ತುಮಕೂರು : 

      ಸ್ಮಾರ್ಟ್‍ಸಿಟಿಯ ಪ್ರಮುಖ ಯೋಜನೆಯಾದ ಸಮಗ್ರ ನಗರ ನಿರ್ವಹಣೆ, ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್‍ನ ಪ್ರಮುಖ ಅಂಶಗಳಾದ ಪರಿಸರ ನಿಗಾವಣೆ ವೆರಿಯಬಲ್ ಮೆಸೆಜಿಂಗ್ ಸಿಸ್ಟಮ್ ಹಾಗೂ ಇ-ಚಲನ್ ಸಿಸ್ಟಮ್‍ಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಅವರು ಚಾಲನೆ ನೀಡಿದರು.

     ತುಮಕೂರು ನಗರದಾದ್ಯಂತ 5 ಸ್ಥಳಗಳಾದ ಎಸ್‍ಐಟಿ ಕಾಲೇಜು, ಶಿವಕುಮಾರ ಸ್ವಾಮೀಜಿ ವೃತ್ತ, ಕಾಲ್ಟೆಕ್ಸ್ ವೃತ್ತ, ಸೈನ್ಸ್ ಥೀಮ್ ಪಾರ್ಕ್ ಆವರಣದಲ್ಲಿ ಮತ್ತು ಪೊಲೂಷಿಯನ್ ಕಂಟ್ರೋಲ್ ರೂಂ ಬಳಿ ಪರಿಸರ ಮಾಪಕಗಳನ್ನು ಅಳವಡಿಸಲಾಗಿದ್ದು, ಇದು ಧೂಳಿನ ಕಣಗಳಾದ 10, 2.5, ಹವಾಮಾನ ಬದಲಾವಣೆ, ಓಜೋನ್, ಶಬ್ದಮಾಲಿನ್ಯ, ಉಷ್ಣತೆ, ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್ ನಂತಹ ಇತರೆ ಹವಾಮಾನ ಗುಣಮಟ್ಟವನ್ನು ದಾಖಲಿಸುವುದರ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ವೀಕ್ಷಣಾ ಪರದೆಗಳನ್ನು ಹೊಂದಿದೆ. ಈ ಸೌಲಭ್ಯವನ್ನು ‘ಸ್ಮಾರ್ಟ್ ತುಮಕೂರು’ ಮೊಬೈಲ್ ಅಪ್ಲಿಕೇಷನ್ ಮುಖಾಂತರ ಸಾರ್ವಜನಿಕರು ಸಹ ವೀಕ್ಷಿಸಬಹುದಾಗಿದೆ.

      ವೇರಿಯಬಲ್ ಮೆಸೆಜಿಂಗ್ ವ್ಯವಸ್ಥೆಯಲ್ಲಿ ತುಮಕೂರು ನಗರದಾದ್ಯಂತ 6 ಸ್ಥಳಗಳಾದ ಬಟವಾಡಿ, ಕುಣಿಗಲ್ ವೃತ್ತ, ಗುಬ್ಬಿ ಗೇಟ್, ಸಿರಾ ಗೇಟ್, ಹೊರವರ್ತುಲ ರಸ್ತೆಯ ಶೆಟ್ಟಿಹಳ್ಳಿ ವೃತ್ತದ ಬಳಿ ಮತ್ತು ಶಿವಕುಮಾರ ಸ್ವಾಮೀಜಿ ವೃತ್ತದ ಬಳಿಯಲ್ಲಿ ಈ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಅಗತ್ಯವಿರುವ ಪ್ರಮುಖ ಮಾಹಿತಿಯನ್ನು ಪ್ರದರ್ಶಿಸಲಾಗುವುದು. ಪೊಲೀಸ್ ಮತ್ತು ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಯನ್ನು ರವಾನಿಸಬಹುದಾಗಿದೆ.   

      ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಇ-ಚಲನ್ ಸಿಸ್ಟಮ್‍ಗೆ ಚಾಲನೆ ನೀಡಲಾಯಿತು. ಸಂಚಾರ ನಿಯಮ ಉಲ್ಲಂಘನೆ, ರೆಡ್ ಲೈಟ್ ಉಲ್ಲಂಘನೆ, ಟ್ರಿಪಲ್ ರೈಡಿಂಗ್ ಮತ್ತು ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವರನ್ನು ಗುರುತಿಸಿ ಕಮ್ಯಾಂಡ್ ಸೆಂಟರ್‍ನಲ್ಲಿಯೇ ಇ-ಚಲನ್‍ಗಳನ್ನು ತಯಾರಿಸಿ ದಂಡ ವಿಧಿಸಬಹುದಾಗಿದೆ.

(Visited 14 times, 1 visits today)