ತುಮಕೂರು :

      ಕೆಲವು ಹಳ್ಳಿಗಳಲ್ಲಿ ಸರಕಾರದಿಂದ ಜಾರಿಯಾಗುವ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿಯೇ ಇರುವುದಿಲ್ಲ. ಈ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.

      ಕಂದಾಯ ಇಲಾಖೆಯ ‘ಜಿಲ್ಲಾಧಿಕಾರಿಗಳ ನಡೆ-ಗ್ರಾಮಗಳ ಕಡೆ’ ಕಾರ್ಯಕ್ರಮದಡಿ ಜಿಲ್ಲೆಯ ಮಧುಗಿರಿ ತಾಲೂಕು ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಫಲಾನುಭವಿಗಳಿಗೆ ತಲುಪಿಸುವುದು, ಪಹಣಿ ತಿದ್ದುಪಡಿ, ಪೌತಿ ಖಾತೆ, ಮಾಶಾಸನ ಸೌಲಭ್ಯ ನೀಡುವುದು ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರೀತಿಯಿಂದಲೇ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಕಂಡುಕೊಳ್ಳಬಹುದಾದ ಸಮಸ್ಯೆಗಳನ್ನು ಬಗೆಹರಿಸಿ, ಉಳಿದ ಸಮಸ್ಯೆಗಳನ್ನು ಬಗೆಹರಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

      ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 120ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಪೈಕಿ ಮಾಸಾಶನ ಸಂಬಂಧ  ಗ್ರಾಮದ 6 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿ, ಮಾಶಾಸನ ಕೊಡುವ ಆದೇಶ ಪ್ರತಿಗಳನ್ನು ವಿತರಿಸಲಾಯಿತು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸರಕಾರದ ನಿರ್ದೇಶನದ ಅನ್ವಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮ ಕಂದಾಯ ಇಲಾಖೆಯ ಕಾರ್ಯಕ್ರಮವಾಗಿದ್ದರೂ, ವಿವಿಧ ಇಲಾಖೆಗಳ ಅಧಿಕಾರಿಗಳೂ ಸಹ ವಾಸ್ತವ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆಯಾ ಇಲಾಖೆಯ ಸಮಸ್ಯೆ ಆಲಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

      ಸ್ವೀಕರಿಸಿದ ಕೆಲವು ಅರ್ಜಿಗಳು ನ್ಯಾಯಾಲಯಕ್ಕೆ ಸಂಬಂಧಿಸಿವೆ. ಹಾಗಾಗಿ ಅಂತಹ ಅರ್ಜಿಗಳ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಗೆಹರಿಸಲಾಗುವುದು. ಸ್ವೀಕೃತ ಅರ್ಜಿಗಳ ಪೈಕಿ ಸಾಗುವಳಿ ಚೀಟಿ, ಪೌತಿ ಖಾತೆ ಸಮಸ್ಯೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಮಸ್ಯೆಯನ್ನು ವಿಳಂಬ ಮಾಡದೆ ಬಗೆಹರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

      ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ಅಹವಾಲುಗಳು ಬಂದಿದ್ದು ವೈಯಕ್ತಿಕ ಸಮಸ್ಯೆ ಬಗೆಹರಿಸುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು. ವೈಯಕ್ತಿಕ ಸಮಸ್ಯೆಗಳಲ್ಲದೇ ಸಾರ್ವಜನಿಕ ರಸ್ತೆ, ಶಾಲೆ, ಕಟ್ಟಡ, ಆವರಣ, ಸ್ಮಶಾನ ಅಭಿವೃದ್ಧಿ ಮಾಡುವಂತೆಯೂ ಜನರಿಂದ ಬೇಡಿಕೆಗಳು ಬಂದಿವೆ. ಈ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

     ನವೋದಯ ಆ್ಯಪ್ ಮೂಲಕ ಅರ್ಹರಿಗೆ ಮಾಶಾಸನ ಒದಗಿಸುವ ವ್ಯವಸ್ಥೆ ಶೀಘ್ರದಲ್ಲೇ ಬರಲಿದ್ದು, ಅರ್ಹರಿಗೂ ಸೌಲಭ್ಯ ಸಿಗುವ ವ್ಯವಸ್ಥೆಯಾಗಲಿದೆ. ಆಶ್ರಯ ಮನೆಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಿರುವ ಅರ್ಜಿಗಳನ್ನು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

      ಬಿಪಿಎಲ್ ಕಾರ್ಡ್‍ಗಾಗಿ ಅರ್ಜಿಗಳು ಬಂದಿದ್ದು, ಬಿಪಿಎಲ್ ಕಾರ್ಡು ನೀಡುವ ಕುರಿತು ಪರಿಶೀಲಿಸಲಾಗುವುದು. ಗ್ರಾಮ ವಾಸ್ತವ್ಯದಲ್ಲಿ ಬಂದ ಸಮಸ್ಯೆಗಳನ್ನು, ಕಂಡ ಅನುಭವವನ್ನು ಬಗೆಹರಿಸುವಂತೆ ತಹಸೀಲ್ದಾg ಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಅವರು ಹೇಳಿದರು.

      ಲಕ್ಷ್ಮೀಪುರ ಗ್ರಾಮದಲ್ಲಿ ಮಾಸಾಶನ ಕಲ್ಪಿಸುವ ಸಂಬಂಧ ಬಂದಂತಹ ಆರು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿ, ಸೌಲಭ್ಯ ಕೊಡುವ ಆದೇಶ ಪ್ರತಿ ನೀಡಲಾಗಿದೆ. ಉಳಿದ ಸುತ್ತಮುತ್ತ ಗ್ರಾಮದಿಂದ ಬಂದ 10 ಅರ್ಜಿಗಳನ್ನು ಪರಿಶೀಲಿಸಿ ಸೌಲಭ್ಯ ನೀಡಲಾಗುವುದು. ಪಹಣಿಯಲ್ಲಿನ 3 ಮತ್ತು 9ಕಾಲಂಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಹಾಸ್ಟೆಲ್, ಬಸ್ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಈಗಾಗಲೇ ಕಂದಾಯ ಅದಾಲತ್ ಅನ್ನು ಪ್ರಾರಂಭಿಸಲಾಗಿದೆ ಎಂದರು.

      ನಾನು ಈಗಲೂ ಭೂದಾಖಲೆಗಳ ಆಯುಕ್ತರ ಹುದ್ದೆಯಲ್ಲಿಯೂ ಪ್ರಭಾರದಲ್ಲಿರುವುದರಿಂದ ಡಿಜಿಟಲ್ ಆಕಾರ್ ಬಂದ್ ಮೂಲಕ ಪಹಣಿ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕಂದಾಯ, ತೋಟಗಾರಿಕೆ, ಕೃಷಿ, ಆಹಾರ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಇಲಾಖೆಗಳ ಸೌಲಭ್ಯಗಳ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

      ತಾಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ದೊಡ್ಡಸಿದ್ದಯ್ಯ ಮಾತನಾಡಿ, 28 ಕೊಟ್ಟಿಗೆ, 2 ಗೋಕಟ್ಟೆ, ನಿರ್ಮಾಣ ಮಾಡಲಾಗಿದ್ದು, ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲು ನಿವೇಶನ ಗುರುತಿಸಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಸ್ವಾಮಿ ಮಾತನಾಡಿ, ತೋಟಗಾರಿಕಾ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ನರೇಗಾ ಯೋಜನೆಯಡಿಯೂ ಇಲಾಖೆಯ ಸೌಲಭ್ಯ ಪಡೆದುಕೊಳ್ಳಬಹುದು. ಇಲಾಖೆ ಜೇನು ಕೃಷಿಗೆ ಒತ್ತು ನೀಡುತ್ತಿದ್ದು, ಜೇನು ಕೃಷಿಯನ್ನು ರೈತರು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

       ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಮಾತನಾಡಿ, ನಿಮ್ಮ ಗ್ರಾಮದಲ್ಲಿ ಸರ್ಕಾರಿ ನೌಕರರು, ನಿಗಮ/ಮಂಡಳಿಯ ನೌಕರರು, ಆರ್ಥಿಕವಾಗಿ ಸ್ಥಿತಿವಂತರು, ಕಂಟ್ರಾಕ್ಟ್‍ದಾರರು, ಏಳು ಎಕರೆ ಜಮೀನು ಹೊಂದಿರುವವರು, ವಾರ್ಷಿಕ 1.20ಲಕ್ಷಕ್ಕೂ ಹೆಚ್ಚು ವರಮಾನ ಹೊಂದಿರುವವರು ಇದ್ದು, ಅಂತಹವರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಮಾರ್ಚ್ 31ರೊಳಗೆ ಪಡಿತರ ಚೀಟಿಯನ್ನು ಹಿಂದಿರುಗಿಸಬೇಕು ಎಂದರಲ್ಲದೆ ರೈತರು ರಾಗಿಯನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡಬೇಡಿ. ಮಾ.14ರವರೆಗೆ ರೈತರು ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶವಿದ್ದು, ರಾಗಿ ಖರೀದಿ ಕೇಂದ್ರದಲ್ಲಿಯೇ ಮಾರಾಟ ಮಾಡಿ 3295 ರೂ.ಗಳನ್ನು ಪಡೆಯಿರಿ ಎಂದರು.

       ಶಾಸಕ ವೀರಭದ್ರಯ್ಯ ಮಾತನಾಡಿ, ಗ್ರಾಮ ವಾಸ್ತವ್ಯ ಒಂದು ದಿನದ ಕಾರ್ಯಕ್ರಮವಾಗಬಾರದು. ಪ್ರತಿ ತಿಂಗಳಿಗೊಮ್ಮೆ ನಿರಂತರವಾಗಿ ವಾಸ್ತವ್ಯ ಕಾರ್ಯಕ್ರಮ ನಡೆದರೆ ಆ ಗ್ರಾಮದ ಸಮಸ್ಯೆಗಳು ಬಗೆಹರಿಯಲಿವೆ ಎಂದರು. ಪ್ರತಿ ಗ್ರಾಮದಲ್ಲೂ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ವಿವಿಧ ಪಿಂಚಣಿ ಸೌಲಭ್ಯಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಎಲ್ಲಾ ಅರ್ಹ ಫಲಾನುಭವಿಗಳಿಗೆ ಸೂಕ್ತವಾಗಿ ಪಿಂಚಣಿ ಸಿಗುವ ವ್ಯವಸ್ಥೆ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲಾದ್ಯಂತ ಆಂದೋಲನ ನಡೆಸಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಸಿಗುವಂತಾಗಬೇಕು ಎಂದರು.

      ಸರಿಯಾದ ಸಮಯಕ್ಕೆ ಮಳೆ ಬಾರದೆ ರೈತರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ನೀಡಿದರೆ ಅವರ ಬದುಕು ಸುಧಾರಿಸಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಾಮೀಣ ಭಾಗಕ್ಕೂ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ವಿದ್ಯಾಭ್ಯಾಸಕ್ಕೋಸ್ಕರ ಶಾಲಾ-ಕಾಲೇಜುಗಳು ಕೇಳುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವ ಮತ್ತು ಆಧಾರ್ ಕಾರ್ಡ್ ತಿದ್ದುಪಡಿ ಕಾರ್ಯ ಶೀಘ್ರವಾಗಿ ನಡೆಯಬೇಕು. ಇದರಿಂದ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದರು.

ಪೌತಿ ಖಾತೆಗಳನ್ನು ಮಾಡಿಕೊಡಲು ಹೆಚ್ಚಿನ ಆದ್ಯತೆ ನೀಡಬೇಕು. ಬಗರ್ ಹುಕುಂನಡಿ ಸಾಗುವಳಿ ಚೀಟಿ ನೀಡುವ ಕಾರ್ಯ ಪ್ರಮುಖವಾಗಿ ಕಾರ್ಯಗತವಾಗಲೇಬೇಕು ಎಂದು ಮನವಿ ಮಾಡಿದರು. ಮಧುಗಿರಿ ಕ್ಷೇತ್ರ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದೆ. ಇಲ್ಲಿನ ರೈತರ ಬದುಕು ಮಳೆಯಾಶ್ರಯದ ಮೇಲೆ ನಿಂತಿದ್ದು, ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.
ಕ್ಯಾಪಗೊಂಡನಹಳ್ಳಿಯಲ್ಲಿ ಒಂದು ಸ್ಮಶಾನ ಜಾಗವಿದೆ. ಅದನ್ನು ಗುರುತಿಸಿಕೊಡಬೇಕು. ಆಶ್ರಯ ಯೋಜನೆಯಡಿ 60-70 ಹಳ್ಳಿಯಲ್ಲಿ ಗುರುತಿಸಲಾಗಿರುವ ಭೂಮಿಯ ಜಾಗದ ಗಡಿಯನ್ನು ಗುರುತಿಸಿಕೊಡಬೇಕು. ನಂತರ ಅವುಗಳನ್ನು ಲೇಔಟ್ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅರ್ಹರಿಗೆ ಮನೆ ನೀಡಬೇಕು ಎಂದು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 2600ಕ್ಕೂ ಹೆಚ್ಚು ಗ್ರಾಮಗಳಿದ್ದು, ಎಲ್ಲಾ ಗ್ರಾಮಗಳಿಗೂ ಜಿಲ್ಲಾಧಿಕಾರಿಗಳು ಹೋಗಲು ಸಾಧ್ಯವಿಲ್ಲ. ಆದ್ದರಿಂದ ಸರಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಪ್ರತಿ ತಿಂಗಳ ಮೂರನೆ ಶನಿವಾರ ಗ್ರಾಮವೊಂದರಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅದರಂತೆ ಉಪವಿಭಾಗಧಿಕಾರಿಗಳು ಹಾಗೂ ತಾಲೂಕು ತಹಸೀಲ್ದಾರ್‍ಗಳು ವಾಸ್ತವ್ಯ ಮಾಡಲಿದ್ದಾರೆ. ಸರಕಾರದ ಯೋಜನೆಗಳ ಜಾರಿ, ಅನುಷ್ಠಾನ ಮತ್ತು ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್, ಸಾಮಾಜಿಕ ಭದ್ರತಾ ಯೋಜನೆಯಡಿ ಹೊಸದಾಗಿ ಪಿಂಚಣಿ ಸೌಲಭ್ಯದ ಪಡೆಯಲು ಅರ್ಹತೆ ಪಡೆದ ಫಲಾನುಭವಿಗಳಿಗೆ ಆದೇಶದ ಪ್ರತಿ ಹಾಗೂ ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಕೃಷಿಪರಿಕರಗಳನ್ನು ವಿತರಿಸಲಾಯಿತು.

       ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಿಂದ ಸೌಲಭ್ಯಗಳ ಮಾಹಿತಿ ನೀಡುವ ಮೇಳ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ. ಕೆ.ವಂಶಿಕೃಷ್ಣ, ತಹಸೀಲ್ದಾರ್ ಡಾ|| ಜಿ. ವಿಶ್ವನಾಥ್, ಡಿವೈಎಸ್‍ಪಿ ಬಿ.ಜಿ.ರಾಮಕೃಷ್ಣ, ಉಪವಿಭಾಗಧಿಕಾರಿ ಸೋಮಪ್ಪ, ರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಿರಂಗಣ್ಣ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಸಣ್ಣಮಾದಪ್ಪ, ತಾಪಂ ಸದಸ್ಯೆ ರುದ್ರಮ್ಮ ಈರಣ್ಣ, ಕೆಎಎಸ್ ಪ್ರೊಬೇಷನರಿ ಅಧಿಕಾರಿ ಕಲ್ಯಾಣಿ ಕಂಬಳೆ, ಪ್ರೊಬೇಷನರಿ ಉಪವಿಭಾಗಾಧಿಕಾರಿ ವರ್ಗಿಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು. ಗ್ರಾಮದಲ್ಲಿಯೇ ರಾತ್ರಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದರು.

*ಪೂರ್ಣಕುಂಭದೊಂದಿಗೆ ಸ್ವಾಗತ;*

      ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಧುಗಿರಿ ತಾಲ್ಲೂಕಿನ ಗಡಿ ಗ್ರಾಮವಾದ ಲಕ್ಷ್ಮಿಪುರಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಮತ್ತು ತಂಡವನ್ನು ಗ್ರಾಮದ ಆಂಜನೇಯ ಸ್ವಾಮಿ ಹಾಗೂ ಚೌಡೇಶ್ವರಿ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಬಳಿಕ ಗಿಡ ನೆಡುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಬಂದ ತಕ್ಷಣ ಗ್ರಾಮಸ್ಥರಲ್ಲಿ ಖುಷಿಯ ವಾತಾವರಣ ಕಂಡುಬಂದಿತ್ತು. ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಮ್ಮ ಅಹವಾಲು ಹೇಳಿಕೊಳ್ಳುತ್ತಿದ್ದ ಜನರಿಗೆ, ಜಿಲ್ಲಾಧಿಕಾರಿಯೇ ತಮ್ಮ ಗ್ರಾಮಕ್ಕೆ ಅಹವಾಲು ಕೇಳಲು ಭೇಟಿ ನೀಡಿದಾಗ ಜನರು ಖುಷಿಯಿಂದಲೇ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

 

 

(Visited 16 times, 1 visits today)