ತುಮಕೂರು :

      ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ಪಂಚಾಯತ್ ನ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿಂದು ಕೋವಿಡ್- 2ನೇ ಅಲೆ ಹರಡುವಿಕೆ ನಿಯಂತ್ರಿಸುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ನಾಳೆಯಿಂದಲೇ ಸಭೆ-ಸಮಾರಂಭ ಜಾತ್ರೆ, ಸಂತೆ ರದ್ದು:

ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಭೆ-ಸಮಾರಂಭ, ಆರ್ಕೆಸ್ಟ್ರಾ ಹಾಗೂ ಜಾತ್ರೆಗಳ ಆಚರಣೆ ಹಾಗೂ ಸಂತೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಆದೇಶ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತಹಶೀಲ್ದಾರ್‍ಗಳು ಕಾರ್ಯೊನ್ಮುಖರಾಗಬೇಕು ಎಂದು ನಿರ್ದೇಶಿಸಿದರು.

ಅದ್ದೂರಿ ಮದುವೆಗೆ ಕಡಿವಾಣ:

       ಅದ್ದೂರಿ ಮದುವೆಗಳನ್ನು ಮಾಡಬಾರದು. ಈಗಾಗಲೇ ಕಲ್ಯಾಣ ಮಂಟಪಗಳಲ್ಲಿ ನಿಗದಿಯಾಗಿರುವ ಮದುವೆಗಳಲ್ಲಿ 200 ಕ್ಕಿಂತ ಹೆಚ್ಚು ಜನ ಸೇರಬಾರದು. ಬಂಧು-ಬಳಗದ ಮಂದಿಯಷ್ಟೆ ಮದುವೆ ಮಾಡಿಕೊಳ್ಳಬೇಕು. ನಿಯಮ ಮೀರಿ ಅದ್ದೂರಿ ಮದುವೆ ಮಾಡುವ 200ಕ್ಕಿಂತ ಹೆಚ್ಚು ಮಂದಿ ಸೇರುವ ಮದುವೆಯಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಲಸಿಕೆ:

      ಕೋವಿಡ್ ನಿಯಂತ್ರಣದ ಸಲುವಾಗಿ, ಕೇಂದ್ರ ಸರ್ಕಾರದ ಮಾರ್ಗ ಸೂಚಿ ಅನ್ವಯ ಏಪ್ರಿಲ್ 1ರಿಂದ ಜಿಲ್ಲೆಯಲ್ಲಿ ಕಡ್ಡಾಯವಾಗಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕು. ಸಾರ್ವಜನಿಕರೂ ಇದಕ್ಕೆ ಸಹಕಾರ ನೀಡಿ ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಮನೆ ಮನೆ ಸರ್ವೆ ಆಗಬೇಕು:

      ಆಶಾ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆರಿಂದ ಮನೆ ಮನೆ ಸರ್ವೇ ಮಾಡಿಸಬೇಕು. ಕೊರೋನಾ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕು. 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಅಧಿಕಾರಿಗಳು ಸಿದ್ಧರಾಗಿರಿ:

      ತಾಲೂಕು ದಂಡಾಧಿಕಾರಿ, ವೈದ್ಯರು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ನಿಯಂತ್ರಣಕ್ಕೆ ಸದಾ ಸಿದ್ದರಿರಬೇಕು. ತಹಸೀಲ್ದಾರ್ ಗಳು ಸ್ಥಳೀಯ ಶಾಸಕರ ನೇತೃತ್ವ ಸಭೆ ನಡೆಸಿ ಕೋವಿಡ್ ನಿಯಂತ್ರಣದ ಕುರಿತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಪಡಿತರ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಿ:

        ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಪಡಿತರ ವಿತರಿಸುವಾಗ ಕೋವಿಡ್-19 ಮಾರ್ಗಸೂಚಿಯನ್ನು ಪಾಲಿಸಬೇಕು. ಒಂದೆಡೆ ವಿತರಿಸದೆ ಎರಡು ಮೂರು ಕಡೆ ಪಡಿತರ ನೀಡಲು ವ್ಯವಸ್ಥೆ ಮಾಡಬೇಕು. ಪಿಡಿಒಗಳು ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ಕೆಲಸ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಸೂಚನೆ ನೀಡುವಂತೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರಸ್ವಾಮಿ ಅವರಿಗೆ ನಿರ್ದೇಶಿಸಿದರು.

ಮಾತ್ರೆಗಳನ್ನು ನೀಡದಂತೆ ಸೂಚನೆ:

      ವೈದ್ಯರ ಚೀಟಿಯಿಲ್ಲದೇ ಮೆಡಿಕಲ್ ಗಳಲ್ಲಿ ಜ್ವರ, ಕೆಮ್ಮು, ನೆಗಡಿಗೆ ಮಾತ್ರೆ ಮತ್ತು ಔಷಧ ನೀಡದಂತೆ ಸೂಚನೆ ನೀಡಬೇಕು. ಕೋವಿಡ್ ತಪಾಸಣೆ ಹೆಚ್ಚಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡಬೇಕು ಎಂದು ಹೇಳಿದರು.

144ಜಾರಿಗೆ ಸೂಚನೆ:

      ಜಿಲ್ಲೆಯಲ್ಲಿ ಕಲಂ 144 ಜಾರಿ ಮಾಡಿದ್ದು, ಸಭೆ, ಸಮಾರಂಭ, ಜಾತ್ರೆ, ಆರ್ಕೆಸ್ಟ್ರಾ, ಮದುವೆ, ನಾಟಕಗಳಲ್ಲಿ ಹೆಚ್ಚಿನ ಜನ ಸೇರಬಾರದೆಂಬ ಕಾರಣಕ್ಕೆ ಜಾರಿ ಮಾಡಲಾಗಿದೆ. ಇದರಲ್ಲಿ ಕ್ರಿಮಿನಲ್ ಪ್ರಕರಣ ಒಳಪಡುವುದಿಲ್ಲ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಜಿ.ಬಿ.ಜ್ಯೋತಿಗಣೇಶ್, ಡಿ.ಸಿ.ಗೌರಿಶಂಕರ್, ವೆಂಕಟರಮಣಪ್ಪ, ಎಂ.ವಿ.ವೀರಭದ್ರಯ್ಯ, ರಾಜೇಶ್‍ಗೌಡ, ಚಿದಾನಂದ್ ಎಂ.ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ಗಂಗಾಧರಸ್ವಾಮಿ, ಎಸ್ಪಿ ಡಾ|| ಕೋನವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಡಿಹೆಚ್‍ಒ ಡಾ|| ನಾಗೇಂದ್ರಪ್ಪ, ಜಿಲ್ಲಾ ಸರ್ಜನ್ ಡಾ|| ಸುರೇಶ್‍ಬಾಬು, ಎಲ್ಲಾ ತಾಲೂಕಿನ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು, ಆರೋಗ್ಯ ಇಲಾಕೆಯ ವೈದ್ಯರು, ಸೇರಿದಂತೆ ಮತ್ತಿತರು ಹಾಜರಿದ್ದರು.

(Visited 37 times, 1 visits today)