ತುಮಕೂರು : 

     ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಕ್ರಾಸ್‍ನಲ್ಲಿ ಮಗುವಿನ ಶವವನ್ನು ಗುಂಡಿಯಿಂದ ಹೊರತೆಗೆಸಿ ಬೇರೆಡೆ ಶವ ಸಂಸ್ಕಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯ ಹಾಗೂ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ ಅವರು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ಪರಿಹಾರ ವಿತರಿಸಿದರು.

      ಮೊದಲು ಮಗುವಿನ ಶವ ಹೊರತೆಗೆದ ಜಾಗಕ್ಕೆ ಭೇಟಿ ನೀಡಿದ ಅವರು, ಬಳಿಕ ಬೇರೆ ಕಡೆ ಶವಸಂಸ್ಕಾರ ಮಾಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳದಲ್ಲೇ ಅಧಿಕಾರಿಗಳಿಗೆ ಈ ಸ್ಥಳದ ಸರ್ವೆ ವರದಿಯನ್ನು ತಕ್ಷಣವೇ ನೀಡಬೇಕು ಎಂದು ಅವರು ಸೂಚಿಸಿದರು.

      ಬಳಿಕ ಶವಸಂಸ್ಕಾರದ ಮಗುವಿನ ಶವ ಹೊರತೆಗೆಸಿ ಬೇರೆಡೆ ಶವಸಂಸ್ಕಾರ ನಡೆಸಿದ ಘಟನೆಗೆ ವಿಷಾದ ವ್ಯಕ್ತಪಡಿಸಿ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿ, ಕುಟುಂಬಕ್ಕೆ ಮನೆ ಇಲ್ಲದಿರುವುದನ್ನು ಕಂಡು ಮನೆ ಮಂಜೂರಾತಿ ಪತ್ರ ಕೊಡಿಸಿದರು. ಬಳಿಕ ಎತ್ತಿನಹೊಳೆ ಕಾಮಗಾರಿಯ ಸ್ಪೋಟದಿಂದಾಗಿ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ ಜನರ ಅಹವಾಲು ಆಲಿಸಿದರು.

      ಆನಂತರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕಂದಾಯ, ಪೊಲೀಸ್, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ಅವರು, ತಾಲೂಕಿನ ಎಸ್‍ಸಿ, ಎಸ್ಟಿ ಜನಾಂಗದವರಿಗೆ ಸ್ಮಶಾನಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಎಸ್‍ಸಿ, ಎಸ್‍ಟಿ ಜನಾಂಗದವರಿಗೆ ಆಗುತ್ತಿರುವ ತೊಂದರೆ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸುವಂತೆ ನಿರ್ದೇಶಿಸಿದರು.
ಶವಸಂಸ್ಕಾರವಾದ ಮಗುವಿನ ಶವ ತೆಗೆದು ಬೇರೆಡೆ ಸಂಸ್ಕಾರ ಮಾಡಿರುವ ಘಟನೆ ನಡೆದಿರುವುದು ಶೋಚನೀಯ. ಇಂತಹ ಘಟನೆ ತಾಲೂಕಿನಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿಯೂ ಘಟಿಸಬಾರದು ಎಂದು ಹೇಳಿದರು.
ದಲಿತರು ದೇವಸ್ಥಾನ ಒಳಗಡೆ ಹೋಗಬಾರದೆಂಬ ಅನಿಷ್ಟ ಪದ್ಧತಿ ಇದ್ದರೆ, ಅದನ್ನು ತೊಡೆದು ಹಾಕಬೇಕು. ತಾಲೂಕಿನಲ್ಲಿ 232 ಗ್ರಾಮಗಳ ಪೈಕಿ 218 ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನವಿದ್ದು, ಎಲ್ಲಾ ಸಮುದಾಯದವರು ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ 42 ಹಳ್ಳಿಗಳಲ್ಲಿ ಮಾತ್ರ ದಲಿತರಿಗೆ ಸ್ಮಶಾನ ನೀಡಲಾಗುತ್ತಿದೆ. ಉಳಿದ ಹಳ್ಳಿಗಳಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯವಿದ್ದರೆ, ಅಲ್ಲಿಯೂ ಸ್ಮಶಾನ ಸ್ಥಳ ಗುರುತಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮಾತನಾಡಿ, ಘಟನೆ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದೆ. ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದೆ ಎಂದು ತಿಳಿಸಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಸದಸ್ಯರು ಹಾಗೂ ಕಾರ್ಯದರ್ಶಿಗಳು ಜಂಪೇನಹಳ್ಳಿ ಕ್ರಾಸ್‍ನಲ್ಲಿ ಜಮೀನಿನ ಮಾಲೀಕರು ಶವ ಸಂಸ್ಕಾರ ಮಾಡಲು ಅವಕಾಶ ನೀಡದಿರುವುದು ನಾಗರಿಕರ ಸಮಾಜ ಇದನ್ನು ಒಪ್ಪುವುದಿಲ್ಲ. ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದರು.
ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಮತ್ತು ಸರ್ಕಾರದಿಂದ ಸಿಗುವ ಸವಲತ್ತು ಒದಗಿಸಲು ಹಾಗೂ ಪರಿಶಿಷ್ಟ ಜಾತಿ ವರ್ಗಗಳ ಸಮಸ್ಯೆಗಳನ್ನು ಆಲಿಸಿ ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲು ಭೇಟಿ ನೀಡಿದ್ದೇನೆ. ಅಹಿತಕರ ಘಟನೆ ನಡೆದ ಸ್ಥಳದ ಮಾಲೀಕರ ಜೊತೆ ಮಾತನಾಡಿದ್ದೇನೆ. ನದಿ ತೀರದ ಪ್ರದೇಶವಾಗಿರುವುದರಿಂದ ಅಲ್ಲಿ ಸ್ವಲ್ಪ ಜಾಗ ಕೊಟ್ಟರೆ ನೊಂದ ಕುಟುಂಬಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಪರಾಮರ್ಶೆ ಮಾಡಲಾಗಿದೆ ಎಂದು ಹೇಳಿದರು.
ಕೊರಟಗೆರೆಯಲ್ಲಿ 252 ಹಳ್ಳಿಗಳಿವೆ. ಅದರಲ್ಲಿ 221 ಹಳ್ಳಿಗಳಲ್ಲಿ ಸ್ಮಶಾನವಿದೆ. ಈ ಪೈಕಿ 42 ಸ್ಮಶಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಇತರೆಡೆ ಸ್ಮಶಾನ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಸಂಸ್ಕಾರವಾದ ಶವ ಹೊರತೆಗೆದು ಬೇರೆಡೆ ಸಂಸ್ಕಾರ ಮಾಡಿದ ಘಟನೆ ಸ್ಥಳ ಮತ್ತು ನೊಂದ ಕುಟುಂಬದ ಮನೆಗೆ ಭೇಟಿ ನೀಡಿದ್ದೇನೆ. ಸರ್ಕಾರದಿಂದ ಮನೆ ಕಟ್ಟಿಕೊಳ್ಳಲು ಆದೇಶ ಪತ್ರ ಕೊಡಿಸಿದ್ದೇನೆ. ಎತ್ತಿನಹೊಳೆ ಕಾಮಗಾರಿ ಹಿನ್ನೆಲೆಯ ಸ್ಪೋಟದಿಂದ ಆಘಾತವಾಗಿ ಮಗು ತೀರಿಕೊಂಡಿದೆ ಎಂದು ಪೋಷಕರು ತಿಳಿಸಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ನೊಂದ ಕುಟುಂಬಕ್ಕೆ ಎತ್ತಿನಹೊಳೆ ನಿರ್ಮಾಣ ಮಾಡುತ್ತಿರುವ ಏಜೆನ್ಸಿಯವರು 1 ಲಕ್ಷ ರೂ. ಪರಿಹಾರ ನೀಡಲು ಮುಂದೆ ಬಂದಿದ್ದಾರೆ. ಸಮಾಜ ಕಲ್ಯಾಣ ಮತ್ತು ಸಾರ್ವಜನಿಕರಿಂದ ದೇಣಿಯಾಗಿ 10 ಸಾವಿರ ನೆರವು ನೀಡಲಾಗಿದೆ. 50 ಕೆ.ಜಿ ಅಕ್ಕಿ, ರಾಗಿ, ಗೋಧಿ ತಲುಪಿಸಿದ್ದೇವೆ ಎಂದರು.
ಶವ ಸಂಸ್ಕಾರ ಮಾಡಿದ ಜಾಗವು ಖಾಸಗಿ ಮಾಲೀಕರಿಗೆ ನದಿ ತೀರವೇ ಅಥವಾ ಸರ್ಕಾರಕ್ಕೆ ಸೇರಿದ್ದೇ ಎಂಬುದರ ಬಗ್ಗೆ ಸರ್ವೇ ಮಾಡಿಸಲಾಗುತ್ತಿದ್ದು, ಎರಡ್ಮೂರು ದಿನಗಳಲ್ಲಿ ತಿಳಿಯಲಿದೆ ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಅವರು ತಿಳಿಸಿದರು.
2002ರಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ರಚನೆಯಾಗಿದೆ. ಭಾರತದ ಸಂವಿಧಾನ ಪ್ರಕಾರ ಪರಿಶಿಷ್ಟ ಜಾತಿ ವರ್ಗಗಳ ಜನರಿಗೆ ತೊಂದರೆಯಾದರೆ ಅದನ್ನು ಪರಾಮರ್ಶಿಸುವ ಮತ್ತು ಅದಕ್ಕೆ ಸೂಕ್ತ ಪರಿಹಾ ಕಂಡು ಹಿಡಿದು ಸರ್ಕಾರಕ್ಕೆ ವರದಿ ಸಲ್ಲಿಸುವುದು ಆಯೋಗದ ಕೆಲಸವಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ವೈ.ಹೆಚ್.ಹುಚ್ಚಯ್ಯ, ತಾ.ಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷೆ ವೆಂಕಟಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ತಾಲೂಕು ತಹಶೀಲ್ದಾರ್ ಗೋವಿಂದರಾಜು, ಎತ್ತಿನಹೊಳೆಯ ಇಂಜಿನಿಯರ್‍ಗಳಾದ ಗುರುದತ್, ಸುಧಾಕರ್, ದಲಿತ ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.

(Visited 10 times, 1 visits today)