ಕೋವಿಡ್ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಪಾಲನೆಗೆ ಮನವಿ

ತುಮಕೂರು:

     ರಾಜ್ಯದಲ್ಲಿ ಕರೋನ ಸೋಂಕು ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಸೋಂಕನ್ನು ನಿಯಂತ್ರಣದಲ್ಲಿಡಲು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ, ಸಾಮಾಜಿಕ ಅಂತರ(6 ಅಡಿ) ಕಾಪಾಡಿಕೊಳ್ಳುವ, ಪದೇ ಪದೇ ಸಾಬೂನಿನಿಂದ ಕೈ ಸ್ವಚ್ಛ ಮಾಡಿಕೊಳ್ಳುವ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಅಗತ್ಯವಿದ್ದಲ್ಲಿ ಮಾತ್ರ ಹೊರಗೆ ಹೋಗಬೇಕು. ಜನಸಂದಣಿ ಪ್ರದೇಶಗಳಿಗೆ ಅನಗತ್ಯವಾಗಿ ಹೋಗಬಾರದು. ಸಭೆ/ಸಮಾರಂಭ, ಧಾರ್ಮಿಕ ಸಮಾರಂಭಗಳಲ್ಲಿ ಹೆಚ್ಚಾಗಿ ಜನ ಸೇರಬಾರದು. ಹೋಗಲೇಬೇಕಾದ ಸಂದರ್ಭದಲ್ಲಿ ಕಡ್ಡಾಯವಾಗಿ ಕೋವಿಡ್-19ರ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.
ವಿಶೇಷವಾಗಿ ದೀರ್ಘಾವಧಿ ಖಾಯಿಲೆಯಿಂದ ಬಳಲುತ್ತಿರುವವರು, ಬಿ.ಪಿ./ಸಕ್ಕರೆ ಖಾಯಿಲೆ ಉಳ್ಳವರು ಕಡ್ಡಾಯವಾಗಿ ಮನೆಗಳಲ್ಲೆ(ತುರ್ತು ಸಂದರ್ಭ ಹೊರತುಪಡಿಸಿ) ಉಳಿಯಬೇಕು. ಎಲ್ಲಾ 60 ವರ್ಷ ವಯೋಮಾನದವರು ಮತ್ತು 45 ವರ್ಷ ತುಂಬಿದ ದೀರ್ಘಾವಧಿ ಖಾಯಿಲೆ ಉಳ್ಳವರು ಕೋವಿಡ್ ಲಸಿಕೆಯನ್ನು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ತಪ್ಪದೇ ಪಡೆಯಬೇಕು.

      ಅಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದು, ಉಗುಳುವುದರಿಂದ ಕೋವಿಡ್-19 ಸೋಂಕು ಹರಡುವ ಸಾಧ್ಯತೆಯಿದ್ದು, ಧೂಮಪಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ನಿಷೇಧವನ್ನು ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸಲಾಗುವುದು. ಸಾರ್ವಜನಿಕರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಕೋವಿಡ್-19 ಸೋಂಕನ್ನು ತಡೆಯಲು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

(Visited 8 times, 1 visits today)

Related posts

Leave a Comment