ತುಮಕೂರು : 

       ಗ್ಯಾಟ್ ಒಪ್ಪಂದದ ನಂತರ ಜಾರಿಗೆ ಬಂದ ಜಾಗತೀಕರಣ ಉದಾರೀಕರಣ, ಖಾಸಗೀಕರಣದ ಫಲವಾಗಿ 1991ರ ನಂತರ ಸರಕಾರಗಳು ಬದಲಾದರೂ ನೀತಿಗಳು ಬದಲಾಗುತ್ತಿಲ್ಲ. ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರದಲ್ಲಿ ದೇಶವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಬಹುವೇಗವಾಗಿ ನಡೆಯುತ್ತಿದೆ ಎಂದು ಚಿಂತಕ ಮತ್ತು ಅಂಕಣಕಾರ ಶಿವಸುಂದರಂ ಅಭಿಪ್ರಾಯಪಟ್ಟಿದ್ದಾರೆ.

       ನಗರದ ಕನ್ನಡ ಭವನದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ, ವಿವಿಧ ರೈತ, ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಜನವರಿ 26ರ ರೈತರ ಫೇರೆಡ್‍ನ ಪೂರ್ವಭಾವಿ ಸಭೆಯಲ್ಲಿ ರೈತರಿಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡ ಕ್ಯಾಲೇಂಡರ್, ಡೈರಿ, ಕರಪತ್ರ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು, 2019ರ ಚುನಾವಣೆ ನಂತರ ದೇಶದ ಸಂಪನ್ಮೂಲವನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಹರಾಜು ಹಾಕಲಾಗುತ್ತಿದೆ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು.

      ಜ.26 ರಂದು ನಡೆಯಲಿರುವ ಟ್ರಾಕ್ಟರ್ ರ್ಯಾಲಿ ಐತಿಹಾಸಿಕ ದಿನ, ಗಣರಾಜ್ಯೋತ್ಸವ ಸೈನಿಕ ಶಕ್ತಿ ಪ್ರದರ್ಶಿಸಲು ಪರೇಡ್ ನಡೆಸಿದರೆ, ರೈತಾಪಿಗಳ ಅಸ್ಮಿತೆಯ ಸಂಕೇತವಾಗಿರುವ ಟ್ರಾಕ್ಟರ್ ಪರೇಡ್ ನಡೆಯಲಿದೆ.ರೈತರು, ಪ್ರಗತಿಪರರು, ಜನಸಾಮಾನ್ಯರು ಈ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಅಸ್ಮಿತಗೆ ಉಂಟಾಗಿರುವ ಕಂಟಕವನ್ನು ನಿವಾರಿಸಬೇಕಾಗಿದೆ ಎಂದು ಶಿವಸುಂದರಂ ಕರೆ ನೀಡಿದರು.

       ಸರಕಾರ ರೈತರ ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಿಲ್ಲ.ಹಾಗಾಗಿ ಹಿಂದಿನ ಬಾಗಿಲಿನಿಂದ ಎಂಎಸ್ಪಿಯನ್ನು ರದ್ದು ಮಾಡಲು ಹವಣಿಸುತ್ತಿದೆ.ದೇಶದಲ್ಲಿ ಜಾರಿಗೆ ತಂದಿರುವ ಆಹಾರ ಭದ್ರತೆ ಯೋಜನೆಯಡಿ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ನೀಡಬೇಕು.ಆದರೆ 2015ರ ನಂತರ ಬಡವರಿಗೆ ಉಚಿತ ಆಹಾರ ನೀಡಲು ಸರಕಾರದ ಬಳಿ ಹಣವಿಲ್ಲ ಎಂದು ಹೇಳಲಾಗುತ್ತಿದೆ.ಸರಕಾರ ಅದಕ್ಕಾಗಿಯೇ ದೇಶದಲ್ಲಿ ಬಡವರು, ಕಡುಬಡವರು ಎಂದು ವಿಭಜಿಸಲು ಹೊರಟಿದೆ ಎಂದು ಶಿವಸುಂದರಂ ಆರೋಪಿಸಿದರು.

      ದೇಶದ ಬಜೆಟ್‍ನ ಶೇ 1 ರಷ್ಟು ಹಣ ಖರ್ಚು ಮಾಡಿದರೆ,ದೇಶದ ಉತ್ಪನ್ನಕ್ಕೆ ಅಗತ್ಯವಾದ ಉಗ್ರಾಣ ಸಿದ್ಧವಾಗುತ್ತದೆ.ಆದರೆ ಸರಕಾರ ಅದಕ್ಕೆ ಅನುದಾನವಿಲ್ಲ ಎಂದು ಆಹಾರ ನೀಡುವುದನ್ನು ಕಡಿಮೆ ಮಾಡುತ್ತಿದೆ, ಒಪ್ಪಂದ ಕೃಷಿಯ ಮೂಲಕ ಆದಾನಿ, ಅಂಬಾನಿಗಳೇ ದೇಶದ ರೈತರ ಭೂಮಿ, ಜಲವನ್ನು ಕಸಿಯುತ್ತಿದ್ದಾರೆ.ಅವರಿಗೆ ಲಾಭ ಮಾಡಿಕೊಡುವ ಉದ್ದೇಶವನ್ನುಈ ಸರಕಾರ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಎಐಕೆಎಸ್‍ಎಸ್‍ನ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ,ಎಪಿಎಂಸಿ ಕಾಯ್ದೆಯ ಜಾರಿಯ ಹಿಂದೆ ದೊಡ್ಡ ಹೋರಾಟವೇ ಇದೆ.ಬಿಹಾರ, ಕೇರಳ, ಮಣಿಪುರದಲ್ಲಿ ಎಪಿಎಂಸಿ ಕಾಯ್ದೆ ಇಲ್ಲ.ಆದರೆ ಆಯಾಯ ರಾಜ್ಯಗಳ ರೈತರ ಸಾಧಕ, ಭಾಧಕಗಳನ್ನು ಅರ್ಥ ಮಾಡಿಕೊಳ್ಳದೆ, ಇಡೀ ದೇಶಕ್ಕೆ ಒಂದೇ ಕಾನೂನು ತರಲು ಹೊರಟಿದೆ. ರೈತ ಆಯೋಗದ ಶಿಫಾರಸ್ಸಿನ ಬಗ್ಗೆ ಸರಕಾರ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಪುಡ್ ಕಾಪೆರ್Çೀರೇಷನ್ ದಿವಾಳಿಯಾಗಿಸುವ ನಿಟ್ಟಿನಲ್ಲಿ ಸಾಲದ ಹೊರೆ ಹಾಕಲಾಗಿದೆ.ಶೇ.8 ರ ಬಡ್ಡಿ ದರದಲ್ಲಿ 2.65 ಲಕ್ಷ ಕೋಟಿ ಸಾಲವನ್ನು ಪಡೆದಿದ್ದು,ಫುಡ್ ಕಾಪೆರ್Çೀರೇಷನ್ ಅನ್ನು ಮಾರುವುದಕ್ಕೆ ಸರಕಾರ ವೇದಿಕೆ ನಿರ್ಮಾಣ ಮಾಡುತ್ತಿದೆ.ಕಾಪೆರ್Çೀರೇಟ್ ಸಂಸ್ಥೆಗಳಿಂದಲೇ ಸಣ್ಣ ಮತ್ತು ಅತಿ ಸಣ್ಣ ರೈತರ ಭೂಮಿ ಕಸಿಯಲು ಒಪ್ಪಂದದ ಕೃಷಿ ಜಾರಿಗೆ ತಂದಿದೆ.ಭೂಸ್ವಾಧೀನ ತಿದ್ದುಪಡಿಯಿಂದ ವಿದ್ಯುತ್ ಕಾಯ್ದೆ ತಿದ್ದುಪಡಿ ವರೆಗೆ ಬಂದು ನಿಂತಿದೆ.ಭೂಮಿಯನ್ನು ಲಾಭದಾಯಕವಾಗದ ಕಾರಣಕ್ಕೆ ರೈತರು ವಲಸೆ ಹೋಗುತ್ತಿದ್ದಾರೆ.ಕೃಷಿ ಮೇಲೆ ಬಂಡವಾಳ ಹೂಡುವುದಕ್ಕಾಗಿ ಕೈಗಾರಿಕಾ ಕೃಷಿ ಜಾರಿಗೆ ಮುಂದಾಗಿದೆ ಎಂದು ಯತಿರಾಜು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ, ಕೇಂದ್ರ ಸರಕಾರದ ಜನವಿರೋಧಿ ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿರುವ ದೆಹಲಿಯ ಹೋರಾಟ ದೇಶ ವಿದೇಶಗಳ ಗಮನ ಸೆಳೆದಿದೆ.ಒಡೆದು ಚೂರಾಗಿದ್ದ ದಲಿತ ಚಳವಳಿ,ರೈತ ಚಳವಳಿಯ ನಾಯಕರು,ಕೃಷಿ ವಿರೋಧಿ ಮಸೂದೆಗಳ ಹೋರಾಟದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅಪಾಯದಲ್ಲಿರುವ ಗಣತಂತ್ರವನ್ನು ಉಳಿಸುವ ನಿಟ್ಟಿನಲ್ಲಿ ನಾವುಗಳು ಜನವರಿ 26 ರಂದು ನಡೆಯುವ ಈ ಐತಿಹಾಸಿಕ ಹೋರಾಟದಲ್ಲಿ ತಮ್ಮಲ್ಲಿರುವ ವಾಹನಗಳ ಮೂಲಕ ರಾಜಧಾನಿ ಬೆಂಗಳೂರನ್ನು ತಲುಪಿ ಬೃಹತ್ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಾತಂತ್ರ ಚಳವಳಿಯ ಆಶೋತ್ತರಗಳಿಗೆ ವಿರೋಧವಾಗಿರುವ ಸರಕಾರಗಳ ನಡೆಯ ವಿರುದ್ದ ಹೋರಾಡೋಣ, ಹೊಸ ಕೃಷಿ ಕಾಯ್ದೆಗಳನ್ನು ಹಿಂಪ ಡೆಯುವವರೆಗೂ ಹೋರಾಟ ಮುಂದುವರೆಸೋಣ ಎಂದು ಕರೆ ನೀಡಿದರು.
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದಲಿತ ಹೋರಾಟಗಾರರಾದ ಕುಂದೂರು ತಿಮ್ಮಯ್ಯ,ಪಿ.ಎನ್.ರಾಮಯ್ಯ, ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಚಿರತೆ ಚಿಕ್ಕಣ್ಣ
ಎನ್.ಶಿವಣ್ಣ, ಕೃಷಿ ತಜ್ಞರಾದ ಡಾ.ಮಂಜುನಾಥ್,ಡಾ.ಬಸವರಾಜು, ಡಾ.ಅರುಂಧತಿ, ದೊರೆರಾಜು, ಶಂಕರಪ್ಪ, ಆರ್.ಕೆ.ಎಸ್‍ನ ಎಸ್.ಎನ್.ಸ್ವಾಮಿ,ಗೋಪಾಲಗೌಡ, ಪುಟ್ಟಕಾಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

(Visited 18 times, 1 visits today)