“ಬಾಲಕಾರ್ಮಿಕ ಮುಕ್ತ ನಡೆ ತುಮಕೂರು ಕಡೆ” ಡಿಸಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ತುಮಕೂರು :

       ತುಮಕೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ “ಬಾಲ ಕಾರ್ಮಿಕ ಮುಕ್ತ ನಡೆ ತುಮಕೂರು ಕಡೆ” ಎಂಬ ಘೋಷ ವಾಕ್ಯದೊಂದಿಗೆ ಫೆಬ್ರವರಿ 26ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

       ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಫೆಬ್ರವರಿ 26ರಂದು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಶಿಷ್ಟಾಚಾರದಂತೆ ಆಹ್ವಾನಪತ್ರಿಕೆಯನ್ನು ಮುದ್ರಿಸಿ ಗಣ್ಯರಿಗೆ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಅವರು ನಿರ್ದೇಶಿಸಿದರು.

ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಕೊರೊನಾ ನಿಯಮಾವಳಿಯನ್ನು ಪಾಲಿಸಬೇಕು. ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಬೇಕು. ಆ ಮಾದರಿಯಲ್ಲಿಯೇ ಕಾರ್ಯಕ್ರಮ ನಡೆಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ತುಮಕೂರು ನಗರದಲ್ಲಿ ಬಾಲಕಾರ್ಮಿಕ ಮುಕ್ತ ನಡೆ ತುಮಕೂರು ಕಡೆ ಎಂಬುದರ ಬಗ್ಗೆ ಜನಜಾಗೃತಿ ಮೂಡಿಸಲು ಬೈಕ್ ರ್ಯಾಲಿ ಕೈಗೊಳ್ಳಲಾಗುವುದು. ಕರಪತ್ರ, ಟ್ಯಾಬ್ಲೋ ಮೂಲಕ ಅರಿವು ಮೂಡಿಸಲಾಗುವುದು ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಾದ್ಯಂತ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಂಘ ಸಂಸ್ಥೆಗಳಿಂದ ಮಕ್ಕಳ ಸಮೀಕ್ಷೆ ಮಾಡಿಸಲಾಗುವುದು. ಮಕ್ಕಳನ್ನು ಯಾವುದೇ ಸಂಸ್ಥೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂಬುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅರಿವು ಮೂಡಿಸಲಾಗುವುದು ಎಂದು ವರ್ಗೀಸ್ ತಿಳಿಸಿದರು.

ಒಂದು ವರ್ಷದಲ್ಲಿ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಯೋಜನೆ ರೂಪಿಸಬೇಕು. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಪರಾಧ. ಹಾಗಾಗಿ ಜಿಲ್ಲೆಯಾದ್ಯಂತ ಕಲ್ಲು ಗಣಿಗಾರಿಕೆ, ಗ್ಯಾರೇಜ್, ವರ್ಕ್ ಶಾಪ್, ಹೋಟೆಲ್, ಇಟ್ಟಿಗೆ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿರುವ ಬಗ್ಗೆ ಗಮನ ಹರಿಸಿ ಬಾಲ ಕಾರ್ಮಿಕಮುಕ್ತ ಜಿಲ್ಲೆಯನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಕಾರ್ಯಕ್ರಮದ ಯಶಸ್ವಿಗಾಗಿ ನಗರದಲ್ಲಿ ಬ್ಯಾನರ್ ಅಳವಡಿಸಲಾಗುವುದು. ಧ್ವನಿ ಮುದ್ರಿಕೆ ಮೂಲಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ರವಿಕುಮಾರ್, ಡಿಹೆಚ್‍ಓ ಡಾ|| ನಾಗೇಂದ್ರಪ್ಪ, ಶಿಕ್ಷಣ ಇಲಾಖೆಯ ಬಂಡಿವೀರಪ್ಪ, ಜಿಲ್ಲಾ ಕಾರ್ಮಿಕಾಧಿಕಾರಿ ಸುಭಾಷ್, ಕಾರ್ಮಿಕ ಇಲಾಖೆಯ ರವಿಕುಮಾರ್, ಆಯೋಗದ ಸದಸ್ಯ ಅಶೋಕ್ ಯರಗಟ್ಟಿ, ನರಸಿಂಹಮೂರ್ತಿ, ತಿಪ್ಪೆಸ್ವಾಮಿ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸೇರಿದಂತೆ ಮತ್ತಿತರರು ಇದ್ದರು.

(Visited 5 times, 1 visits today)

Related posts

Leave a Comment