಹುದಿನ ಬೇಡಿಕೆ ಈಡೇರಿದಂತಾಗಿದೆ.ಅಲ್ಲದೆ ವಾರ್ಡಿನ ವ್ಯಾಪ್ತಿಯಲ್ಲಿನ ಸುಮಾರು 35 ಕಿ.ಮಿ.ಸಿಸಿ ಚರಂಡಿಯಲ್ಲಿ 12-15 ಕಿಮಿ ಈಗಾಗಲೇ ನಿರ್ಮಾಣವಾಗಿದೆ.ಉಳಿದ ಕಾರ್ಯಗಳು ಪ್ರಗತಿಯಲ್ಲಿವೆ.ಇದರ ಜೊತೆಗೆ,ಈ ವಾರ್ಡಿಗೆ ಒಂದು ಗ್ರಂಥಾಲಯ,ಪ್ರಾಥಮಿಕ ಆರೋಗ್ಯಕೇಂದ್ರ,ತರಕಾರಿ ಮಾರುಕಟ್ಟೆಯ ಅಗತ್ಯವಿದ್ದು,ಪಾಲಿಕೆಯ ಅಧಿಕಾರಿಗಳು, ಶಾಸಕರು ಇತ್ತ ಗಮನ ಹರಿಸುವಂತೆ ಮನವಿ ಮಾಡಿದರು.

      ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕ ಮಾತನಾಡಿ,ಶುದ್ದ ಕುಡಿಯುವ ನೀರು ಎಲ್ಲರ ಹಕ್ಕು,ಈ ವಾರ್ಡಿನಿಂದ ಶೇ90ರಷ್ಟು ತೆರಿಗೆ ಇದೇ ವಾರ್ಡಿನಿಂದ ಬರುತ್ತದೆ. ನಾಗರಿಕ ಸಮಿತಿ ಒಗ್ಗಟ್ಟಿನಿಂದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾಲಿಕೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು

     ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ದಯಶೀಲ ಮಾತನಾಡಿ, ಜನರ ಉಪಯೋಗಕ್ಕಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಹಮ್ಮಿಕೊಂಡಿದೆ. ಶುದ್ದಗಂಗಾ, ಕೆರೆ ಹೂಳೆತ್ತುವ ಕಾರ್ಯ,ಜ್ಞಾನ ತಾಣ ಸೇರಿದಂತೆ ಹಲವು ಕಾರ್ಯಕ್ರಮಗಳು ಜನಪ್ರಿಯವಾಗಿವೆ.ಕೋವಿಡ್‍ನಿಂದ ಶಾಲೆಯಿಂದ ಹೊರಗುಳಿ ಯುವ ಮಕ್ಕಳಿಗಾಗಿ ರಿಯಾಯಿತಿ ದರದಲ್ಲಿ 10 ಸಾವಿರ ಲ್ಯಾಪ್‍ಟ್ಯಾಪ್ ಮತ್ತು 20 ಸಾವಿರ ಟ್ಯಾಬ್ ವಿತರಿಸಲು ಮುಂದಾ ಗಿದ್ದೇವೆ.ಶುದ್ದಗಂಗಾ ನೀರು ಪೋಲಾಗಲು ಅವಕಾಶ ನೀಡಬೇಡಿ ಎಂದು ಸಲಹೆ ಮಾಡಿದರು.

      ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತಾಲೂಕು ನಿರ್ದೇಶಕ ಚನ್ನಕೇಶವ ಮಾತನಾಡಿ, ನಮ್ಮ ಸಂಸ್ಥೆಯಿಂದ ಸುಮಾರು 295 ಶುದ್ದಗಂಗಾ ಘಟಕಗಳನ್ನು ನಿರ್ಮಿಸಿ,ನಿರ್ವಹಣೆ ಮಾಡಲಾಗುತ್ತಿದೆ.ಪ್ರತಿ 15 ಘಟಕಗಳಿಗೆ ಒಬ್ಬ ತಾಂತ್ರಿಕ ತಜ್ಞರನ್ನು ನೇಮಕ ಮಾಡಲಾಗಿದೆ. ಇದುವರೆಗೂ ಒಂದೇ ಒಂದು ಘಟಕ ಕೆಟ್ಟಿಲ್ಲ. ಈ ವರ್ಷ 50 ಹೊಸ ಶುದ್ದಗಂಗಾ ಘಟಕ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ಅದ್ಯತೆಯ ಮೇಲೆ ಘಟಕ ನಿರ್ಮಾಣ ಕೈಗೊಳ್ಳುವುದಾಗಿ ತಿಳಿಸಿದರು.

       ವೇದಿಕೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಉಪಮೇಯರ್ ಶಶಿಕಲಾ ಗಂಗಹನು ಮಯ್ಯ,ವಿನಯ್ ಜೈನ್,ಮುಖಂಡರಾದ ಕೊಪ್ಪಲ್ ನಾಗರಾಜು,ಸುಜಾತ ಚಂದ್ರಶೇಖರ್, ಕುಮಾರಸ್ವಾಮಿ, ಮುದ್ದುರಾಜು, ಮಾರಣ್ಣ, ಯಧು, ಶ್ರೀನಾಥ್,ಶುದ್ದಗಂಗಾ ಯೋಜನೆಯ ಕೇಂದ್ರ ಕಚೇರಿಯ ಲಕ್ಷ್ಮಣ.ಎಂ. ವಾರ್ಡಿನ ಪ್ರಮುಖರು ಉಪಸ್ಥಿತರಿದ್ದರು.

(Visited 11 times, 1 visits today)