ತುಮಕೂರು : 

      ಜ್ವರ, ಕೆಮ್ಮು, ನೆಗಡಿಯಂತಹ ರೋಗ ಲಕ್ಷಣಗಳಿರುವವರು ಯಾವುದೇ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬಂದಾಗ ಮತ್ತು ಸಮುದಾಯದಲ್ಲಿ ಇಂತಹ ರೋಗ ಲಕ್ಷಣಗಳಿರುವವರು ಕಂಡು ಬಂದಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಡಿಸಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸೂಚನೆ ನೀಡಿದರು.

      ಜಿಲ್ಲೆಯ ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡೀಯೋ ಕಾನ್ಫರೆನ್ಸ್ ಹಾಲ್‍ನಲ್ಲಿಂದು ವಿವಿಧ ತಾಲೂಕಿನ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, ಜ್ವರ, ನೆಗಡಿಯಂತಹ ರೋಗ ಲಕ್ಷಣಗಳು ಕಂಡು ಬಂದವರಲ್ಲದೆ ಕೋವಿಡ್ ಸೋಂಕಿತರೆಂದು ಧೃಡಪಟ್ಟವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನೂ ಸಹ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಡಿಸಬೇಕೆಂದರು.

      ಮುನ್ನಚ್ಚರಿಕಾ ಕ್ರಮವಾಗಿ ಈ ಹಿಂದೆ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ತೆರೆಯಲಾಗಿದ್ದ ಎಲ್ಲಾ ತಾಲೂಕಿನ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರಲ್ಲದೇ ಏಪ್ರಿಲ್ 1ರ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ 45 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಕೋವಿಡ್ ಲಸಿಕೆಯನ್ನು ತಪ್ಪದೇ ನೀಡಬೇಕು. ಸಮೀಪದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಉಚಿತ ಲಸಿಕೆ ನೀಡುವ ಬಗ್ಗೆ ಸಾರ್ವಜನಿಕರಲ್ಲಿ ಪ್ರಚುರಪಡಿಸಬೇಕು ಹಾಗೂ ಲಸಿಕೆ ಪಡೆಯಲು ಅವರನ್ನು ಪ್ರೇರೇಪಿಸಬೇಕೆಂದು ನಿರ್ದೇಶನ ನೀಡಿದರು.

      ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಮುಂದಿನ ಹಂತದಲ್ಲಿ ಉಪ ಆರೋಗ್ಯ ಕೇಂದ್ರಗಳಲ್ಲಿಯೂ ಉಚಿತ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದೆಂದರು.
ಈಗಾಗಲೇ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರು, ವಿವಿಧ ಇಲಾಖೆಗಳ ಫ್ರಂಟ್‍ಲೈನ್ ವರ್ಕರ್‍ಗಳು ಕಡ್ಡಾಯವಾಗಿ 2ನೇ ಡೋಸ್ ಲಸಿಕೆಯನ್ನು ಪಡೆಯಬೇಕು. ತಂತ್ರಾಂಶದ ದೋಷದಿಂದ ಅಲರ್ಟ್ ಮೆಸೇಜ್ ಬರದಿದ್ದರೂ ಮೊದಲನೇ ಡೋಸ್ ಪಡೆದು 28 ದಿನಗಳು ಕಳೆದ ಮೇಲೆ ಕಡ್ಡಾಯವಾಗಿ 2ನೇ ಡೋಸ್ ಲಸಿಕೆ ಪಡೆಯಬೇಕೆಂದು ಸೂಚನೆ ನೀಡಿದರು.

     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಮಾತನಾಡಿ, ಈಗಾಗಲೇ ಮೊದಲನೇ ಡೋಸ್ ಲಸಿಕೆ ಪಡೆದ 19108 ಆರೋಗ್ಯ ಕಾರ್ಯಕರ್ತರು ಹಾಗೂ 11486 ಫ್ರಂಟ್‍ಲೈನ್ ವರ್ಕರ್‍ಗಳ ಪೈಕಿ 14677 ಆರೋಗ್ಯ ಕಾರ್ಯಕರ್ತರು ಹಾಗೂ 4673 ಫ್ರಂಟ್‍ಲೈನ್ ವರ್ಕರ್‍ಗಳು ಮಾತ್ರ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಉಳಿದವರು ಕೂಡಲೇ 2ನೇ ಡೋಸ್ ಲಸಿಕೆ ಪಡೆಯಬೇಕೆಂದು ತಿಳಿಸಿದರು.

       ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ|| ಮೋಹನ್‍ದಾಸ್, ಆರ್‍ಸಿಹೆಚ್ ಅಧಿಕಾರಿ ಡಾ|| ಕೇಶವ್‍ರಾಜ್ ಸೇರಿದಂತೆ ಮತ್ತಿತರು ಹಾಜರಿದ್ದರು.

 

 

(Visited 4 times, 1 visits today)