3ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿಖರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಿಇಒ ಸೂಚನೆ

 ತುಮಕೂರು : 

      ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜನವರಿ 7ರಂದು ನಡೆಯಲಿರುವ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ನೀಡುವ ಅಂಕಿ-ಅಂಶಗಳು ನಿಖರ ಹಾಗೂ ಸ್ಪಷ್ಟವಾಗಿರಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಇಲಾಖಾ ಪ್ರಗತಿ ಕಡಿಮೆಯಿದ್ದರೆ ಸ್ವಷ್ಟ ಕಾರಣ ನೀಡಬೇಕು ಹಾಗೂ ಅದನ್ನು ಷರಾದಲ್ಲಿ ನಮೂದಿಸಬೇಕು ಎಂದು ಸೂಚನೆ ನೀಡಿದರು.

        ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 249590 ರೈತರಿಗೆ 3ನೇ ತ್ರೈಮಾಸಿಕದಲ್ಲಿ ಮೊತ್ತ ಪಾವತಿ ಬಾಕಿಯಿದೆ. ಈಗಾಗಲೇ ಎಫ್‍ಟಿಒ ಜನರೇಟ್ ಆಗಿದ್ದು, ಅವರಿಗೆ ಶೀಘ್ರದಲ್ಲೇ ಮೊತ್ತ ಪಾವತಿಯಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಸಭೆಗೆ ಮಾಹಿತಿ ತಿಳಿಸಿದರು.
ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಜಿಲ್ಲೆಯಲ್ಲಿ ಯಾವ್ಯಾವ ಬೆಳೆಗಳಿಗೆ ಬೆಳೆವಿಮೆಯಿದೆ ಎಂಬ ಮಾಹಿತಿಯನ್ನು ಕೆಡಿಪಿ ಸಭೆಯಲ್ಲಿ ಒದಗಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

       ಈಗಾಗಲೇ ಜಿಲ್ಲೆಯಲ್ಲಿ 6-9ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಹಾಗೂ 10 ಮತ್ತು 12ನೇ ತರಗತಿಗಳು ಪ್ರಾರಂಭವಾಗಿದ್ದು, ಮಕ್ಕಳ ಹಾಜರಾತಿ, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಮತ್ತು ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳು ಸೇರಿದಂತೆ ಇನ್ನಿತರ ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿ. ನಂಜಯ್ಯ ಮತ್ತು ರೇವಣ ಸಿದ್ದಪ್ಪ ಅವರಿಗೆ ಸೂಚಿಸಿದರು.

         ಶಾಲಾ ಕಟ್ಟಡ ದುರಸ್ತಿ, ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಗಳಡಿ ಕೈಗೊಂಡಿರುವ ಕಟ್ಟಡ ನಿರ್ಮಾಣಗಳ ಪ್ರಗತಿ ಬಗ್ಗೆ ಪಿಆರ್‍ಇಡಿ, ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ನಿರ್ಮಾಣ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಿಖರ ಮಾಹಿತಿಯನ್ನು ಸಭೆಗೆ ಒದಗಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 3 times, 1 visits today)

Related posts

Leave a Comment