ತುಮಕೂರು:

      ಕೋವಿಡ್-19ಕ್ಕೆ ಲಸಿಕೆ ಲಭ್ಯವಾದಾಗ ಯಾವುದೇ ಲೋಪ, ಆತಂಕವಿಲ್ಲದಂತೆ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಏಳು ಕಡೆ ಅಣುಕು ಲಸಿಕಾ ವಿತರಣಾ ತಾಲೀಮು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ತಿಳಿಸಿದರು.

      ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಅಣುಕು ಲಸಿಕಾ ವಿತರಣಾ ತಾಲೀಮು(ಡ್ರೈರನ್) ಪೂರ್ವ ಸಿದ್ಧತೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಅಣುಕು ಲಸಿಕಾ ವಿತರಣೆಯಲ್ಲಿ ಬದಲಾವಣೆಗಳ ಅಂಶಗಳೇನಾದರೂ ಕಂಡುಬಂದಲ್ಲಿ ಅದನ್ನು ಸರಿಪಡಿಸುವ ಪ್ರಕ್ರಿಯೆ ಮಾಡಲಾಗುವುದು ಎಂದು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ಫೋಲಿಯೋ ಸೇರಿದಂತೆ ಅನೇಕ ಲಸಿಕಾ ಅಭಿಯಾನಗಳನ್ನು ವರ್ಷ ಪೂರ್ತಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಆದರೂ, ಕೋವಿಡ್-19ಕ್ಕೆ ಮೊದಲ ಬಾರಿ ಲಸಿಕಾ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಅಣುಕು ಲಸಿಕಾ ತಾಲೀಮು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಗೆ ಲಸಿಕೆ ತರಲು ಸಂಪೂರ್ಣ ಸಿದ್ಧತೆಯಾಗಿದೆಯಾ?, ಲಸಿಕೆ ಪಡೆದ ಫಲಾನುಭವಿ ವಿಶ್ರಾಂತಿ ಪಡೆದುಕೊಳ್ಳಲು ಲಸಿಕಾ ಕೇಂದ್ರಗಳಲ್ಲಿ ವಿಶ್ರಾಂತಿ ಕೊಠಡಿ ವ್ಯವಸ್ಥೆ ಇದೆಯಾ? ಎಂಬುದನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು.

       ಕೋವಿನ್ ತಂತ್ರಾಶದ ಅಭಿವೃದ್ಧಿ, ಕಾರ್ಯಕ್ಷಮತೆ, ಲಸಿಕೆ ನೀಡುವ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಪರೀಕ್ಷಿಸಲು ಜಿಲ್ಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆ, ಕ್ಯಾತ್ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಕೋತಿತೋಪು ನಗರ ಆರೋಗ್ಯ ಕೇಂದ್ರ, ಗುಬ್ಬಿ ತಾಲೂಕು ಎಂ.ಎನ್. ಕೋಟೆಯ ಸಮುದಾಯ ಆರೋಗ್ಯ ಕೇಂದ್ರ, ಶಿರಾಗೇಟ್‍ನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ಏಳು ಕಡೆ ಅಣುಕು ಲಸಿಕಾ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಲಸಿಕೆ ನೀಡಲು ಕೋವಿನ್ ತಂತ್ರಾಂಶದಲ್ಲಿ 19485 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಲಸಿಕೆ ಸಂಗ್ರಹಿಸಲು ಜಿಲ್ಲೆಯಲ್ಲಿ 132 ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಲಸಿಕಾ ವಿತರಣೆಗೆ ಸಂಬಂಧಿಸಿದಂತೆ ನಿಯೋಜಿತ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು, ಈ ಅಭಿಯಾನವನ್ನು ಪರಿಣಾಮಕಾರಿಯಾಗಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ರಜನಿ, ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ಕೇಶವರಾಜ್, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಮೋಹನ್ ದಾಸ್ ಇದ್ದರು.

 

(Visited 8 times, 1 visits today)