ಜಿಲ್ಲೆಯಲ್ಲಿ ಮಾದರಿ ಮಮತೆಯ ತೊಟ್ಟಿಲು ನಿರ್ಮಿಸಿ: ಡಿಸಿ ರಾಕೇಶ್ ಕುಮಾರ್

ತುಮಕೂರು:

      ಪರಿತ್ಯಕ್ತ ಮಕ್ಕಳಿಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾದರಿ ಮಮತೆಯ ತೊಟ್ಟಿಲನ್ನು ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲಾ ಮಟ್ಟದ ಸಮಿತಿ ಸಭೆ, ಮಕ್ಕಳ ರಕ್ಷಣಾ ಸಮಿತಿ ಹಾಗೂ ಮಕ್ಕಳ ಸಹಾಯವಾಣಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

      ಪರಿತ್ಯಕ್ತ ಮಕ್ಕಳನ್ನು ವಶಕ್ಕೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜಿಲ್ಲೆಯ 170 ಸ್ಥಳಗಳಲ್ಲಿ ಮಮತೆಯ ತೊಟ್ಟಿಲನ್ನು ಈಗಾಗಲೇ ಆರಂಭಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತವಾದ ಸುರಕ್ಷತೆ ಮಾದರಿ ಮಮತೆಯ ತೊಟ್ಟಿಲನ್ನು ನಿರ್ಮಾಣ ಮಾಡಿ ಮುಂದಿನ ಸಭೆಯ ಹೊತ್ತಿಗೆ ವರದಿ ನೀಡುವಂತೆ ಅವರು ಸೂಚಿಸಿದರು.

      ಜಿಲ್ಲೆಯಲ್ಲಿ ಇಲ್ಲಿಯವರೆಗೂ 137 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 23 ಪ್ರಕರಣಗಳು ಖುಲಾಸೆಯಾಗಿ 114 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ಪ್ರಕರಣಗಳ ಇತ್ಯಥ್ಯಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

       ಹೆಚ್.ಐ.ವಿ. ಬಾಧಿತ ಪೋಷಕರು ಹಾಗೂ ಮಕ್ಕಳಿಗೆ ಜಿಲ್ಲೆಯ ತಪಾಸಣಾ ಕೇಂದ್ರಗಳಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿರುವ ಬಗ್ಗೆ ಹಾಗೂ ಪ್ರತಿ ತಿಂಗಳು ತಪಾಸಣೆಗೆ ಆಗಮಿಸುತ್ತಿರುವ ಬಗ್ಗೆ ವರದಿ ನೀಡುವಂತೆ ಡಿ.ಹೆಚ್.ಓ. ಅವರಿಗೆ ನಿರ್ದೇಶನ ನೀಡಿದರು.

       ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಮಾದಕ ವಸ್ತು ಸೇವನೆ, ಲೈಂಗಿಕ ದೌರ್ಜನ್ಯ ಮತ್ತಿತರ ವಿಷಯಗಳ ಬಗ್ಗೆ ಜಿಲ್ಲೆಯಲ್ಲಿರುವ ಪಿಯುಸಿ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಮೂಡಿಸಬೇಕು. ಇದಕ್ಕಾಗಿ ವೈದ್ಯರು, ಮನಶಾಸ್ತ್ರಜ್ಞರು, ಪೊಲೀಸ್‍ರನ್ನು ಒಳಗೊಂಡಂತೆ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿ ಕ್ರಿಯಾ ಯೋಜನೆ ತಯಾರಿಸುವಂತೆ ಅವರು ಸೂಚಿಸಿದರು.

       ಬಾಲ್ಯ ವಿವಾಹ, ಮಕ್ಕಳ ರಕ್ಷಣೆ, ಮತ್ತಿತರ ಪ್ರಕರಣಗಳಲ್ಲಿ ಜಿಲ್ಲಾ ಮಟ್ಟದ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪ್ರಕರಣಗಳ ತೀವ್ರತೆಯನ್ನು ಆಧರಿಸಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

       ಮಕ್ಕಳ ಸಹಾಯವಾಣಿ 1098 ಬಗ್ಗೆ ವ್ಯಾಪಕ ಪ್ರಚಾರ ನೀಡಲು ಪ್ರಚಾರ ಫಲಕವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಪ್ರದರ್ಶಿಸುವಂತೆ ಸೂಚನೆ ನೀಡಲಾಗುವುದು ಎಂದು ಅವರು ಸೂಚಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ: ಶೋಭಾರಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಟರಾಜು, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಡಿಹೆಚ್‍ಓ ಡಾ: ಚಂದ್ರಿಕಾ, ಮತ್ತಿತರರು ಇಲಾಖಾಧಿಕಾರಿಗಳು ಹಾಜರಿದ್ದರು.

(Visited 13 times, 1 visits today)

Related posts

Leave a Comment