ಬ್ಯಾಂಕ್ ಖಾಸಗೀಕರಣದಿಂದ ಅಪಾಯ: ಎನ್.ಶಿವಣ್ಣ

 ತುಮಕೂರು:

      ರಾಷ್ಟ್ರೀಕರಣಗೊಂಡಿದ್ದ ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ರೈತರ ಸ್ಥಿತಿ ಡೋಲಾಯಮಾನವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಎನ್.ಶಿವಣ್ಣ ಆರೋಪಿಸಿದರು.

      ನಗರದಲ್ಲಿ ಪಕ್ಷದ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಪೋರೇಟ್ ಕಂಪನಿಗಳು ರೈತರ ಫಲವತ್ತಾದ ಕೃಷಿ ಜಮೀನಿನ ಮೇಲೆ ಕಣ್ಣಿಟ್ಟಿದ್ದು, ಕಾರ್ಮಿಕರ ಹೋರಾಟದ ಪ್ರತಿಫಲವಾಗಿ ರೂಪುಗೊಂಡಿದ್ದ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಖಾಸಗಿ ವ್ಯಕ್ತಿಗಳ ಕೈಗೆ ಸಿಲುಕಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದಕ್ಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

      ಭವ್ಯಭಾರತ ಪ್ರಪಂಚದೆಲ್ಲೆಡೆ ಪ್ರಕಾಶಿಸುತ್ತಿದ್ದರು ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಇನ್ನು ಬದುಕುವ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿಯಿದೆ. ಒಂದು ಕಡೆ ರಾಷ್ಟ್ರದ ಸಂಪತ್ತು ಕೆಲವೇ ಮಂದಿ ಕೊಳ್ಳೆಯೊಡೆಯುತ್ತಿದ್ದು, ದುಡಿಯುವ ವರ್ಗ ಬೀದಿಗೆ ಬಿಳಬೇಕಾದ ಸ್ಥಿತಿಯಲ್ಲಿ ಜಾತಿ ದೌರ್ಜನ್ಯ, ಕೋಮು ವೈಷಮ್ಯಗಳ ಪ್ರಚೋದನೆಯನ್ನು ವ್ಯವಸ್ಥೆವಾಗಿ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲಾಗುತ್ತಿದೆ ಎಂದು ದೂರಿದರು.

      ಪ್ರಜಾಪ್ರಭುತ್ವದ ಇಂದು ಆತಂಕಕಾರಿ ಸ್ಥಿತಿಯಲ್ಲಿದ್ದು, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಎಲ್ಲ ಹಂತಗಳಲ್ಲಿಯೂ ಬೇರು ಬಿಟ್ಟಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಅವಶ್ಯಕತೆ ಇದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕಮ್ಯುನಿಸ್ಟ್ ಪಕ್ಷದ ಮೇಲೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚಿದ್ದು, ಪ್ರಜಾತಾಂತ್ರಿಕ ಹೋರಾಟವನ್ನು ತೀಕ್ಷ್ಣ ಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

      ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸಿಪಿಐ ಕಾರ್ಮಿಕರು ಹಾಗೂ ಶ್ರಮಿಕರ ಪರವಾದ ಪಕ್ಷವಾಗಿ ಕಾರ್ಯ ನಿರ್ವಹಿ ಸುತ್ತಿದ್ದು, ಪಕ್ಷದ ನಿಧಿ ಎಲ್ಲವೂ ಪಾರದರ್ಶಕವಾಗಿದ್ದು, ಪಕ್ಷದ ಆದಾಯ ಮೂಲಗಳು ಜನರೇ ಆಗಿರುವುದರಿಂದ ಪಕ್ಷಕ್ಕೆ ನೀಡಿದ ಹಣವನ್ನು ಸಾರ್ವಜನಿಕ ಹೋರಾಟಕ್ಕೆ ವೆಚ್ಚ ಮಾಡಲಾಗುವುದರಿಂದ ಪಕ್ಷಕ್ಕೆ ಎಲ್ಲೆಡೆ ಸಾಕಷ್ಟು ಬೆಂಬಲವಿದೆ ಎಂದು ಅಭಿಪ್ರಾಯ ಪಟ್ಟರು.

      ನಗರದ ವಿವಿಧೆಡೆ ಸಂಚರಿಸಿ ಪಕ್ಷಕ್ಕಾಗಿ ನಿಧಿ ಸಂಗ್ರಹವನ್ನು ಮಾಡಲಾಯಿತು. ಅಭಿಯಾನದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಶಿವಣ್ಣ, ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಶನ್ ರಾಜ್ಯಾಧ್ಯಕ್ಷೆ ಜ್ಯೋತಿ, ಜಿಲ್ಲಾ ಕಾರ್ಯದರ್ಶಿ ಕಾ||ಗಿರೀಶ್, ಜಿಲ್ಲಾ ಸಹಕಾರ್ಯದರ್ಶಿಗಳಾದ ಕಾ||ಅಶ್ವತ್ಥ್‍ನಾರಾಯಣ, ಶಶಿಕಾಂತ್, ಕಾಂತರಾಜು, ಸತ್ಯನಾರಾಯಣ ಇತರರಿದ್ದರು.

 

(Visited 13 times, 1 visits today)

Related posts

Leave a Comment