ತುಮಕೂರು : 

      ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಇನ್‍ಪೋಸಿಸ್ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಇನ್‍ಪೋಸಿಸ್ ಹೆಡ್ ಸ್ಟಾರ್ಟ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇನ್‍ಪೋಸಿಸ್ ಹೆಡ್ ಸ್ಟಾರ್ಟ್ ಪ್ರೋಗ್ರಾಂ ಮ್ಯಾನೇಜರ್ ಕಿರಣ್ ತಿಳಿಸಿದರು.

      ನಗರದ ರೈಲ್ವೇ ಸ್ಟೇಷನ್ ರಸ್ತೆಯ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಎಚ್.ಡಿ.ಎಸ್.ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಇನ್‍ಪೋಸಿಸ್ ಹೆಡ್ ಸ್ಟಾರ್ಟ್ ವಿದ್ಯಾನಿಕೇತನ’ ಎಂಬ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.

      ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಹಾಗೂ ಬದಲಾವಣೆ ತರುವ ಕಲ್ಪನೆಯೇ ಇನ್‍ಪೋಸಿಸ್ ಸಂಸ್ಥೆಯ ಹೆಡ್ ಸ್ಟಾರ್ಟ್ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ದ್ವಿತೀಯ ಹಾಗೂ ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಈ ಹೆಡ್‍ಸ್ಮಾರ್ಟ್ ಕಾರ್ಯಕ್ರಮವನ್ನು ವಿದ್ಯಾನಿಕೇತನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

      ಹೆಡ್ ಸ್ಟಾರ್ಟ್ ಕಾರ್ಯಕ್ರಮದ ಮೂಲಕ ಮುಂದಿನ ಹತ್ತು ವರ್ಷಗಳಲ್ಲಿ ಒಂದು ಕೋಟಿ ವಿದ್ಯಾರ್ಥಿಗಳಿಗೆ ಡಿಜಿಟಲ್, ಜೀವನ ಹಾಗೂ ಜೀವನ ಪರಿಯಂತ ಬೇಕಿರುವ ಕೌಶಲ್ಯ ತರಬೇತಿ ನೀಡಲಾಗುವುದು. ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಆರನೇ ತರಗತಿಯಿಂದ ಉದ್ಯೋಗ ದೊರಕುವವರೆಗೂ ಅವರು ಆಲೋಚಿಸುವ ಉದ್ಯೋಗಕ್ಕನುಗುಣವಾಗಿ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಒಟ್ಟಾರೆ ವ್ಯಕ್ತಿತ್ವ ಪ್ರಗತಿಗೆ ಪೂರಕವಾಗಿ ತರಬೇತಿ ನೀಡಿ ಅವರನ್ನು ಕೆಲಸಕ್ಕೆ ಅರ್ಹರನ್ನಾಗಿ ಅಣಿಗೊಳಿಸುವುದು ನಮ್ಮ ಧ್ಯೇಯವಾಗಿದೆ ಎಂದು ನುಡಿದರು.

      ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಸ್ಮಾರ್ಟ್‍ಫೋನ್ ಬಳಕೆ ಆರಂಭಿಸುತ್ತಾರೆ. ಆದರೆ, ಸುರಕ್ಷತೆಯಿಂದ ಸ್ಮಾರ್ಟ್‍ಪೋನ್ ಬಳಕೆ ಮಾಡಿ ಸದುಪ ಯೋಗಪಡಿಸಿಕೊಳ್ಳಬೇಕು. ಅಭಿವೃದ್ಧಿಗೆ ಪೂರಕವಾದ ಆಯ್ಕೆಯ ವಿಷಯಗಳನ್ನು ಕಲಿಯಬೇಕು ಎಂದು ತಿಳಿಸಿದರು.

ಕಾರ್ಯದರ್ಶಿ ಡಾ. ಸಿ. ಜಯರಾಮ್‍ರಾವ್ ಮಾತನಾಡಿ, ವಿದ್ಯಾನಿಕೇತನ ಸಂಸ್ಥೆ 50 ವಸಂತಗಳನ್ನು ಪೂರೈಸಿ ಪ್ರಗತಿಯಲ್ಲಿ ಸಾಗುತ್ತಿದೆ. ಸಂಸ್ಥೆಯ ಯಶಸ್ಸಿಗೆ ಹಲವರು ಶ್ರಮಿಸಿದ್ದಾರೆ. ಅದರಲ್ಲೂ ಸಂಸ್ಥೆಯ ಮೂಲಕ ಶಿಕ್ಷಣ ಕೊಡಿಸುತ್ತಿರುವ ಪೋಷಕರ ಪಾತ್ರವೂ ಇದರಲ್ಲಿ ಅಡಗಿದೆ. ಪ್ರಪಂಚ ಬದಲಾದಂತೆ ಸಂಸ್ಥೆಯೂ ಬದಲಾಗುತ್ತಿದೆ. ಡಿಜಿಟಲ್ ಬೇರುಗಳನ್ನು ಗಟ್ಟಿಗೊಳಿಸಲಾಗುತ್ತಿದೆ. ಇನ್‍ಪೋಸಿಸ್ ವಿದ್ಯಾನಿಕೇತನ ಸಂಸ್ಥೆಯ ಜೊತೆಗೆ ಕೈಜೋಡಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಜಗದೀಶ್, ಉಪಾಧ್ಯಕ್ಷ ಮಲ್, ರಾಜೇಶ್ ಹಿರೇಮಠ್ ಸೇರಿದಂತೆ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು, ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಇನ್‍ಪೋಸಿಸ್ ಹೆಡ್ ಸ್ಟಾರ್ಟ್ ಕಾರ್ಯಕ್ರಮದ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಿರಣ್ ತರಬೇತಿ ನೀಡಿದರು.

(Visited 18 times, 1 visits today)