ತುಮಕೂರು:

      ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ಮಾಡುತ್ತಿರುವ ಸ್ಕ್ಯಾನಿಂಗ್ ಸೆಂಟರ್‍ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.

      ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ಜಿಲ್ಲೆಯಲ್ಲಿ ಒಟ್ಟು 105 ಸ್ಕ್ಯಾನಿಂಗ್ ಸೆಂಟರ್ ನೊಂದಣಿಯಾಗಿದ್ದು, ಅದರಲ್ಲಿ ಪ್ರಸ್ತುತ 95 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಆನ್‍ಲೈನ್ ಬಾಲಿಕ ಸಾಫ್ಟವೇರ್‍ನಲ್ಲಿ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‍ಗಳ ನೊಂದಣಿ ಕುರಿತ ಮಾಹಿತಿ ಇರುತ್ತದೆ. ಸ್ಕ್ಯಾನಿಂಗ್ ಸೆಂಟರ್‍ಗಳ ವೈದ್ಯರಿಗೆ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಹಾಗೂ ಅನುಷ್ಠಾನದ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.

     ಸೆಂಟರ್‍ಗಳು ಫಾರಂ-ಎಫ್ ಅನ್ನು ಅಪ್‍ಲೋಡ್ ಮಾಡುತ್ತಿದ್ದು, ಇದರಿಂದ ಮಾನಿಟರಿಂಗ್ ಮಾಡಲು ಅನುಕೂಲವಾಗಿದೆ. ಎಲ್ಲಾ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಜಿಲ್ಲಾ ತಪಾಸಣಾ ಹಾಗೂ ಮೇಲ್ವಿಚಾರಣಾ ಸಮಿತಿ ಅನಿರೀಕ್ಷಿತ ಭೇಟಿ ನೀಡಿ ನ್ಯೂನ್ಯತೆಗಳ ಬಗ್ಗೆ ಪರಿಶೀಲಿಸಿದೆ. ಅಲ್ಲದೆ ನಿಯಮ ಮೀರಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್‍ಗಳ ವಿರುದ್ಧ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

      ಪ್ರತಿ ಮಾಹೆಯ ಮಾಸಿಕ ಸಭೆಗಳಲ್ಲಿ ವೈದ್ಯಾಧಿಕಾರಿಗಳಿಗೆ ಸಿಬ್ಬಂದಿಯವರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಗರ್ಭಧಾರಣೆ ಮತ್ತು ಪ್ರಸವ ಪತ್ತೆ ತಂತ್ರ ವಿಧಾನಗಳ(ಲಿಂಗ ಆಯ್ಕೆಯ ನಿಷೇಧ) ಅಧಿನಿಯಮ, 1994 ಕಾಯ್ದೆ ಅಡಿ ಪ್ರಸವ ಪೂರ್ವ ಲಿಂಗ ಪತ್ತೆಯಲ್ಲಿ ತೊಡಗಿರುವ ಸ್ಕ್ಯಾನಿಂಗ್ ಸೆಂಟರ್‍ಗಳು, ಅಕ್ರಮವಾಗಿ ಸ್ಕ್ಯಾನಿಂಗ್ ಮೆಷಿನ್ ಮಾರಾಟ ಮಾಡುತ್ತಿರುವವರ, ಪೋರ್ಟಬಲ್ ಸ್ಕ್ಯಾನಿಂಗ್ ಮೆಷಿನ್ ಅನ್ನು ತಂದು ರಾತ್ರಿ ಸಮಯದಲ್ಲಿ ಸ್ಕ್ಯಾನ್ ಮಾಡುತ್ತಿರುವವರ ಬಗ್ಗೆ ನಿಗಾವಹಿಸಲು ತಿಳಿಸಲಾಗಿದೆ. ಮಾಹಿತಿಯನ್ನು ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದರು.

      ಗರ್ಭಿಣಿಯರಿಗೆ ತಪ್ಪು ಮಾಹಿತಿ ನೀಡಿ ಹೊರ ರಾಜ್ಯಗಳಿಗೆ ಸ್ಕ್ಯಾನಿಂಗ್‍ಗಾಗಿ ಕರೆದುಕೊಂಡು ಹೋಗುತ್ತಿರುವವರ ಮಾಹಿತಿ, ಮನೆಯಲ್ಲೇ ಸ್ಕ್ಯಾನಿಂಗ್ ಮೆಷಿನ್ ಇಟ್ಟುಕೊಂಡು, ಸ್ಕ್ಯಾನಿಂಗ್ ಮಾಡುತ್ತಿರುವವರ ಮಾಹಿತಿ, ಹಣದ ಆಮಿಷಕ್ಕೆ ದಲ್ಲಾಳಿಗಳ ಮೂಲಕ ಪ್ರಸವ ಪೂರ್ವ ಲಿಂಗ ಪತ್ತೆ ಹಚ್ಚುತ್ತಿರುವ ವೈದ್ಯರ ಮಾಹಿತಿ ಗರ್ಭಿಣಿಯರಿಗೆ ಲಿಂಗ ಪತ್ತೆ ಹಚ್ಚಲು ಒತ್ತಾಯ ಮಾಡುತ್ತಿರುವವರ ಮಾಹಿತಿ ನೀಡಿ, ಅಂತಹ ಸ್ಕ್ಯಾನಿಂಗ್ ಸೆಂಟರ್‍ಗಳ ವಿರುದ್ಧ, ನಕಲಿ ವೈದ್ಯರು ದಲ್ಲಾಳಿಗಳ ವಿರುದ್ಧ ಬಲವಾದ ಸಾಕ್ಷಿಗಳನ್ನು ಒದಗಿಸಿ ಮತ್ತು ಸಕ್ಷಮ ಪ್ರಾಧಿಕಾರದಿಂದ ನಡೆಸುವ ತಪಾಸಣೆ ಸಮಯದಲ್ಲಿ ಸಹಕರಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ ಶಿಕ್ಷೆ ಪ್ರಕಟವಾಗುವಂತೆ ಪ್ರಕರಣಗಳಿಗೆ ಸಹಕರಿಸಿದ ಸಂಸ್ಥೆಗೆ/ವ್ಯಕ್ತಿಗಳಿಗೆ 50,000 ರೂ.ಗಳ ಬಹುಮಾನವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

      ಅಕ್ರಮ ಲಿಂಗ ಪತ್ತೆ ಹಚ್ಚುವ ಸ್ಕ್ಯಾನಿಂಗ್ ಸೆಂಟರ್‍ಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಗುಪ್ತ ಕಾರ್ಯಾಚರಣೆಗೆ ಸಹಕರಿಸಲು ಸಿದ್ಧವಿರುವವರ ಮಾಹಿತಿಯನ್ನು ಸಮಿತಿಗೆ ಅಥವಾ ಆರೋಗ್ಯ ಇಲಾಖೆಗೆ ನೀಡಬಹುದು ಎಂದು ಅವರು ತಿಳಿಸಿದ್ದಾರೆ.

      ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಡಾ||ಶಿವರಾಜ್ ಪ್ರಸೂತಿ ತಜ್ಞರು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ಮಹಿಮಾ, ಮಕ್ಕಳ ತಜ್ಞೆ ಡಾ|| ಮುಕ್ತಾಂಭ, ವಕೀಲರಾದ ಕುಮಾರಸ್ವಾಮಿ, ರಾಣಿ ಚಂದ್ರಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಡಿ. ಮತ್ತಿತರು ಹಾಜರಿದ್ದರು.

(Visited 14 times, 1 visits today)