ತುಮಕೂರು :

     ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವ ‘ಜಿಐಎಸ್’ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿ ನೀಡುವ ‘ಶುದ್ಧನೀರು’ ಮೊಬೈಲ್ ತಂತ್ರಾಂಶಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

      ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ದಿಶಾ ಸಮಿತಿ ಸಭೆಯಲ್ಲಿ ಸಂಸದರಾದ ಜಿ.ಎಸ್.ಬಸವರಾಜು ಚಾಲನೆ ನೀಡಿದರು.

ಆರಂಭದಲ್ಲಿ ಕಾರ್ಯಕ್ರಮದ ಅನುಷ್ಠಾನ ಕುರಿತು ಯೋಜನಾ ನಿರ್ದೇಶಕ ಎಂ.ಜಯಚಂದ್ರನ್ ಮಾತನಾಡಿ, ಭೌಗೋಳಿಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯಡಿ ಜಿಐಎಸ್ ಅಪ್ಲಿಕೇಶನ್ ಮೂಲಕ ಜಿಲ್ಲೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು. ಜಿಐಎಸ್ ವೆಬ್ ಸೈಟ್‍ನಲ್ಲಿ ಜಿಲ್ಲೆಯ ನಗರ, ಪಟ್ಟಣ, ಹೋಬಳಿ, ಗ್ರಾಮ ಪಂಚಾಯಿತಿ ಹಾಗೂ ಸರ್ವೆ ನಂಬರ್ ಪ್ರಕಾರ ಸಂಪರ್ಕ ರಸ್ತೆ, ಸರ್ಕಾರದ ಇಲಾಖೆ, ಕಚೇರಿ ಇಲಾಖೆಗಳ ಯೋಜನಾವಾರು ಕಾರ್ಯಕ್ರಮಗಳ ಅಂಕಿಅಂಶಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

      ಬಳಿಕ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ತುಮಕೂರು ಜಿಐಎಸ್ ವೆಬ್ ಪೆÇೀರ್ಟಲ್ ರಾಜ್ಯದ ಮೊದಲ ವೆಬ್ ಪೋರ್ಟಲ್ ಆಗಿದ್ದು, ಜಿಲ್ಲೆಯ ಎಲ್ಲಾ ಅಂಕಿಅಂಶಗಳನ್ನೊಳಗೊಂಡಂತೆ ಇಲಾಖಾವಾರು / ಯೋಜನವಾರು ಮಾಹಿತಿಯನ್ನು ಅಳವಡಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಡೇಟಾ ಸಂಗ್ರಹಣೆ/ ನವೀಕರಣ, ಜಿಯೋ-ಟ್ಯಾಗಿಂಗ್ ಮಾಡುವ ಕಾರ್ಯದ ಸಲುವಾಗಿ ‘ಶುದ್ಧನೀರು’ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದ್ದು, ಈ ಎರಡು ತಂತ್ರಾಂಶಗಳಿಗೆ ಚಾಲನೆ ನೀಡಲಾಗಿದೆ. ಈವರೆಗೆ ಜಿಐಎಸ್ ಪೋರ್ಟಲ್ ನಲ್ಲಿ 40 ಇಲಾಖೆಗಳ 270ಕ್ಕೂ ಅಧಿಕ ಲೇಯರ್ ಮಾಹಿತಿಯನ್ನು ಇಂದೀಕರಿಸಲಾಗಿದೆ ಎಂದು ಹೇಳಿದರು.

      ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ತುಮಕೂರು ಜಿಐಎಸ್ ಪೋರ್ಟಲ್ ಅಭಿವೃದ್ಧಿ ಪಡಿಸಿ ಅದರಲ್ಲಿ ಮಾಹಿತಿ ಸಂಗ್ರಹಿಸುವ ಗುರಿ ಎಲ್ಲರ ಸಹಕಾರದಿಂದ ಸಾಕಾರಗೊಂಡಿದೆ. ಜಿಲ್ಲೆಯ ಎಲ್ಲಾ ಇಲಾಖೆಗಳು ಸಂಪೂರ್ಣ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಅಪ್ಡೇಟ್ ಆಗದೆ ಉಳಿದಿರುವ ಮಾಹಿತಿಯನ್ನು ಅಪ್ಡೇಟ್ ಮಾಡಿ ನೂರರಷ್ಟು ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಎಲ್ಲಾ ಅಧಿಕಾರಿಗಳು ಕೈಜೋಡಿಸಬೇಕು ಎಂದು ತಿಳಿಸಿದರು.

      ಸಂಸದರಾದ ಜಿ.ಎಸ್.ಬಸವರಾಜು ಮಾತನಾಡಿ, ಜಿಲ್ಲೆಯ ಗ್ರಾಮ ಮಟ್ಟದಿಂದ ಹಿಡಿದು ಸಕಲ ಮಾಹಿತಿಯನ್ನು ಪ್ರಾಥಮಿಕ ಹಂತದಿಂದ ಸಂಗ್ರಹಿಸಿ ಲೋಪವಿಲ್ಲದಂತೆ ಪಾರದರ್ಶಕವಾಗಿ ಕಾಲಕಾಲಕ್ಕೆ ಜಿಐಎಸ್ ಅಪ್ಲಿಕೇಶನ್‍ಗೆ ಅಪ್ಡೇಟ್ ಮಾಡಬೇಕು.

      ಸ್ವಾತಂತ್ರ್ಯ ನಂತರ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಖರ ಮಾಹಿತಿಯನ್ನೂ ಅಳವಡಿಸಬೇಕು. ಈ ಕಾರ್ಯಾನುಷ್ಠಾನದಿಂದ ಸಮರ್ಪಕ ಅನುದಾನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆಯುವ ಮೂಲಕ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

      125 ಉತ್ಪನ್ನಗಳನ್ನು ತಯಾರಿಸಬಹುದಾದ ತೆಂಗು ಉತ್ಪನ್ನಕ್ಕೆ ಹಾಗೂ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ. ರಘು ಅವರಿಗೆ ಸೂಚಿಸಿದ ಸಚಿವರು, ರೇಷ್ಮೆ, ಕೃಷಿ, ಕೆವಿಕೆ, ತೋಟಗಾರಿಕೆ ಇಲಾಖೆಗಳು ಸಮನ್ವಯ ಸಾಧಿಸಿ ಜಂಟಿಯಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಗತಿ ಕೈಗೊಳ್ಳುವಂತೆ ನಿರ್ದೇಶಿಸಿದರು.

      ತುಮಕೂರು ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಿಗೂ ಮತ್ತು ಕಾಲೋನಿಗಳಿಗೂ ವಿದ್ಯುತ್ ಸರಬರಾಜು ಆಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಒದಗಿಸಬೇಕು. ಜಿಲ್ಲೆಯಲ್ಲಿ ಯಾವುದೇ ಗ್ರಾಮ ಹಾಗೂ ಕಾಲೋನಿಯೂ ವಿದ್ಯುತ್‍ನಿಂದ ವಂಚಿತವಾಗದಂತೆ ವಿದ್ಯುತ್ ಕಲ್ಪಿಸಬೇಕು ಎಂದು ಬೆಸ್ಕಾಂ ಅಧಿಕಾರಿಗೆ ಸೂಚಿಸಿದರು.

      ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿಲ್ಲ ಎಂಬ ಬಗ್ಗೆ ವರದಿಯಾಗಿದೆ ನೀವು ಲಸಿಕೆ ತೆಗೆದುಕೊಂಡಿಲ್ಲವಾ ಎಂದು ಡಿಎಚ್‍ಒ ನಾಗೇಂದ್ರಪ್ಪ ಅವರಿಗೆ ಸಂಸದ ಜಿ.ಎಸ್.ಬಸವರಾಜು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‍ಒ ಅವರು, ನಾನು ಲಸಿಕೆ ಪಡೆದಿದ್ದೇನೆ. ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಈವರೆಗೆ ಯಾವುದೇ ಅಡ್ಡಪರಿಣಾಮವಾಗಿಲ್ಲ ಎಂದು ಹೇಳಿದರು.

      ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಡಬೇಕಾದ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಹಾಗೂ ಜಿಲ್ಲೆಯಲ್ಲಿ ಹೆಚ್ಚು ಪ್ರಾಣಿ-ಪಕ್ಷಿಗೆ ಉಪಯೋಗವಾಗುವ ಹಣ್ಣಿನ ಸಸಿಗಳನ್ನು ನೆಡುವಂತೆ ಸೂಚಿಸಿದ ಸಚಿವರು, ಶಾಲಾ ಕಟ್ಟಡ ಅಭಿವೃದ್ಧಿ, ಕುಡಿಯುವ ನೀರು, ವಸತಿ ಯೋಜನಾ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

      ವಿಧಾನ ಪರಿಷತ್ ಶಾಸಕ ತಿಪ್ಪೇಸ್ವಾಮಿ ಮಾತನಾಡಿ, ಜಿಐಎಸ್ ಲೈವ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಅದರ ಅಪ್‍ಡೇಟ್ ಬಗ್ಗೆ ಡೈಲಿ ಮಾನಿಟರಿಂಗ್ ಮಾಡಲು ಜಿಲ್ಲಾ ಪಂಚಾಯತಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ (ವಾರ್) ಕೊಠಡಿ ಮಾಡಿದರೆ ಸೂಕ್ತವಾಗಲಿದೆ ಎಂದು ಹೇಳಿದಾಗ, ಸಂಸದ ಜಿ.ಎಸ್.ಬಸವರಾಜು ಪ್ರತಿಕ್ರಿಯಿಸಿ, ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ವಾರ್ ರೂಂ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

      ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ದಿಸಾ ಸಮಿತಿ ಸದಸ್ಯರಾದ ಕೆ.ಎನ್. ಲೋಕೇಶ್ವರಿ, ರಘೋತ್ತಮರಾವ್, ಗೋವಿಂದ್ ರಾವ್, ಪ್ರೇಮಾ ಹೆಗಡೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 

(Visited 11 times, 1 visits today)