‘ಗರ್ಭಿಣಿ ಬಾಲಕಿಯರ ಪುನರ್ವಸತಿಗಾಗಿ ಪ್ರತ್ಯೇಕ ಸಂಸ್ಥೆಗಳ ಪ್ರಾರಂಭಿಸಿ’ – ಡೀಸಿ

ತುಮಕೂರು  : 

     ಲೈಂಗಿಕ ದೌರ್ಜನ್ಯಕ್ಕೊಳಗಾದ ಗರ್ಭಿಣಿ ಬಾಲಕಿಯರ ಪುನರ್ವಸತಿಗಾಗಿ ಪ್ರತ್ಯೇಕ ಸಂಸ್ಥೆಗಳನ್ನು ಪ್ರಾರಂಭಿಸಬೇಕೆಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬುಧವಾರ ಜರುಗಿದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾದ ಅಪ್ರಾಪ್ತ ಬಾಲಕಿಯರನ್ನು ಸರ್ಕಾರಿ ಬಾಲಮಂದಿರ ಅಥವಾ ಸ್ವೀಕಾರ ಕೇಂದ್ರಗಳಲ್ಲಿ ಪಾಲನೆ ಮಾಡುವ ಸಂದರ್ಭ ಬಂದಾಗ ಸಂತ್ರಸ್ತ ಬಾಲಕಿ ಹಾಗೂ ಇತರೆ ಮಕ್ಕಳ ಮೇಲೆ ಮಾನಸಿಕವಾಗಿ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಇಂತಹ ಮಕ್ಕಳ ಪುನರ್ವಸತಿಗಾಗಿ ಪ್ರತ್ಯೇಕ ಪಾಲನಾ ಸಂಸ್ಥೆಗಳನ್ನು ಪ್ರಾರಂಭಿಸುವುದು ಅವಶ್ಯಕವಿದೆ ಎಂದು ತಿಳಿಸಿದರು.

      ಮಕ್ಕಳ ಪಾಲನಾ ಸಂಸ್ಥೆಯ ಜಿಲ್ಲಾ ತನಿಖಾ ಸಮಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯ ಕೆಲವು ಶಾಲಾ ಕಟ್ಟಡಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿರುವ ಹಾಗೂ ಶಾಲೆಗಳ ಆವರಣದಲ್ಲಿ ವಿದ್ಯುತ್ ಪರಿವರ್ತಕಗಳನ್ನು ಸ್ಥಾಪಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರಲ್ಲದೆ ವಿದ್ಯುತ್ ತಂತಿ ಮತ್ತು ಪರಿವರ್ತಕಗಳು ಮಕ್ಕಳಿಗೆ ಅಪಾಯ ತಂದೊಡ್ಡಬಹುದಾದ್ದರಿಂದ ತೆರವುಗೊಳಿಸಲು ಬೆಸ್ಕಾಂ ಸಂಸ್ಥೆಗೆ ಸೂಚಿಸಬೇಕೆಂದು ಮನವಿ ಮಾಡಿದಾಗ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ವಿದ್ಯುತ್ ತಂತಿ ಹಾದು ಹೋಗಿರುವ ಹಾಗೂ ವಿದ್ಯುತ್ ಪರಿವರ್ತಕಗಳಿರುವ ಶಾಲೆಗಳಲ್ಲಿ ಕೂಡಲೇ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ತಿಳಿಸಿದರು.

      ಗ್ರಾಮಪಂಚಾಯತಿ ಮಟ್ಟದಲ್ಲಿ ನಿಗಧಿತ ಅವಧಿಯೊಳಗೆ ಮಕ್ಕಳ ರಕ್ಷಣಾ ಸಮಿತಿ ಸಭೆಯನ್ನು ತಪ್ಪದೇ ನಡೆಸಿ ಮಕ್ಕಳ ಕುಂದು-ಕೊರತೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದರಲ್ಲದೆ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆ ನಡೆಸದ ಚಿಕ್ಕನಾಯಕನಹಳ್ಳಿ ತಾಲೂಕು ತಹಶೀಲ್ದಾರರಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಇನ್ನೆರಡು ದಿನದೊಳಗೆ ಸಭೆ ನಡೆಸಿ ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.

      ಸಭೆಯಲ್ಲಿ ಕಳೆದ ತ್ರೈಮಾಸಿಕದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದ ಪ್ರಕರಣ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಮೂಲಭೂತ ಸೌಕರ್ಯ, ಮಕ್ಕಳ ರಕ್ಷಣಾ ಘಟಕದ ವಿವಿಧ ಯೋಜನೆಗಳ ಪ್ರಗತಿ, ಅರಿವು ಕಾರ್ಯಕ್ರಮ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ, ಮಕ್ಕಳ ರಕ್ಷಣಾ ಸಮಿತಿ ಪ್ರಗತಿ, ದತ್ತು ಕಾರ್ಯಕ್ರಮದ ಪ್ರಗತಿ, ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಡಿವೈಎಸ್‍ಪಿ ಸೂರ್ಯನಾರಾಯಣ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್ ಡಿ.ಬಿ., ಕಾರ್ಮಿಕ ಅಧಿಕಾರಿ ಸುಭಾಷ್ ಎಂ. ಆಲದಕಟ್ಟಿ, ಬಾಲ ನ್ಯಾಯಮಂಡಳಿ ಸದಸ್ಯೆ ಆಶಾ, ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ, ವಿವಿಧ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮತ್ತಿತರರು ಹಾಜರಿದ್ದರು.

(Visited 6 times, 1 visits today)

Related posts

Leave a Comment