ಇಲಾಖಾವಾರು ಬಿಡುಗಡೆಯಾಗಿರುವ ಅನುದಾನವನ್ನು ಮಾರ್ಚ್ ಒಳಗೆ ಖರ್ಚು ಮಾಡಿ: ಜಿ.ಪಂ.ಅಧ್ಯಕ್ಷೆ

 ತುಮಕೂರು :

      ಅಕ್ಷರ ದಾಸೋಹ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಮಾರ್ಚ್ ಮಾಹೆಯೊಳಗೆ ಖರ್ಚು ಮಾಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಸೂಚಿಸಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಇಲಾಖೆಗಳಿಗೆ ಸರ್ಕಾರ ನೀಡಿರುವ ಅನುದಾನವನ್ನು ವ್ಯರ್ಥ ಮಾಡದೇ, ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಕೈಗೊಂಡು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಕೋವಿಡ್-19 ನಂತರ ಶಾಲೆ ಆರಂಭವಾದ ಮೇಲೆ ಶಾಲೆಯ ವಾತಾವರಣ, ಮಕ್ಕಳು ಮತ್ತು ಪೋಷಕರ ಅಭಿಪ್ರಾಯಗಳ ಬಗ್ಗೆ ಡಿಡಿಪಿಐಗಳಿಗೆ ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಡಿಡಿಪಿಐಗಳು, ಶಾಲೆ ಆರಂಭವಾದಗಿನಿಂದ ಶೇ.70ರಷ್ಟು ಹಾಜರಾತಿಯಿದ್ದು, ಮಕ್ಕಳು ಉತ್ಸುಕರಾಗಿಯೇ ಶಾಲೆಗೆ ಬರುತ್ತಿದ್ದಾರೆ. ಇದರಿಂದ ಮಕ್ಕಳ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಬಲವಂತವಾಗಿ ಯಾವ ಮಕ್ಕಳನ್ನು ಶಾಲೆಗೆ ಕರೆ ತಂದಿಲ್ಲ ಎಂದು ಮಾಹಿತಿ ನೀಡಿದರು.

      ದೀರ್ಘಕಾಲದ ನಂತರ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಶಾಲೆಗೆ ಹೊಂದಿಕೊಳ್ಳುವಂತೆ ಮನಸವೊಲಿಸಬೇಕು. ಮಕ್ಕಳಿಗೆ ಭಯಪಡದಂತೆ ಕೋವಿಡ್-19 ಮಾರ್ಗಸೂಚಿಯನ್ವಯ ಮಾಸ್ಕ್ ಧರಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು ಅಲ್ಲದೇ ಮಕ್ಕಳಿಗೆ ಕುಡಿಯಲು ಶುದ್ಧ ನೀರನ್ನು ಕಾಯಿಸಿ ಕೊಡಬೇಕು ಎಂದರಲ್ಲದೆ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛವಾಗಿರಬೇಕು ಎಂದು ಡಿಡಿಪಿಐಗಳಿಗೆ ಸೂಚಿಸಿದರು.

      ಸದಸ್ಯರಾದ ಕೆಂಪಚೌಡಯ್ಯ ಮಾತನಾಡಿ, ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಧುಗಿರಿ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದ್ದು, ಶಿರಾ ತಾಲೂಕಿನಲ್ಲಿ ಕಡಿಮೆ ಫಲಿತಾಂಶ ಬಂದಿದೆ. ಈ ತಾಲೂಕುಗಳಲ್ಲಿರುವ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹೆಚ್ಚಿನ ಫಲಿತಾಂಶ ಬರುವಂತೆ ಗಮನಹರಿಸಬೇಕು ಎಂದರು.

      ಮತ್ತೋರ್ವ ಸದಸ್ಯ ರಾಮಚಂದ್ರಯ್ಯ ಅವರು ಮಾತನಾಡಿ, ರೈತರು ಬೆಳೆದ ರಾಗಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕು ಎನ್ನುವ ಉದ್ದೇಶದಿಂದ ರಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಆದರೆ ರಾಗಿ ಕೇಂದ್ರಗಳಲ್ಲಿ ವರ್ತಕರು ರಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಕೃಷಿ ಇಲಾಖೆ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು, ಜಿಲ್ಲೆಯಲ್ಲಿ ಸ್ಥಾಪಿಸಿರುವ ಒಟ್ಟು 9 ಖರೀದಿ ಕೇಂದ್ರಗಳಲ್ಲಿ ರೈತರೇ ರಾಗಿ ಮಾರಾಟ ಮಾಡುತ್ತಿದ್ದು, ನೇರವಾಗಿ ಅವರ ಖಾತೆಗೆ ಹಣ ಜಮೆಯಾಗುತ್ತಿದೆ. ಈ ಬಗ್ಗೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

      ರೈತರಿಗೆ ಉಪಯೋಗವಾಗುವಂತೆ ಸಾವಯವ ಕೃಷಿ ಬಗ್ಗೆ ತರಬೇತಿ ನೀಡಬೇಕು. ಪ್ರತಿಯೊಬ್ಬ ರೈತನು ತನ್ನ ಬೆಳೆಗೆ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ತಾಕೀತು ಮಾಡಬೇಕು. ಜಿಲ್ಲೆಯ 197263 ಅತಿ ಸಣ್ಣ ರೈತರು, 113436 ಸಣ್ಣ ರೈತರು ಹಾಗೂ 103729 ಇತರೆ ರೈತರಿಗೆ ಸರ್ಕಾರದ ಯೋಜನೆಗಳ ಮಾಹಿತಿ ದೊರೆಯದೇ ಯಾವುದೇ ಸೌಲಭ್ಯಗಳು ತಲುಪುತ್ತಿಲ್ಲ ಸರ್ಕಾರದ ಯೋಜನೆಗಳ ಬಗ್ಗೆ ಹೋಬಳಿ/ಗ್ರಾಮ ಪಂಚಾಯಿತಿ ಹಂತದಲ್ಲಿ ಕೈಪಿಡಿ ರೂಪಿಸಿ ಅಥವಾ ಬಿತ್ತಿಪತ್ರಗಳ ಮೂಲಕ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಸದಸ್ಯರಾದ ಕೆಂಪಚೌಡಯ್ಯ ಅವರು ಕೃಷಿ/ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ, ಕೊರೊನಾ ಲಸಿಕೆ ವಿತರಣೆ ಬಗ್ಗೆ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ ಅವರು ಡಿಹೆಚ್‍ಒ ಡಾ|| ನಾಗೇಂದ್ರಪ್ಪ ಅವರನ್ನು ಮಾಹಿತಿ ಕೇಳಿದಾಗ, ಉತ್ತರಿಸಿದ ಡಿಹೆಚ್‍ಒ ಅವರು, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣವಾಗಿದ್ದು, ಈವರೆಗೂ 173 ಪ್ರಕರಣಗಳು ಸಕ್ರಿಯವಾಗಿದ್ದು, 140 ಪ್ರಕರಣಗಳು ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಜಿಲ್ಲೆಗೆ 36 ಸಾವಿರ ಕೊರೊನಾ ಲಸಿಕೆ ಬಂದಿದ್ದು, ಮೊದಲ ಹಂತದಲ್ಲಿ 16 ಸಾವಿರ ಆರೋಗ್ಯ ಕಾರ್ಯಕರ್ತೆಯರು/ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗಿದೆ. 2ನೇ ಹಂತದಲ್ಲಿ ಪ್ರೆಂಟ್‍ಲೈನ್ ವರ್ಕ್‍ರ್ಸ್‍ಗಳಾದ ಕಂದಾಯ/ಪೊಲೀಸ್/ಪೌರಕಾರ್ಮಿಕರಿಗೆ ನೀಡಲಾಗುತ್ತಿದೆ. ಈವರೆಗೆ ಶೇ.72ರಷ್ಟು ಲಸಿಕೆ ವಿತರಿಸಲಾಗಿದೆ. ಕೋವಿಡ್ ಲಸಿಕೆ ವಿತರಣೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ 50 ವರ್ಷ ಮೇಲ್ಪಟ್ಟ ನಾಗರಿಕರಿಗೆ ನೀಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

      ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಇಲಾಖೆ ವೈದ್ಯರು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಕೋವಿಡ್-19 ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಆರೋಗ್ಯ ಇಲಾಖೆಗೆ ಜಿಲ್ಲಾ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಿದರು.

      ಅರಣ್ಯ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನವನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು. ಅಲ್ಲದೇ ಶಾಲಾ ಮಕ್ಕಳಿಗೆ ಸಸಿ ನೆಡುವ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

      ಬೇಸಿಗೆ ಸಮೀಪಿಸುತ್ತಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವನ್ನು ದಾಸ್ತಾನು ಮಾಡಲು ಸೂಚಿಸಿದರು. ಅಲ್ಲದೇ ಶುದ್ಧ ಕುಡಿಯುವ ನೀರು ಘಟಕಗಳು ಕಾರ್ಯನಿರ್ವಹಿಸದೇ ಇರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ, ಮುಖ್ಯ ಯೋಜನಾಧಿಕಾರಿ ಬಾಲರಾಜ್, ಉಪಕಾರ್ಯದರ್ಶಿ ಕೃಷ್ಣಮೂರ್ತಿ, ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

(Visited 3 times, 1 visits today)

Related posts

Leave a Comment