ತುಮಕೂರು : 

      ನಗರದ ಕೋತಿತೋಪು-ಬೆಳಗುಂಬ ರಸ್ತೆಯಲ್ಲಿ ಬೆಳ್ಳಂಬೆಳ್ಳಿಗೆ ಜೆಸಿಬಿ ಯಂತ್ರಗಳು ಸದ್ದು ಮಾಡಿದ್ದು, ಅನಧಿಕೃತವಾಗಿ ರಸ್ತೆ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಪಾಲಿಕೆ ವತಿಯಿಂದ ಪೆÇಲೀಸ್ ಬಂದೋಬಸ್ತ್‍ನೊಂದಿಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

     ಕೋತಿತೋಪು ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಪೆಟ್ಟಿಗೆ ಅಂಗಡಿಗಳು, ಕಾಪೌಂಡ್‍ಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ನಗರದಲ್ಲಿ ಸ್ಮಾರ್ಟ್‍ಸಿಟಿ ಸೇರಿದಂತೆ ವಿವಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ವಾರ್ಡ್‍ಗಳು, ಬಡಾವಣೆಗಳಲ್ಲಿ ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಒತ್ತುವರಿ ತೆರವು ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ಮುಂದಾಗಿದೆ.

       ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕೋತಿತೋಪು-ಬೆಳಗುಂಬ ರಸ್ತೆಯಲ್ಲಿ ಪಾಲಿಕೆ ಅಧಿಕಾರಿಗಳು ರಸ್ತೆಯ ಎರಡೂ ಬದಿಯಲ್ಲಿ ಒತ್ತುವರಿಯಾಗಿರುವ ಜಾಗವನ್ನು ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಈ ರಸ್ತೆ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಸಂಪರ್ಕ ಹೊಂದಿರುವುದರಿಂದ ಸ್ಮಾರ್ಟ್‍ಸಿಟಿ ವತಿಯಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸಲಾಗುತ್ತಿದೆ ಎಂದರು.

ಕೋತಿತೋಪು-ಬೆಳಗುಂಬ ರಸ್ತೆಯ ಇಕ್ಕೆಲಗಳಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಡು ಕೆಲವರು ಮನೆ, ಕಾಂಪೌಂಡ್‍ಗಳನ್ನು ನಿರ್ಮಿಸಿಕೊಂಡಿದ್ದರು. ರಸ್ತೆ ಅಭಿವೃದ್ಧಿ ಉದ್ದೇಶದಿಂದ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.

    ಈ ಭಾಗದ ಸಾರ್ವಜನಿಕರು ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ಮಾತನಾಡಿ, ಬೆಳಗುಂಬ-ಕೋತಿತೋಪು ರಸ್ತೆಯನ್ನು ಸ್ಮಾರ್ಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಈ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪೆÇಲೀಸರ ಸಹಕಾರದೊಂದಿಗೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ನಡೆದಿದೆ ಎಂದರು. ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆಯಿಂದ ತಮ್ಮಯ್ಯ ಆಸ್ಪತ್ರೆವರೆಗೆ ಒತ್ತುವರಿ ತೆರವುಗೊಳಿಸಲು ಕೆಲವು ಅಡೆತಡೆಗಳಿದ್ದವು. ಈಗ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಈ ಅಡೆತಡೆಗಳನ್ನು ನಿವಾರಿಸಿ ಒತ್ತುವರಿ ತೆರವು ನಡೆಸಲಾಗುತ್ತಿದೆ ಎಂದು ಹೇಳಿದರು. ಸಾರ್ವಜನಿಕರು ಪರ ಮತ್ತು ವಿರೋಧದ ನಡುವೆಯೂ ಪಾಲಿಕೆ ಅಧಿಕಾರಿಗಳು ನಗರದ ವಿವಿಧೆಡೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿರುವುದು ನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಠಿಯಿಂದ ಉತ್ತಮ ಕಾರ್ಯವಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

     ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀನಿವಾಸ್, ನಗರ ಸಿಪಿಐ ನವೀನ್, ನಗರಠಾಣೆ ಪಿಎಸ್‍ಐ ಮಂಜುನಾಥ್ ಹಾಗೂ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

(Visited 42 times, 1 visits today)