ಹುಳಿಯಾರು:

ಪಟ್ಟಣದ ಪ್ರಖ್ಯಾತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಓದಿದ ಪಠ್ಯ, ಬರೆಯುವ ಪರೀಕ್ಷೆ, ಪಡೆಯುವ ಪದವಿಯನ್ನೇ ಹಳ್ಳಿ ವಿದ್ಯಾರ್ಥಿಗಳೂ ಪಡೆಯುತ್ತಾರೆ. ಆದರೂ ಹಳ್ಳಿ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇದೆ. ಇದನ್ನು ಬಿಟ್ಟು ಮುನ್ನುಗ್ಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‍ಗಳ ವಿತರಣೆ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೊರೊನಾ ಅಲೆಯಿಂದಾಗಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಅನಿವಾರ್ಯವಾಗಿದೆ. ಹಾಗಾಗಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಆನ್‍ಲೈನ್ ಶಿಕ್ಷಣಕ್ಕೆ ನೆರವಾಗಲೆಂದು ಆರ್ಥಿಕ ಸಂಕಷ್ಟದಲ್ಲೂ 165 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 1.58 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‍ಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಚಾಟಿಂಗ್ ಮಾಡಿ ಕಾಲಾಹರಣಕ್ಕೆ ಟ್ಯಾಬ್‍ಗಳನ್ನು ಬಳಸದೆ ಜ್ಞಾನಾರ್ಜನೆಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಲು ಶಿಕ್ಷಣ ಕೊಡುತ್ತಿದ್ದೇವೆ. ಪರೀಕ್ಷೆಗಾಗಿ ಓದದೆ ಜ್ಞಾನ ಸಂಪಾದನೆಗಾಗಿ ವಿದ್ಯಾರ್ಥಿಗಳು ಓದಬೇಕಿದೆ. ವಿಷಯದ ಬಗ್ಗೆ ಸಮಗ್ರವಾದ ಆಧ್ಯಯನ ಮಾಡಬೇಕು. ಅರ್ಥ ಮಾಡಿಕೊಂಡು ಓದಬೇಕು. ಮೇದಾವಿಗಳ ಉಪನ್ಯಾಸ ಮಾಲಿಕೆಗಳನ್ನು ಟ್ಯಾಬ್ಲೆಟ್‍ಗಳಲ್ಲಿ ಲೋಡ್ ಮಾಡಿದ್ದು ನಿಮ್ಮ ಬುದ್ದಿಶಕ್ತಿ ಹೆಚ್ಚು ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಡಾ.ಲೋಕೇಶ್‍ನಾಯ್ಕ, ಉಪನ್ಯಾಸಕರುಗಳಾದ ಮೋಹನ್, ವಲಿ, ಸುಷ್ಮಾಬೀರಾದಾರ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ, ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್, ಹಿರಿಯ ವಿದ್ಯಾರ್ಥಿಗಳ ಸಂಘದ ಕೆಂಕೆರೆ ನವೀನ್ ಇದ್ದರು.

(Visited 8 times, 1 visits today)