ತುಮಕೂರು : 

      ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಯತ್ನಾಳ್ ಮತ್ತು ನನಗೂ ಮುಖ್ಯಮಂತ್ರಿಯಾಗಲು ಇನ್ನೂ ಕಾಲಾವಕಾಶ ಇದೆ ಎಂದು ನೂತನ ಆಹಾರ ಸಚಿವ ಉಮೇಶ್ ಕತ್ತಿ ಇಂದಿಲ್ಲಿ ತಿಳಿಸಿದರು.

ಬಿಜೆಪಿ ಪಕ್ಷದಲ್ಲಿ 75 ವರ್ಷದವರೆಗೂ ಮುಖ್ಯಮಂತ್ರಿಯಾಗಲು ಅವಕಾಶ ಇದೆ. ಆ ಸಮಯ ಬಂದಾಗ, ಮುಖ್ಯಮಂತ್ರಿ ಕುರ್ಚಿ ಖಾಲಿಯಾದಾಗ ನಾನೇ ಹೇಳುತ್ತೇನೆ. ಸದ್ಯಕ್ಕಂತೂ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದರು.

ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ್ ನನ್ನ ಆತ್ಮೀಯ ಮಿತ್ರರು. ವಯಸ್ಸಿನಲ್ಲಿ ನಾನು ಯತ್ನಾಳ್‍ಗಿಂತಲೂ 3 ವರ್ಷ ದೊಡ್ಡವನು. ನನಗೆ 60 ವರ್ಷ, ಯತ್ನಾಳ್‍ಗೆ 57. ನಾವಿನ್ನೂ ಮುಖ್ಯಮಂತ್ರಿಯಾಗಲು ಸಮಯ ಇದೆ ಎಂದರು.

      ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಮೇಲೆ ವಿಶ್ವಾಸವಿಟ್ಟು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಿದ್ದಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಅವರು ಹೇಳಿದರು.

      ರಾಜ್ಯದ 4 ಕೋಟಿ 36 ಲಕ್ಷ ಜನತೆಗೆ ಆಹಾರ ಭದ್ರತೆ ಮತ್ತು ಆಹಾರ ವಿತರಣೆ ಮಾಡುವಂತಹ ಖಾತೆ ನನದಾಗಿದೆ. ಈ ಖಾತೆ ಬೇರೆಯವರಿಗೆ ನೀಡದೆ ನನಗೆ ನೀಡಿರುವುದು ನೂರಕ್ಕೆ ನೂರರಷ್ಟು ಸಂತಸ ತಂದಿದೆ ಎಂದರು.

      ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಯಾವುದೇ ರೀತಿಯ ತೊಂದರೆ ಹಾಗೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶ ಹೊಂದಿದ್ದು, ಇವರೆಲ್ಲರಿಗೂ ಸಮರ್ಪಕವಾಗಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಆಹಾರ ಇಲಾಖೆಯಲ್ಲಿ ರಾಜ್ಯಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತಹ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು.

      ಪ್ರತ್ಯೇಕ ರಾಜ್ಯ ರಚನೆ ಸಂಬಂಧ ಹೇಳಿಕೆ ನೀಡಿದ್ದು ಆ ಭಾಗದಲ್ಲಿ ತೊಂದರೆಯಾದ ಸಂದರ್ಭದಲ್ಲಿ ಮಾತ್ರ. ಅಖಂಡ ಕರ್ನಾಟಕ ಒಂದೇ. ಇದರಲ್ಲಿ ಎರಡು ಮಾತಿಲ್ಲ. ತೊಂದರೆಗಳು ಎದುರಾದಾಗ ಸಹಜವಾಗಿಯೇ ಅಂತಹ ಹೇಳಿಕೆಗಳು ನೀಡಿದ್ದೇವೆ ಅಷ್ಟೆ ಎಂದರು.
ಉತ್ತರ ಕರ್ನಾಟಕ ಭಾಗಕ್ಕೆ ತೊಂದರೆಯಾದಾಗ ಆ ಭಾಗದ ಜನಪ್ರತಿನಿಧಿಗಳಾಗಿ ನಮ್ಮ ಜವಾಬ್ದಾರಿ ಅರಿತು ನಾವು ಕೆಲಸ ಮಾಡಬೇಕಾಗುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಕಳು, ಹೋರಿಗೆ ಪರಿಹಾರ ಕೊಟ್ಟರು. ಆದರೆ ನಮ್ಮ ಕಡೆ ಎಮ್ಮೆ ಮತ್ತು ಕೋಣಗಳಿಗೆ ಪರಿಹಾರ ಕೊಡಲಿಲ್ಲ. ಆಗ ಪರಿಹಾರ ಕೊಡುವಂತೆ ಹೋರಾಟ ಮಾಡಿದ್ದು ನಿಜ ಎಂದರು

      ಹಳೇ ಮೈಸೂರು ಪ್ರಾಂತ್ಯ, ಬಾಂಬೆ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಈ ಮೂರು ಪ್ರಾಂತ್ಯಗಳು ಸೇರಿ ಕರ್ನಾಟಕ ರಾಜ್ಯವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣ ನದಿ ಹರಿಯುತ್ತಿದೆ. ಈ ನದಿಯ 2ನೇ ಸ್ಕೀಂ ನಿಂದ ಹರಿಸುತ್ತಿರುವ 905 ಟಿ.ಎಂ.ಸಿ. ನೀರನ್ನು ನಿಲ್ಲಿಸಬೇಕು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ ಎಂದ ಅವರು, ಅಗತ್ಯ ಬಿದ್ದರೆ ಬೆಂಗಳೂರು ನಗರದ ಜನತೆಗೆ ಕೃಷ್ಣನದಿ ನೀರನ್ನು ಕುಡಿಯಲು ಕೊಡಲು ನಮ್ಮ ತಕರಾರೇನೂ ಇಲ್ಲ ಎಂದರು.

      ಈ ಸಂದರ್ಭದಲ್ಲಿ ಹನುಮಂತಪ್ಪ ಕೊಟ್ಟಬಾಗಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಮತ್ತಿತರರು ಉಪಸ್ಥಿತರಿದ್ದರು.

(Visited 15 times, 1 visits today)